ಶಿವಮೊಗ್ಗ: ಪ್ರಿಯಾಂಕ್ ಖರ್ಗೆ (Priyanka Kharge) ಒಂದು ಕೆಟ್ಟ ಹುಳ-ಹೀಗೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa). ದೇಶ ವಿಭಜನೆಯ (Division of Nation) ಮಾತನಾಡಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ (DK Suresh) ಅವರ ವಿರುದ್ಧ ಆಪಾದನೆ ಮಾಡಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಈಶ್ವರಪ್ಪ ಕಿಡಿಕಾರಿದ್ದಾರೆ.
ʻʻಮಲ್ಲಿಕಾರ್ಜುನ ಖರ್ಗೆ ಹೊಟ್ಟೆಯೊಳಗೆ ಇಂತಹ ಕೆಟ್ಟ ಹುಳ ಹುಟ್ಟಿದೆ. ಅವನಿಗೆ ತಳ ಬುಡ ಗೊತ್ತಿಲ್ಲ. ಏನೇನೋ ಮಾತನಾಡುತ್ತಾನೆ. ಪ್ರಿಯಾಂಕಾ ಖರ್ಗೆ ಯನ್ನು ನಾನು ಕಾಂಗ್ರೆಸ್ ನಾಯಕ ಅಂತಾ ಕರೆಯಲು ಇಷ್ಟಪಡುವುದಿಲ್ಲʼʼ ಎಂದು ಹೇಳಿದರು ಈಶ್ವರಪ್ಪ.
ಇವರೆಲ್ಲಾ ನನ್ನನ್ನು ತಪ್ಪು ಅನ್ನುತ್ತಾರಲ್ಲಾ.. ಸ್ವಾತಂತ್ರ್ಯ ಹೋರಾಟಗಾರ ಕಾಂಗ್ರೆಸ್ ನಾಯಕರು ನನ್ನ ಹೇಳಿಕೆ ತಪ್ಪು ಅಂತಾ ಹೇಳಲಿ, ಒಪ್ಪಿಕೊಳ್ಳುತ್ತೇನೆ ಎಂದರು.
ದಾವಣಗೆರೆಯಲ್ಲಿ ನಡೆದಿದ್ದ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ್ದ ಕೆ.ಎಸ್. ಈಶ್ವರಪ್ಪ ಅವರು, ಡಿ.ಕೆ. ಸುರೇಶ್ ಅವರನ್ನು ಉಲ್ಲೇಖಿಸಿ ರಾಷ್ಟ್ರ ದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ಅಭಿಪ್ರಾಯಪಟ್ಟಿದ್ದರು.
ಈಶ್ವರಪ್ಪ ಹೇಳಿಕೆಗೆ ಪ್ರತಿಯಾಗಿ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಾವಣಗೆರೆ ಪೊಲೀರು ಶಿವಮೊಗ್ಗದ ಈಶ್ವರಪ್ಪ ಅವರ ನಿವಾಸಕ್ಕೆ ಬಂದು ನೋಟಿಸ್ ಜಾರಿ ಮಾಡಿದ್ದರು.
ನೋಟಿಸ್ ಬಂದಿರುವುದನ್ನು ಒಪ್ಪಿಕೊಂಡ ಕೆ.ಎಸ್. ಈಶ್ವರಪ್ಪ ಅವರು, ದೇಶದ್ರೋಹಿಗಳಿಗೆ ಯಾವ ನೋಟೀಸ್ ಕೂಡಾ ಇಲ್ಲ, ಯಾವ ಎಫ್ ಐಆರ್ ಕೂಡಾ ಇಲ್ಲ. ದೇಶದ್ರೋಹಿ ಹೇಳಿಕೆ ಕೊಟ್ಟ ವ್ಯಕ್ತಿಗಳಿಗೆ ಗುಂಡಿಕ್ಕಿ ಕೊಲ್ಲುವಂಥ ಕಾನೂನು ತರಬೇಕು ಎಂದು ಹೇಳಿದ್ದೆ. ಹಾಗಾಗಿ ನಮ್ಮ ಮೇಲೆ ಎಫ್ ಐ ಆರ್ ಹಾಕಿದ್ದಾರೆ, ನನಗೆ ನೋಟೀಸ್ ನೀಡಿದ್ದಾರೆ ಎಂದರು.
