Site icon Vistara News

KS Eshwarappa : ಹಾವೇರಿ ಟಿಕೆಟ್‌ ಸಿಗದಿದ್ರೆ ಕೆ.ಎಸ್ ಈಶ್ವರಪ್ಪ ರೆಬೆಲ್‌ ಆಗೋದು ಗ್ಯಾರಂಟಿ?

KS Eshwarappa rebel

ಶಿವಮೊಗ್ಗ: ರಾಜ್ಯದ ಹಿರಿಯ ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ (KS Eshwarappa) ಅವರು ಹಾವೇರಿ ಲೋಕಸಭಾ ಕ್ಷೇತ್ರದ (Haveri Lokasabha Constituency) ಬಿಜೆಪಿ ಟಿಕೆಟ್‌ ಸಿಗದೆ ಇದ್ದರೆ ಬಂಡಾಯ ಅಭ್ಯರ್ಥಿಯಾಗಿ (Rebel Candidate) ಕಣಕ್ಕೆ ಇಳಿಯುವ ಸಾಧ್ಯತೆಗಳು ಕಾಣಿಸಿಕೊಂಡಿವೆ. ಈ ಬಗ್ಗೆ ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ ಎಂದು ಸ್ವತಃ ಕೆ.ಎಸ್‌. ಈಶ್ವರಪ್ಪ ಅವರೇ ಹೇಳಿಕೊಂಡಿದ್ದಾರೆ.

ಕೆ.ಎಸ್‌. ಈಶ್ವರಪ್ಪ ಅವರು ಕಳೆದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಕಣದಿಂದ ಹಿಂದೆ ಸರಿದಿದ್ದರು. ಆಗ ಅವರು ತಮ್ಮ ಪುತ್ರ ಕೆಇ ಕಾಂತೇಶ್‌ (KE Kantesh) ಅವರಿಗೆ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್‌ ಕೇಳಿದ್ದರು. ಆದರೆ, ಬಿಜೆಪಿ ಕೊಟ್ಟಿರಲಿಲ್ಲ. ಇದಾದ ಬಳಿಕ ಅವರು ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟನ್ನು ಮಗನಿಗೆ ಕೊಡಬೇಕು ಎಂದು ಕೇಳಿದ್ದರು. ಆದರೆ, ಅದು ಕೂಡಾ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ.

ಈ ನಡುವೆ, ಮೊದಲು ಮಗ ಕಾಂತೇಶ್‌ಗೆ ಟಿಕೆಟ್‌ ಕೇಳುತ್ತಿದ್ದ ಕೆ.ಎಸ್‌. ಈಶ್ವರಪ್ಪ ಅವರು ಈಗ ವರಸೆ ಬದಲಿಸಿದ್ದಾರೆ. ಇತ್ತ ತಮ್ಮ ಜತೆಗೇ ವಿಧಾನಸಭಾ ಟಿಕೆಟ್‌ ಮಿಸ್‌ ಆಗಿದ್ದ ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ಗೆ ಹೋಗಿ ಮರಳಿ ಬಂದ ಬಳಿಕ ಬೆಳಗಾವಿ ಕ್ಷೇತ್ರದ ಟಿಕೆಟ್‌ ಪಡೆಯಲಿದ್ದಾರೆ ಎಂಬ ಸುದ್ದಿ‌ ಈಶ್ವರಪ್ಪ ಅವರನ್ನು ಕೆರಳಿಸಿದೆ.

ಹೀಗಾಗಿ ಈಶ್ವರಪ್ಪ ಅವರು ತಾನೇ ಹಾವೇರಿಯ ಟಿಕೆಟ್‌ಗಾಗಿ ಮುಂದೆ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಷ ಬಿಟ್ಟು ಹೋದವರಿಗೆ ಮತ್ತೆ ಕರೆ ತಂದು ಮಣೆ ಹಾಕುವುದಾದರೆ ಪಕ್ಷ ನಿಷ್ಠೆ ಮೆರೆದ ತನಗೆ ಏನೂ ಇಲ್ವಾ ಎಂಬ ಮಾತನ್ನು ಅವರು ಕೇಳುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Lok Sabha Election 2024: ನಾಳೆ ಡಾ. ಮಂಜುನಾಥ್‌ ಬಿಜೆಪಿ ಸೇರ್ಪಡೆ; ಬೆಂಗಳೂರು ಗ್ರಾಮಾಂತರದಿಂದ ಇಂದೇ ಪ್ರಚಾರ!

