ಶಿವಮೊಗ್ಗ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ದೇವಸ್ಥಾನವನ್ನು ಒಡೆದು ಮಸೀದಿ ಕಟ್ಟಿದ್ದಾರೆ ಎಂಬ ಆ ಜಿಲ್ಲೆಯ ಸಂಸದ ಅನಂತ ಕುಮಾರ್ ಹೆಗಡೆ (Anantkumar Hegde) ನೀಡಿರುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ (KS Eshwarappa) ಪ್ರತಿಕ್ರಿಯೆ ನೀಡಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಕೆ.ಎಸ್. ಈಶ್ವರಪ್ಪ, ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಡಿದ್ದನ್ನು ಭಾರತೀಯರು ಸ್ವಾಗತ ಮಾಡಬೇಕಾ? ಎಂದು ಪ್ರಶ್ನೆ ಮಾಡಿದರು. ಅಲ್ಲದೆ, ಸಂಸದ ಅನಂತ ಕುಮಾರ್ ಹೆಗಡೆ ಅವರ ಈ ಹೇಳಿಕೆಯನ್ನು ಹಿಂದುಗಳು ಸ್ವಾಗತ ಮಾಡಬೇಕು. ನಮ್ಮ ಸಂಸ್ಕೃತಿ ಉಳಿಯಬೇಕೆಂಬ ನಿಟ್ಟಿನಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ ಎಂದು ಹೇಳಿದರು.
ಮೋದಿ ವಿರುದ್ಧ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿಲ್ಲವೇ?
ಸಿಎಂ ಸಿದ್ದರಾಮಯ್ಯ ಅವರು ತಮ್ಮ ತಪ್ಪನ್ನು ಮೊದಲು ತಿದ್ದಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ್ದಾರೆ. ಅಲ್ಲದೆ, ಹಿಜಾಬ್ ಪರವಾಗಿ ಮಾತನಾಡುವ ಸಿದ್ದರಾಮಯ್ಯ ಅವರು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಹೋಗುವುದಿಲ್ಲ ಎಂದಿದ್ದರು. ಕೊನೆಗೆ ಜ. 22ರ ಬಳಿಕ ಹೋಗುತ್ತೇನೆ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಯೋಧ್ಯೆಗೆ ಬರುವಂತೆ ನಾನು ಸ್ವಾಗತಿಸಿದ್ದೆ. ಆದರೆ, ಸಿದ್ದರಾಮಯ್ಯ ನಿಮಿಷಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.
ಅಯೋಧ್ಯೆಗೆ ಹೋಗಿ ಪಾಪ ಕಳೆದುಕೊಂಡು ಬನ್ನಿ
ಸಿದ್ದರಾಮಯ್ಯ ಅವರೇ, ನಿಮ್ಮ ಹೆಸರಿನಲ್ಲಿ ಸಿದ್ದ – ರಾಮ ಎರಡೂ ಇದೆ. ರಾಮ ಮಂದಿರಕ್ಕೆ ಹೋಗಿ ನಿಮ್ಮ ಪಾಪವನ್ನು ಕಳೆದುಕೊಂಡು ಬನ್ನಿ. ನೀವು ಏಕೆ ಬಿಜೆಪಿಯ ರಾಮ ಮಂದಿರ ಎಂದು ಭಾವಿಸುತ್ತೀರಿ. ನಾವು ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿಲ್ಲ. ಶ್ರೀರಾಮ ಇರುವುದು ಇಡೀ ಪ್ರಪಂಚದ ಹಿಂದುಗಳನ್ನು ಒಂದು ಮಾಡಲು. ಯಾವ ರೀತಿ ರಾಜಕಾರಣ ಮಾಡುತ್ತಿದ್ದೇವೆಂದು ನೀವು ಹೇಳಿದರೆ ನಾವು ತಿದ್ದಿಕೊಳ್ಳುವ ಪ್ರಯತ್ನವನ್ನಾದರೂ ಮಾಡುತ್ತೇವೆ ಎಂದು ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.