ʻʻದಾವಣಗೆರೆ ಪೊಲೀಸರು ನೋಟೀಸ್ ಕೊಟ್ಟಿರುವುದು ಹೌದು. ಎಫ್ ಐ ಆರ್ ಹಾಕಿರುವುದು ಸತ್ಯ. ಆದರೆ, ನನ್ನ ಮೇಲೆ ನೂರು ಎಫ್ ಐ ಆರ್ ಹಾಕಿದರೂ ಹೆದರುವುದಿಲ್ಲ. ಇದುವರೆಗೆ ನನ್ನ ಮೇಲೆ 100 ಎಫ್ಐಆರ್ ಹಾಕಿರಬಹುದು. ನಾನು ಈವರೆಗೂ ಒಂದು ರೂಪಾಯಿ ಫೈನ್ ಕಟ್ಟಿಲ್ಲ ಎಂದು ಹೇಳಿದರು.
ಇದನ್ನೂ ಓದಿ : KS Eshwarappa : ಗುಂಡಿಕ್ಕಿ ಕೊಲ್ಲಿ ಎಂದಿಲ್ಲ, ಕಾನೂನು ಬೇಕು ಅಂದೆ ಅಷ್ಟೆ; ಮೆತ್ತಗಾದ ಈಶ್ವರಪ್ಪ
ನನ್ನ ಹೇಳಿಕೆಯ ಬಗ್ಗೆ ಜನರೇ ತೀರ್ಮಾನ ಮಾಡಬೇಕು
ʻʻದೇಶ ವಿಭಜನೆ ಮಾಡಬೇಕು ಅಂತಾ ಹೇಳಿದ ವ್ಯಕ್ತಿಯ ವಿರುದ್ಧ ಎಫ್ ಐ ಆರ್ ಹಾಕಿಲ್ಲ. ನೋಟೀಸ್ ಕೊಟ್ಟಿಲ್ಲ. ಗುಂಡಿಕ್ಕಿ ಕೊಲೆ ಅಂತಾ ಹೇಳಿದ್ದು ಕಾಂಗ್ರೆಸ್ ಸರ್ಕಾರಕ್ಕೆ ತಪ್ಪು ಅಂತಾ ಕಾಣಿಸಿದೆ. ಇದರ ವಿಷಯದಲ್ಲಿ ಜನರೇ ತೀರ್ಮಾನ ಮಾಡಬೇಕು ಎಂದು ಹೇಳಿದ ಅವರು, ರಾಜ್ಯದಲ್ಲಿ ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ಸದ್ಯ ನನ್ನನ್ನು ಪುಣ್ಯ ನಾನು ದೇಶದ್ರೋಹಿ ಎಂದು ಯಾರು ಹೇಳಿಲ್ಲʼʼ ಎಂದು ಹೇಳಿದರು.
ಪ್ರಧಾನಿ, ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದ ಕೆ.ಎಸ್. ಈಶ್ವರಪ್ಪ
ದೇಶ ವಿಭಜನೆಯ ಮಾತು ಆಡಿದ ಡಿ.ಕೆ.ಸುರೇಶ್ ವಿರುದ್ಧ ಕೇಸು ದಾಖಲು ಮಾಡಿ ಎಂದು ಈಗಲೂ ಆಗ್ರಹಿಸುತ್ತೇನೆ. ಗೃಹಸಚಿವರು ಈ ಬಗ್ಗೆ ಗಮನಹರಿಸಿ ಕೇಸು ದಾಖಲಿಸಬೇಕು. ಈ ಬಗ್ಗೆ ನಾನು ಪ್ರಧಾನಿಗಳಿಗೂ, ಕೇಂದ್ರ ಗೃಹ ಸಚಿವರಿಗೂ ಪತ್ರ ಬರೆಯುತ್ತೇನೆ. ಗುಂಡಿಕ್ಕಿ ಕೊಲ್ಲುವ ಅಂತಾ ಕಾನೂನು ತನ್ನಿ ಅಂತಲೇ ನಾನು ಪತ್ರ ಬರೆಯುತ್ತೇನೆ ಎಂದು ಹೇಳಿದರು.
