Site icon Vistara News

ಕೋಮು ಸೌಹಾರ್ದ ಹೆಸರಿನಲ್ಲಿ ಹಿಂದುಗಳಿಗೆ ಮಾತ್ರ ಬುದ್ದಿ‌ ಹೇಳುವ ಪ್ರಯತ್ನ ಬೇಡ: ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಕೋಮು ಸೌಹಾರ್ದ ಹೆಸರಿನಲ್ಲಿ ಕೇವಲ ಹಿಂದುಗಳಿಗೆ ಮಾತ್ರ ಬುದ್ದಿ‌ ಹೇಳುವ ಪ್ರಯತ್ನ ಬೇಡ. ಕೆಲವರು ರಾಷ್ಟ್ರ ದ್ರೋಹಿಗಳಿಗೆ ಬೆಂಬಲ ಕೊಡುತ್ತಿರುವುದರಿಂದ ಕೆಲವು ರಾಷ್ಟ್ರ ದ್ರೋಹಿಗಳು ಇನ್ನು ಉಸಿರಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಕಾಶಿ ವಿಶ್ವನಾಥನ ದೇವಸ್ಥಾನವನ್ನು 350 ವರ್ಷಗಳ ಹಿಂದೆ ಔರಂಗಜೇಬ್ ಧ್ವಂಸ ಮಾಡಿದ್ದ. ಕಾಶಿ ವಿಶ್ವನಾಥನ ದೇವಸ್ಥಾನವನ್ನು ಅಹಲ್ಯಾಬಾಯಿ ಹೋಲ್ಕರ್ ಕಟ್ಟಿಸಿದ್ದರು.

kashi vishwanath temple

ಅಲ್ಲಿದ್ದ ಮಸೀದಿಯನ್ನು ಒಡೆದು, ದೇವಸ್ಥಾನ ಸರ್ವೇ ಮಾಡಬೇಕು ಅಂದಾಗ ಅನೇಕ‌ ಬಾರಿ‌ ಹಲವರು ಪ್ರತಿಭಟನೆ ನಡೆಸಿದ್ದರು. ಮುಸಲ್ಮಾನರಿಗೆ ಮೆಕ್ಕಾ ಪುಣ್ಯ ಕ್ಷೇತ್ರ, ಕ್ರಿಶ್ಚಿಯನ್ನರಿಗೆ ಜೆರುಸಲೇಂ ಪುಣ್ಯಕ್ಷೇತ್ರ, ಅದೇ ರೀತಿ‌ ಹಿಂದುಗಳಿಗೆ ಕಾಶಿ ಅಯೋಧ್ಯೆ, ಮಥುರಾ ಪುಣ್ಯಕ್ಷೇತ್ರ. ನಿನ್ನೆ ಕಾಶಿಯಲ್ಲಿ 12 ಅಡಿ ಎತ್ತರದ ಈಶ್ವರ ಲಿಂಗ ಹೊರಗೆ ಬಂದಿದೆ. 36 ಸಾವಿರ ದೇವಸ್ಥಾನವನ್ನು ಈ ದೇಶದಲ್ಲಿ ಒಡೆದು ಹಾಕಿ ಅಲ್ಲಿ‌ ಮಸೀದಿ ಕಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಒಂದು ಮಸೀದಿ ಮೇಲೆ ಭಗವಾಧ್ವಜದ ಚಿತ್ರ ಹಾಕಿದ್ದಕ್ಕೆ ಧಂಗೆ ಏಳುತ್ತಾರೆ. ಅಯೋಧ್ಯೆ ಕಳೆದುಕೊಂಡಿದ್ದೇವೆ, ಈಗ ಕಾಶಿ ಕಳೆದುಕೊಳ್ಳಲ್ಲ ಎಂದು ಒಬ್ಬ ಮೌಲ್ವಿ ಹೇಳುತ್ತಾನೆ. ಕಳೆದುಕೊಳ್ಳುವುದಿಲ್ಲ ಎಂದು ಹೇಳಲು ಇವನು ಯಾರು? ಅವು ನಮ್ಮ‌ ದೇವಸ್ಥಾನಗಳು, ಅವುಗಳನ್ನು ನಾವು ತೆಗೆದುಕೊಂಡೇ ತೆಗೆದುಕೊಳ್ಳುತ್ತೇವೆ.

ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಈಶ್ವರಪ್ಪ, ಮುಸಲ್ಮಾನರನ್ನು ತೃಪ್ತಿಪಡಿಸುವ ಮೂಲಕ ರಾಜಕೀಯ ಮಾಡಬೇಕು‌ ಎಂದು ತಿಳಿದಿದ್ದರೆ ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಹಿಂದು ಸಮಾಜಕ್ಕೆ ಅಪಮಾನ ಮಾಡಬೇಡ ಎಂದು ಹೇಳುವ ಧೈರ್ಯ‌ ಯಾವ ಕಾಂಗ್ರೆಸ್ ನಾಯಕರಿಗಾದರೂ ಇದೆಯೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ| Sedition Law | ದೇಶದ್ರೋಹ ಕಾಯಿದೆಗೆ ಸುಪ್ರೀಂ ಕೋರ್ಟ್‌ನಿಂದ ತಾತ್ಕಾಲಿಕ ತಡೆ

ಮಡಿಕೇರಿಯಲ್ಲಿ ಬಜರಂಗದಳ ಕಾರ್ಯಕರ್ತರಿಗೆ ತರಬೇತಿ ನೀಡಿದ ವಿಚಾರದಲ್ಲಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಈ ಬಗ್ಗೆ ಅಲ್ಲಿನ ಎಸ್‌ಪಿ ಅವರೇ ಉತ್ತರ ಕೊಟ್ಟಿದ್ದಾರೆ. ಶಿಬಿರಾರ್ಥಿಗಳಿಗೆ ಯಾವುದೇ ಆಯುಧ ಕೊಟ್ಟಿರಲಿಲ್ಲ. ಅಲ್ಲಿ ಶಾಲೆ ನಡೆಯುತ್ತಿರಲಿಲ್ಲ. ರಜೆ ಇತ್ತು. ಅನುಮತಿ‌ ಪಡೆದು ಅಲ್ಲಿ ಶಿಬಿರಾರ್ಥಿಗಳಿಗೆ ಟ್ರೈನಿಂಗ್ ಕೊಟ್ಟಿದ್ದಾರೆ. ಫೈರ್ ಮಾಡುವಂತಹ ಬುಲೆಟ್ ಇಟ್ಕೊಂಡು ಟ್ರೈನಿಂಗ್ ಕೊಟ್ಟಿಲ್ಲ. ಪಿಎಫ್‌ಐ ಕಾರ್ಯಕರ್ತರು ನಮ್ಮ ಶಾಸಕರ ವಿರುದ್ದ ದೂರು ಕೊಟ್ಟು ಬಂದಿದ್ದಾರೆ. ಪಿಎಫ್‌ಐನವರು ಮಾಡಿದಂತಹ ದೇಶದ್ರೋಹದ ಕೆಲಸವನ್ನು ಬಿಜೆಪಿ ಶಾಸಕರು ಮಾಡಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ| Eshwarappa Resignation: ಕೊನೆಗೂ ರಾಜೀನಾಮೆ ನೀಡಿದ ಈಶ್ವರಪ್ಪ: ರಾಜಕೀಯ ಜೀವನದ ಅಂತ್ಯ?

Exit mobile version