ಬೆಳಗಾವಿಯಲ್ಲಿ ಗೂಂಡಾ ಮುಸ್ಲಿಮರು ಹಲ್ಲೆ ಮಾಡಿದ್ದಾರೆ. ಅಣ್ಣ ತಂಗಿಯ ಮೇಲೆ ಹಲ್ಲೆ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಅತ್ಯಾಚಾರದಂತಹ ಘಟನೆಗಳು ನಡೆಯುತ್ತಿವೆ. ಮೃಗೀಯ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಸಿಎಂ ವಿರುದ್ಧ ಏಕವಚನದಲ್ಲಿ ದಾಳಿ ನಡೆಸಿದ್ದ ಅನಂತ್‌ಕುಮಾರ್ ಹೆಗಡೆ
ಕುಮಟಾದಲ್ಲಿ ಶನಿವಾರ ನಡೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಅನಂತಕುಮಾರ್ ಹೆಗಡೆ, ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯಂತೆ ಭಟ್ಕಳದ ಚಿನ್ನದ ಪಳ್ಳಿಯೂ ನಾಶವಾಗಲಿದೆ ಎಂದು ಎಚ್ಚರಿಸಿದ್ದರು. ಇದನ್ನು ಬೇಕಾದರೆ ಬೆದರಿಕೆ ಅಂತ ಬೇಕಾದರೂ ತಿಳಿಯಿರಿ. ಇದು ಹಿಂದೂ ಸಮಾಜದ ತೀರ್ಮಾನವೇ ವಿನಃ ಅನಂತಕುಮಾರ್ ಹೆಗಡೆ ತೀರ್ಮಾನ ಅಲ್ಲ. ಶಿರಸಿಯ ಸಿಪಿ ಬಜಾರ್ನಲ್ಲಿಯೂ ಮಸೀದಿ ಇದೆ. ಅದು ಈ ಹಿಂದೆ ವಿಜಯ ವಿಠ್ಠಲ ದೇವಸ್ಥಾನ ಆಗಿತ್ತು. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಮಾರುತಿ ದೇವಸ್ಥಾನವಾಗಿತ್ತು. ಇವತ್ತೂ ಅಲ್ಲಿಗೆ ಹೋದರೆ ಮಾರುತಿ ದೇವಸ್ಥಾನ ಕಾಣುತ್ತದೆ ಎಂದು ಹೇಳಿದ್ದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ಈ ಕಾರ್ಯಕ್ರಮದಲ್ಲೇ ಸಿದ್ದರಾಮಯ್ಯ ವಿರುದ್ಧವೂ ಸಂಸದ ಅನಂತ್ ಕುಮಾರ್ ಹೆಗಡೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು. ಹಿಂದು ಸಮಾಜವನ್ನು ಶತಮಾನಗಳಿಂದಲೂ ಒಡೆಯುತ್ತಲೇ ಬರುತ್ತಿದ್ದಾರೆ ಎಂದು ಹೇಳಿದ ಅವರು, ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲ. ಅದು ಹಿಂದು ವಿರೋಧಿ, ಸನಾತನ ಧರ್ಮ ವಿರೋಧಿ. ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲ, ಸಿಎಂ ಸಿದ್ದರಾಮಯ್ಯ ನಮ್ಮ ವಿರೋಧಿ. ಅಲ್ಪಸಂಖ್ಯಾತರ ಮತಕ್ಕಾಗಿ ಹರಾಜಾಗಿ ಹೊದವರು ನಮ್ಮ ವಿರೋಧಿಗಳು ಎಂದು ಹೇಳಿದ್ದರು.
ಸಿದ್ದರಾಮಯ್ಯ ಅವರು ಮೊದಲು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಯ ಆಹ್ವಾನ ಬಂದಿಲ್ಲ ಎಂದು ಹೇಳಿದರು. ಆಹ್ವಾನ ಬಂದ ಮೇಲೆ ನಾನು ಹೋಗುವುದಿಲ್ಲ ಎಂದು ಹೇಳೀದರು. ʻʻನೀನು ಬಾ ಅಥವಾ ಬಿಡು. ಆದರೆ, ರಾಮ ಜನ್ಮಭೂಮಿಯಲ್ಲಿ ನಡೆಯೋದು ಏನೂ ನಿಲ್ಲೋದಿಲ್ಲ ಮಗನೇʼʼ ಎಂದು ಅನಂತ ಕುಮಾರ್ ಹೆಗಡೆ ಏಕವಚನದಲ್ಲಿ ನಿಂದಿಸಿದ್ದರು. ಈ ಹಿಂದೆ ಅಯೋಧ್ಯೆಗೆ ಹೋಗುವುದಿಲ್ಲ ಎಂದಿದ್ದ ಸಿದ್ದರಾಮಯ್ಯ, ಬಳಿಕ, ಜನವರಿ 22ರ ಬಳಿಕ ಯಾವಾಗಲಾದರೂ ಹೋಗುತ್ತೇನೆ ಎಂದು ಹೇಳಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು ಎಂದು ಅನಂತ ಕುಮಾರ್ ಹೆಗಡೆ ಹೇಳಿದ್ದರು.
ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ FIR
ಅನಂತ್ ಕುಮಾರ್ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಏಕವಚನದಲ್ಲಿ ನಿಂದಿಸಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕುಮಟಾ ಪೊಲೀಸರು ಸುಮೊಟೊ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಕುಮಟಾ ಠಾಣೆಯಲ್ಲಿ ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು, ದ್ವೇಷ ಭಾಷಣ ಹಾಗೂ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನಿಸಿದ್ದಾಗಿ ಎಫ್‌ಐಆರ್ (FIR) ಉಲ್ಲೇಖಿಸಿದ್ದಾರೆ. ಸೆಕ್ಷನ್ 505 ಹಾಗೂ 153ಎ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: Lok Sabha Election 2024: ಮೈಸೂರು ಲೋಕಸಭೆಗೆ ಯದುವೀರ್ ಒಡೆಯರ್ ಎಂಟ್ರಿ? ಟಿಕೆಟ್ ಕೊಡಲು ಬಿಜೆಪಿ, ಕಾಂಗ್ರೆಸ್ ಪೈಪೋಟಿ!
ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಈಗ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ. ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಂದ ಆಗ್ರಹಗಳು ಕೇಳಿ ಬಂದಿದ್ದವು.