Site icon Vistara News

KS Eshwarappa : ಗುಂಡಿಕ್ಕಿ ಕೊಲ್ಲಿ ಎಂದಿಲ್ಲ, ಕಾನೂನು ಬೇಕು ಅಂದೆ ಅಷ್ಟೆ; ಮೆತ್ತಗಾದ ಈಶ್ವರಪ್ಪ

KS Eshwarappa DK Suresh

ಶಿವಮೊಗ್ಗ: ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್‌ (DK Suresh) ಅವರು ಕೇಂದ್ರದ ಅನುದಾನ ತಾರತಮ್ಯ ವಿಚಾರದಲ್ಲಿ ಪ್ರತ್ಯೇಕ ದೇಶದ ಕೂಗು ಎಬ್ಬಿಸಿದ್ದಾರೆ. ಅಂಥವರನ್ನು ಗುಂಡಿಕ್ಕಿ ಕೊಲ್ಲಬೇಕು (Killing by Shooting) ಎಂಬರ್ಥದಲ್ಲಿ ಹೇಳಿಕೆ ನೀಡಿದ ಬಿಜೆಪಿಯ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ (KS Eshwarappa) ಅವರು ಈಗ ಸ್ವಲ್ಪ ಮೆತ್ತಗಾದಂತೆ ಕಂಡರು. ಶನಿವಾರ ಶಿವಮೊಗ್ಗದಲ್ಲಿ ‌ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರಾದರೂ ನಾನು ಡಿ.ಕೆ. ಸುರೇಶ್‌‌ ಅವರನ್ನೇ ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ʻʻಡಿ.ಕೆ.ಸುರೇಶ್ ಅವರೇ ನಿಮ್ಮ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ನಿಮ್ಮ ಹೇಳಿಕೆ ವಿರೋಧ ಇದೆ ಅಷ್ಟೇ. ಇದು ರಾಷ್ಟ್ರದ್ರೋಹಿ ಹೇಳಿಕೆ ಅಲ್ವಾ? ನಾನು ನಿಮ್ಮನ್ನು ಗುಂಡಿಕ್ಕಿ ಕೊಲ್ಲಿ ಅಂತಾ ಹೇಳಿಲ್ಲ, ಹೇಳೋಲ್ಲ. ನಾನು ಹೊಸ ಕಾನೂನು ತನ್ನಿ ಎಂದು ಹೇಳಿರುವುದು ಹೌದುʼʼ ಎಂದು ಹೇಳಿದ್ದಾರೆ.

ಡಿ.ಕೆ. ಸುರೇಶ್‌ ಅವರ ಮೇಲಿನ ಭಯ ಬಿಟ್ಟು ಕಾಂಗ್ರೆಸ್‌ನವರು ಅವರ ಮಾತನ್ನು ಒಪ್ಪುತ್ತಾರಾ ಎಂದು ಮೊದಲು ಯೋಜನೆ ಮಾಡಿ ಹೇಳಲಿ. ದೇಶದ ವಿಭಜನೆ ಮಾತಾನಾಡಿರುವುದು ಸರಿಯಲ್ಲ. ಇದು ರಾಷ್ಟದ್ರೋಹ ಹೇಳಿಕೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಕ್ರಮ ತೆಗೆದುಕೊಳ್ಳಬೇಕು. ಡಿ.ಕೆ. ಸುರೇಶ್ ಮೇಲೆ ಎಫ್ ಐ ಆರ್ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.

ನಾನೇ ಈಶ್ವರಪ್ಪನವರ ಮುಂದೆ ಹೋಗ್ತೀನಿ, ಅವರೇ ನನ್ನನ್ನು ಗುಂಡಿಕ್ಕಿ ಸಾಯಿಸಲಿ ಎಂಬ ಡಿ.ಕೆ. ಸುರೇಶ್‌ ಹೇಳಿಕೆಗೆ ಅವರು ಎಲ್ಲಿಗೆ ಬೇಕಾದ್ರೂ ಬರಲಿ. ಅವರಿಗೆ ಸ್ವಾತಂತ್ರ್ಯ ಇದೆ. ಸುರೇಶ್ ಹೇಳಿಕೆಗೆ ನನ್ನ ವಿರೋಧ ಅಷ್ಟೇ. ಅವರ ಮೇಲೆ ವೈಯಕ್ತಿಕ ದ್ವೇಷ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: MP DK Suresh : ನಾನೇ ನಿಮ್ಮ ಮುಂದೆ ಬರ್ತೇನೆ, ಗುಂಡಿಟ್ಟು ಕೊಲ್ಲಿ; ಈಶ್ವರಪ್ಪಗೆ ಡಿಕೆಸು ಸವಾಲ್‌

ಈಶ್ವರಪ್ಪ ಪರ ಬ್ಯಾಟ್‌ ಬೀಸಿದ ಯಡಿಯೂರಪ್ಪ

ಈಶ್ವರಪ್ಪ ಅವರ ಗುಂಡಿಕ್ಕಿ ಕೊಲ್ಲಿ ಹೇಳಿಕೆಯನ್ನು ