ಶಿವಮೊಗ್ಗ: ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ಘೋಷಿಸಿದ್ದರು. ಇವರ ಜನ್ಮ ದಿನದಂದೇ ನನ್ನ ಯುವಕ ಯುವತಿಯರು ಭ್ರಮನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಯುವನಿಧಿ (Yuva Nidhi Scheme) ಜಾರಿ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರದ ಐತಿಹಾಸಿಕ ಗ್ಯಾರಂಟಿ “ಯುವನಿಧಿ” ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸುರ್ಜೇವಾಲ ಅವರು ಚುನಾವಣಾ ಪೂರ್ಣ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆ ಹೆಚ್ಚಾಗಿ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರಿರುವ ಸಂದರ್ಭದಲ್ಲಿ ಸಮಾಜದ ಎಲ್ಲ ವರ್ಗಗಳ ಸಮಸ್ಯೆಗೆ ಪರಿಹಾರವಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆವು. ಪ್ರಣಾಳಿಕೆಯಲ್ಲಿ ಘೋಷಿಸಿದೆವು. ಘೋಷಿಸಿದಂತೆ ಜಾರಿ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನುಡಿದಂತೆ ನಡೆದ ಸರ್ಕಾರ
ಮೊದಲ ಗ್ಯಾರಂಟಿ ಯೋಜನೆಯಿಂದಾಗಿ 130 ಕೋಟಿ 28 ಲಕ್ಷ ಮಹಿಳೆಯರು, ಯುವತಿಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. 1 ಕೋಟಿ 65 ಲಕ್ಷ ಕುಟುಂಬಗಳಿಗೆ ಉಚಿತವಾಗಿ 200 ಯುನಿಟ್‌ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಈ ಕೋಟಿ ಕುಟುಂಬಗಳು ನಯಾಪೈಸೆ ವಿದ್ಯುತ್ ಬಿಲ್ ಕಟ್ಟುವ ಹಾಗಿಲ್ಲ. ಇದೇ ರೀತಿ 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಯ ಹಣವನ್ನು ಪ್ರತಿ ಕುಟುಂಬಗಳಿಗೆ ಕೊಡುತ್ತಿದ್ದೇವೆ. 1 ಕೋಟಿ 17 ಲಕ್ಷ ಮಹಿಳೆಯರಿಗೆ, ಯುವತಿಯರಿಗೆ ಪ್ರತಿ ತಿಂಗಳು 2000 ರೂ. ತಲುಪಿಸುತ್ತಿದ್ದೇವೆ. ಇಂಥ ಸಾಧನೆಯು ಈ ಹಿಂದೆ ಯಾವ ಕಾಲದಲ್ಲೂ ಆಗಿಲ್ಲ. ಇದನ್ನೆಲ್ಲ ಮಾಡಿದ್ದು ನಾವು. ನಮ್ಮದೇ ನುಡಿದಂತೆ ಮಾಡಿ ತೋರಿಸಿದ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಉದ್ಯೋಗವನ್ನೂ ಕೊಡಿಸುತ್ತೇವೆ
ಇಂದು ಯುವನಿಧಿ ಜಾರಿ ಮಾಡಿದ್ದೇವೆ. ಯುವಕ ಯುವತಿಯರಿಗೆ ಹಣದ ಜತೆಗೆ ಉದ್ಯೋಗ ಪಡೆದುಕೊಳ್ಳಲು ಅಗತ್ಯವಾದ ಕೌಶಲ್ಯ ತರಬೇತಿಯನ್ನೂ ನೀಡಿ ಅವರಿಗೆ ಉದ್ಯೋಗ ಕೊಡಿಸುವ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿದೆ. ಯುವಕ ಯುವತಿಯರು ಭ್ರಮನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಈ ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರಾಜೀವ್ ಗಾಂಧಿ ಆಶಯ
ವಿವೇಕಾನಂದರ ಜನ್ಮ ದಿನದಂದೇ ಯುವನಿಧಿ ಯೋಜನೆಯನ್ನು ನಾವು ಜಾರಿ ಮಾಡಿದ್ದೇವೆ. ಈಗಾಗಲೇ 70 ಸಾವಿರ ಯುವಕ ಯುವತಿಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ರಾಜೀವ್ ಗಾಂಧಿ ಅವರು ದೇಶದ ಯುವಕರ ಭವಿಷ್ಯಕ್ಕಾಗಿ ಸದಾ ತುಡಿಯುತ್ತಿದ್ದರು. ಅವರ ಆಶಯಕ್ಕೆ ಪೂರಕವಾಗಿ ಯುವನಿಧಿ ಯೋಜನೆ ಮತ್ತು ನಮ್ಮ ಸರ್ಕಾರ ಕೆಲಸ ಮಾಡಲಿದೆ. ಆದ್ದರಿಂದ ಪ್ರತಿ ಯುವಕ ಯುವತಿಯರು ಯೋಜನೆಗೆ ನೋಂದಾಯಿಸಿಕೊಂಡು ಅನುಕೂಲ ಪಡೆದುಕೊಳ್ಳಿ ಎಂದು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ವಿವೇಕಾನಂದ ಜಯಂತಿ ಆರಂಭಿಸಿದ್ದು ರಾಜೀವ್ ಗಾಂಧಿ
ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ತಿಳಿಸಿದರು. 1985ರಲ್ಲಿ ರಾಜೀವ್ ಗಾಂಧಿ ಅವರು ದೇಶದಲ್ಲಿ ಮೊದಲ ಬಾರಿಗೆ ವಿವೇಕಾನಂದ ಜಯಂತಿಯನ್ನು ಆರಂಭಿಸಿದರು ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.
ಶಾಂತಿಯ ತೋಟಕ್ಕಾಗಿ ಚಳವಳಿ ನಡೆಯಲಿ
ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲದು. ಅದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಜಾರಿಗೆ ತರಬೇಕು. ನಮ್ಮ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಅದನ್ನೇ. ಹೋರಾಟದ ಹಿನ್ನೆಲೆಯ ಜಿಲ್ಲೆ ಶಿವಮೊಗ್ಗದಿಂದಲೇ “ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ” ಆಗಲಿ. ಇದಕ್ಕಾಗಿ ಜನ ಚಳವಳಿ ನಡೆಯಲಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಇದನ್ನೂ ಓದಿ: Ram Mandir: ರಾಮಲಲ್ಲಾ ಪ್ರತಿಷ್ಠಾಪನೆಗೆ ನಾನು ಹೋಗಲ್ಲ; ಜ. 22ರ ಬಳಿಕ ಹೋಗುವೆ: ಸಿಎಂ ಸಿದ್ದರಾಮಯ್ಯ
ಡಿಸಿಎಂ ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಇಂಧನ ಸಚಿವ ಕೆ.ಜೆ.ಜಾರ್ಜ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕ್ರೀಡಾ ಸಚಿವ ನಾಗೇಂದ್ರ, ಮೀನುಗಾರಿಕಾ ಸಚಿವ ಮಂಕಾಳ ವೈದ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಭೀಮಣ್ಣ ನಾಯಕ್, ಸಂಗಮೇಶ್, ತಮ್ಮಯ್ಯ, ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ಶಾರದಾ ಪೂರ್ಯಾನಾಯಕ, ಚನ್ನಬಸಪ್ಪ, ತರೀಕೆರೆ ಶ್ರೀನಿವಾಸ್, ಅರುಣ್ ಕುಮಾರ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.