ನನ್ನ ಮೈನಲ್ಲಿ ಹರಿಯುತ್ತಿರುವುದು ಅಂಬೇಡ್ಕರ್ ರಕ್ತ ಎಂದ ಪ್ರಿಯಾಂಕ್
ಪ್ರಿಯಾಂಕ್ ಖರ್ಗೆ ಒಂದು ಹುಳ ಎಂಬ ಕೆ.ಎಸ್. ಈಶ್ವರಪ್ಪ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವರು, ʻʻಈಶ್ವರಪ್ಪ ಏನಾದ್ರು ಬಾಯಿ ಬಡೆದುಕೊಳ್ಳಲಿ, ಬಟ್ಟೆ ಹರಿದುಕೊಳ್ಳಲಿʼʼ ಎಂದರು.
ʻʻಬಿಜೆಪಿಯಲ್ಲೇ ಕೆ.ಎಸ್.ಈಶ್ವರಪ್ಪ ಅವರ ಮಾತಿಗೆ ಬೆಲೆಯಿಲ್ಲ, ನಾವ್ಯಾಕೆ ತಲೆ ಕಡೆಸಿಕೊಳ್ಳ ಬೇಕು.? ಜನ ನಮಗೆ ಆಶಿರ್ವಾದ ಮಾಡಿದ್ದಾರೆ ನಾವು ಕೆಲಸ ಮಾಡಬೇಕಿದೆ.. ಈಗ ಏನು ಅಬ್ಬರಿಸುತ್ತಿದ್ದಾರಲ್ಲ.. ಇಷ್ಟೇ ರಾಜಾರೋಷವಾಗಿ ಕೇಂದ್ರಕ್ಕೆ ಹೋಗಿ ರಾಜ್ಯದ ಅನುದಾನ ತರಲಿ.. ಕೇಂದ್ರಕ್ಕೆ ಹೋಗಿ ಕನ್ನಡಿಗರ ಪರವಾಗಿ ಗುಡುಗಲಿʼʼ ಎಂದು ಸವಾಲು ಹಾಕಿದರು.
ʻʻನಾನು ಕೆಟ್ಟ ಹುಳಾನಾ ಇಲ್ಲಾ ಒಳ್ಳೆ ಹುಳಾನಾ? ಅದು ತೆಗೆದುಕೊಂಡು ನಿಮಗೆ ಏನು ಮಾಡೋದಿದೆ.. ನಮ್ಮ ತಂದೆ ತಾಯಿ ಸಂಭಾಳಿಸುತ್ತಿದ್ದಾರೆ, ಚಿತ್ತಾಪುರ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ.. ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು ಒಳ್ಳೆ ಭಾಷೆ ಮಾತಾಡುತ್ತಿದ್ದೇನೆ, ಅಕಸ್ಮಾತ್ ನಿಮಗೆ ಬೇರೆ ಭಾಷೆ ಅರ್ಧ ಆಗೋದಿದ್ದರೆ ಹೇಳಿ.. ಮರೆಯ ಬೇಡಿ ನನ್ನ ಮೈನಲ್ಲೂ ಅಂಬೇಡ್ಕರ್ ರಕ್ತ ಹರಿಯುತ್ತಿದೆʼʼ ಎಂದು ಎಚ್ಚರಿಕೆ ನೀಡಿದರು.