ಮಾರ್ಚ್‌ 14ರಂದು ಶಿವಮೊಗ್ಗದಲ್ಲಿ ಈಶ್ವರಪ್ಪ ಬೆಂಬಲಿಗರ ಸಭೆ

ಈಶ್ವರಪ್ಪ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೊಡಬೇಕು ಎಂಬ ಬೇಡಿಕೆ ಜೋರಾಗುತ್ತಿದೆ. ಕಾಂತೇಶ್‌ ಅಥವಾ ಈಶ್ವರಪ್ಪ ಅವರಿಗೆ ಟಿಕೆಟ್‌ ಕೊಡದೆ ಹೋದರೆ ಮುಂದೇನು ಎಂಬ ಪ್ರಶ್ನೆಗೆ ಅಭಿಮಾನಿಗಳು ಮಾರ್ಚ್‌ 14ರ ಸಮಾವೇಶದ ಮೂಲಕ ಉತ್ತರ ಕೊಡಲು ನಿರ್ಧರಿಸಿದ್ದಾರೆ.

ಈ ನಡುವೆ, ಈಶ್ವರಪ್ಪ ಅವರ ಬಳಿ ಮಾಧ್ಯಮದವರು ಪಕ್ಷೇತರರಾಗಿ ಸ್ಪರ್ಧಿಸುವ ಬಗ್ಗೆ ಕೇಳಿದಾಗ ಅವರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರು. ʻʻಪಕ್ಷೇತರ ಅಭ್ಯರ್ಥಿಯಾಗ್ತೀನಿ ಅಂತಾ ನಾನು ಹೇಳಿದ್ದೀನಾ? ಬೆಂಬಲಿಗರು ಒತ್ತಾಯ ಮಾಡ್ತಾ ಇದ್ದಾರೆ ಅಷ್ಟೆ. ಈ ಬಗ್ಗೆ ಸಭೆ ಸೇರುತ್ತಾರೆ. ಇದೇ ಮಾರ್ಚ್ 14ರಂದು ಸಭೆ ಕರೆದಿದ್ದಾರೆ.‌ ಆ ಸಭೆಗೆ ನಾನು ಹೋಗ್ತಾ ಇದ್ದೇನೆ. ನಾನು ಏನೂ ತೀರ್ಮಾನ ಮಾಡಿಲ್ಲ. ಸಭೆ ಬಳಿಕ ತೀರ್ಮಾನ ಮಾಡ್ತೇನೆʼʼ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

ʻʻಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರು ನಮ್ಮ ಮನೆಗೆ ಬಂದಿದ್ದರು. ಮಾತುಕತೆಯ ವೇಳೆ ಚುನಾವಣೆ ಬಗ್ಗೆ ಚರ್ಚೆ ಆಗಿದೆ. ಆದರೆ, ಏನೇನು ಚರ್ಚೆ ಆಗಿದೆ ಎಂದು ಹೇಳುವುದಿಲ್ಲ. ನಾವಿಬ್ಬರೂ ಸ್ನೇಹಿತರು ಹಾಗಾಗಿ ಚರ್ಚೆ ಮಾಡಿದ್ದೀವಿʼʼ ಎಂದು ಹೇಳಿದರು.

ಮಗನಿಗೂ ಟಿಕೆಟ್‌ ಕೊಡದೆ, ನಿಮಗೂ ಟಿಕೆಟ್‌ ಕೊಡದೆ ಇರುವುದು ಬಲಿಪಶು ಮಾಡಿದಂತಲ್ಲವೇ ಎಂದು ಕೇಳಿದಾಗ, ʻʻಬಲಿಪಶು ಅಂತಾ ನಾನೇ ಅಂದುಕೊಂಡಿಲ್ಲ. ನೀವು ಯಾಕೆ ಅಂದುಕೊಳ್ತೀರಾʼʼ ಎಂದು ಕೇಳಿದರು.

ನಾನೂ ಸಂಸದನಾಗಬೇಕು ಎಂದ ಈಶ್ವರಪ್ಪ

ʻʻಇದು ನನ್ನ ರಾಜಕೀಯ ಭವಿಷ್ಯದ ವಿಷಯ. ಹಿಂದುಳಿದ ವರ್ಗದ ಜನರು ನನಗೆ ಪೋನ್ ಮಾಡ್ತಾ ಇದ್ದಾರೆ. ಟಿಕೆಟ್‌ ಕೊಡುತ್ತಾರಾ ಎಂದು ಕಾದು ನೋಡುತ್ತೇನೆ. ಹಿರಿಯರ ಜೊತೆ ಮಾತಾನಾಡ್ತೀನಿ. ನಾನೊಬ್ಬ ಸಂಸದ ಆಗಬೇಕು ಅನ್ನೋದು ಹಿರಿಯರ ಜೊತೆ ಚರ್ಚೆ ಮಾಡ್ತೀನಿ. ಎಲ್ಲಾ ಹಿತೈಷಿಗಳು ನೋವಿನಿಂದ ಪೋನ್ ಮಾಡ್ತಾ ಇದ್ದಾರೆʼʼ ಎಂದು ಈಶ್ವರಪ್ಪ ಹೇಳಿದರು.

