ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಎರಡು ಕುಕ್ಕರ್ ಮೇಲೆ ಪ್ರೀತಿ. ಒಂದು ಮಂಗಳೂರಿನ ಕುಕ್ಕರ್ ಹಾಗೂ ಇನ್ನೊಂದು ಬೆಳಗಾವಿ ಕುಕ್ಕರ್ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಪೇಜ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಕಟೀಲ್, ಡಿಕೆಶಿಗೆ ಎರಡು ಕುಕ್ಕರ್ ಮೇಲೆ ಪ್ರೀತಿ. ಒಂದು ಮಂಗಳೂರಿಂದು, ಇನ್ನೊಂದು ಬೆಳಗಾವಿಯದ್ದು. ಕಾಂಗ್ರೆಸ್ ಭಯೋತ್ಪಾದನಾ ಪಾರ್ಟಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಭಯೋತ್ಪಾದನೆ ಮತ್ತೆ ಆಗುತ್ತೆ. ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ನಿರತವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗೋಹತ್ಯೆ ನಿಷೇದ ಹೋಗುತ್ತೆ. ಮತಾಂತರ ನಿಷೇಧ ಕಾಯ್ದೆ ಹೋಗುತ್ತೆ ಎಂದರು.
ಪಂಚಯಾತ್ರೆ ಪಂಚರ್ ಆಗಿದೆ, ಪ್ರಜಾಧ್ವನಿ ಬ್ರೇಕ್ ಫೇಲ್ ಆಗಿದೆ. ನಮ್ಮ ವಿಜಯ ಯಾತ್ರೆ ಯಶಸ್ವಿಯಾಗಿ ಮುಂದುವರಿದಿದೆ. ಬಿಜೆಪಿಯ ಶಕ್ತಿ ಕೇಂದ್ರ ಶಿವಮೊಗ್ಗ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಪತಾಕೆ ಹಾರಿಸಲು ಪ್ರೇರಣೆ ಪಡೆಯಲು ಬಂದಿದ್ದೇನೆ. ಬೂತ್ ಗೆಲ್ಲುವ ಸಂಕಲ್ಪ ನಮ್ಮ ಕಾರ್ಯಕರ್ತರಲ್ಲಿ ಇರಬೇಕು. ಆ ನಿಟ್ಟಿನಲ್ಲಿ ಪೇಜ್ ಪ್ರಮುಖರ ರಚನೆ ಮಾಡಲಾಗಿದೆ. ಇದರ ಪ್ರತಿಫಲ ಗುಜರಾತ್ ರಾಜ್ಯದಲ್ಲಿ ಗೆಲುವು ಸಿಕ್ಕಿದೆ. ಶಿವಮೊಗ್ಗದಲ್ಲಿ ರಾಜ್ಯದ ಮೊದಲ ಪೇಜ್ ಪ್ರಮುಖರ ಸಮಾವೇಶ ನಡೆಯುತ್ತಿದೆ. ಇಲ್ಲಿ ಮೊಳಗಿದ ಕಹಳೆ ರಾಜ್ಯದಲ್ಲಿ ಕೇಳಿಸಲಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಛಿದ್ರ ಛಿದ್ರ ಆಗಲಿದೆ. ಚುನಾವಣೆ ನಂತರವೂ ಪೇಜ್ ಪ್ರಮುಖರು ಅಭಿವೃದ್ಧಿ ಕಾರ್ಯಕ್ಜೆ ಜೋಡಿಸಿಕೊಳ್ಳಲಿದ್ದಾರೆ. ಡಿಕೆಶಿ ಗೆ ರಾಜ್ಯಾಧ್ಯಕ್ಷರಾಗಿ ಮೂರುವರೆ ವರ್ಷವಾದರೂ ಕಾರ್ಯಕಾರಿಣಿ ರಚಿಸಲು ಆಗಿಲ್ಲ. ರಾಜ್ಯ ಸಮಿತಿ ಇಲ್ಲದ ಡಕೊಟಾ ಎಕ್ಸಪ್ರೆಸ್ ಕಾಂಗ್ರೆಸ್ ಎಂದರು.
ಸಿದ್ದರಾಮಯ್ಯ ಟಿಪ್ಪು ಜಯಂತಿ ಹೆಸರಲ್ಲಿ ಸಮಾಜ ಒಡೆದು ಹಾಕಿದರು. ಸಿದ್ದರಾಮಯ್ಯ ಸಮಾಜ ಘಾತುಕ ವ್ಯಕ್ತಿ. ಸಿದ್ದರಾಮಯ್ಯ ಸರ್ಕಾರದಲ್ಲಿ ೨೪ ಹಿಂದುಗಳ ಹತ್ಯೆ ಆಯ್ತು. ಸಿದ್ದರಾಮಯ್ಯ ಕಣ್ಣಲ್ಲಿ ನೀರು ಬರಲಿಲ್ಲ. ಪಿಎಫ್ಐ ಸಂಘಟನೆ ಕಾರ್ಯಕರ್ತನನ್ನು ಬಿಡುಗಡೆ ಮಾಡಿದ್ರು. ಆದ್ರೆ ಮೋದಿ ಸರ್ಕಾರ ಪಿಎಫ್ಐ ಸಂಘಟನೆ ನಿಷೇಧಿಸಿದೆ ಎಂದರು.
ಇದನ್ನೂ ಓದಿ : ಗೋಕಾಕ್ ಕ್ಷೇತ್ರದಲ್ಲೂ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮಾನಿಗಳಿದ್ದಾರೆ: ರಮೇಶ್ ಜಾರಕಿಹೊಳಿ ಸೋಲಿಸುತ್ತೇವೆ ಎಂದ ಚನ್ನರಾಜ್
ಆರೆಸ್ಸೆಸ್ ಕುರಿತು ಎಚ್.ಡಿ. ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿದ ಕಟೀಲ್, ಚುನಾವಣೆಯಲ್ಲಿ ಜೆಡಿಎಸ್‌ಗೆ 20 ಸ್ಥಾನ ಕೂಡ ಸಿಗೊಲ್ಲ. ಈ ಭಯ ಕುಮಾರಸ್ವಾಮಿ ಅವರನ್ನು ಕಾಡುತ್ತಿದೆ. ಹಾಗಾಗಿ ಮನಭ್ರಾಂತಿ ಆರಂಭವಾಗಿದೆ. ೯ ಜನ ಉಪಮುಖ್ಯಮಂತ್ರಿ ಅಂತ ಅವರು ತಮ್ಮ ಮನೆ ನೋಡಿ ಹೇಳಿರಬೇಕು. ಅವರು ರಾಜಕಾರಣದಲ್ಲಿ ಅದೇ ನೋಡಿ ಬಂದವರು. ಕುಟುಂಬ ರಾಜಕಾರಣ, ಒಡೆದಾಡುವ ರಾಜಕಾರಣ. ಎರಡನ್ನೂ ಮಾಡುತ್ತಿದ್ದಾರೆ. ಹಾಗಾಗಿ ಅದನ್ನು ಅವರು ಉಲ್ಲೇಖ ಮಾಡಿರಬೇಕು. ಸಮುದಾಯಗಳ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ. ಮಾಜಿ ಸಿಎಂ ಆದವರು ಎಲ್ಲ ಸಮುದಾಯಕ್ಕೆ ಗೌರವ ಕೊಡಬೇಕು. ಈ ರೀತಿ ಹೇಳಿಕೆ ಕೊಡುವುದು ಅವರಿಗೆ ಶೋಭೆಯಲ್ಲ. RSS ಏನು ಎಂಬುದನ್ನು ಅವರು ಅದರೊಳಗೆ ಬಂದು ತಿಳಿಯಲಿ. ಅವರು ಎಚ್ಚರಿಕೆಯಿಂದ ಹೇಳಿಕೆ ಕೊಡಬೇಕು. ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅನ್ನೋದು ಅವರಿಗೆ ಸ್ಪಷ್ಟವಾಗಿದೆ ಎಂದರು.
ಡಿಕೆಶಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ಖಂಡಿತ ನಮಗಿಲ್ಲ. ಯಾಕೆಂದ್ರೆ ನಮ್ಮಲ್ಲಿ ತಿಹಾರ್ ಜೈಲಿಗೆ ಹೋಗಿ ಬಂದವರಿಲ್ಲ ಎಂದರು.