ವಿಧಾನಸಭಾ ಚುನಾವಣೆಯ ಲೋಪ ಸರಿಪಡಿಸಿಕೊಳ್ಳಬೇಕು

ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ ಈಶ್ವರಪ್ಪ ಅವರು, ಪಕ್ಷದಲ್ಲಿರುವ ದೋಷಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಲೋಪ ಆಗಿವೆ. ಅದನ್ನು ಈ ಚುನಾವಣೆಯಲ್ಲಿ ಸರಿಪಡಿಸಿಕೊಳ್ಳಬೇಕು. ಪಕ್ಷ ಸರಿಯಾಗಬೇಕೆಂದು ನಮ್ಮ ಹಿತೈಷಿಗಳು ಒತ್ತಾಯ ಮಾಡ್ತಾ ಇದ್ದಾರೆʼʼ ಎಂದು ಹೇಳಿರುವ ಈಶ್ವರಪ್ಪ ಅವರು, ನಾನು ಕೊಲ್ಲೂರು ಮೂಕಾಂಬಿಕೆಯಲ್ಲಿ ಬೇಡಿಕೊಂಡಿದ್ದೇನೆ ಎಂದರು.

ಹೆಣ್ಮಕ್ಕಳನ್ನು ದೇವಸ್ಥಾನ ಬಿಟ್ಟು ಹೊರಗೆ ಕಳಿಸಲ್ಲ ಅಂದಿದ್ದರಂತೆ ಈಶ್ವರಪ್ಪ

ʻʻನಾನಾಗಿಯೇ ಹಾವೇರಿಗೆ ಹೋಗಿಲ್ಲ. ಶಿವಮೊಗ್ಗ ವಿಧಾನ ಸಭಾ ಟಿಕೆಟ್ ನನ್ನ ಮಗನಿಗೆ ಕೇಳಿದ್ದೆ. ಆಗ ಅಮಿತ್ ಷಾ ನಿಮ್ಮ ಸೊಸೆಗೆ ಟಿಕೆಟ್ ಕೊಡುತ್ತೇವೆ ಅಂದರು. ನಾನು ನನ್ನ ಸೊಸೆಯನ್ನು ಹೊರಗೆ ಕಳಿಸುವುದಿಲ್ಲ ಎಂದಿದ್ದೆ. ನಮ್ಮ ಮನೆಯ ಹೆಣ್ಣುಮಕ್ಕಳನ್ನು ದೇವಸ್ಥಾನ =ಕ್ಕೆ ಬಿಟ್ಟು ಬೇರೆ ಎಲ್ಲೂ ಕಳಿಸಲ್ಲ ಅಂದಿದ್ದೆ. ಹಾವೇರಿ ಚುನಾವಣೆ ಹೋಗುವ ಮುನ್ನವೇ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದೆ. ಆಗ ಯಡಿಯೂರಪ್ಪನವರು ಟಿಕೆಟ್ ಸಹ ಕೊಡುತ್ತೇನೆ, ನಾನು ನಿಮ್ಮ ಗೆಲ್ಲಿಸೋಕೆ ಓಡಾಡುತ್ತೇನೆ ಎಂದಿದ್ದರು. ಈಗಲೂ ನನಗೆ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆ ಇದೆʼʼ ಎಂದು ಈಶ್ವರಪ್ಪ ಹೇಳಿದರು.

ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ

ಬಿಜೆಪಿಯಲ್ಲಿ ಟಿಕೆಟ್‌ಗೆ ಸಂಬಂಧಿಸಿ ನಡೆಯುತ್ತಿರುವ ಬೆಳವಣಿಗೆಗಳನ್ನು ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂದು ಅಭಿಮಾನಿಗಳು ವ್ಯಾಖ್ಯಾನಿಸುತ್ತಿದ್ದಾರೆ ಎಂದು ಜಗದೀಶ್‌ ಶೆಟ್ಟರ್‌ಗೆ ಟಿಕೆಟ್‌ ನೀಡುತ್ತಿರುವ ವಿಚಾರವನ್ನು ಉಲ್ಲೇಖಿಸದೆಯೇ ಹೇಳಿದೆರು.

ʻಇನ್ನೂ ಹಾವೇರಿಯಲ್ಲಿ ಟಿಕೆಟ್ ಘೋಷಣೆಯಾಗಿಲ್ಲ. ನಾನು ಹಾವೇರಿಯಲ್ಲಿ ನಿಲ್ಲಲ್ಲ. ನನ್ನ ಮಗನಿಗೆ ಟಿಕೆಟ್ ಸಿಗುತ್ತದೆ ಅನ್ನೋ ವಿಶ್ವಾಸ ಇದೆ. ನನ್ನ ಅಭಿಮಾನಿಗಳು ನೂರು ಹೇಳ್ತಾ ಇದ್ದಾರೆ. ಸಭೆ ಕರೆದು ತೀರ್ಮಾನ ಕೈಗೊಳ್ಳುತ್ತೇನೆʼʼ ಎಂದು ಈಶ್ವರಪ್ಪ ಹೇಳಿದ್ದಾರೆ.

Exit mobile version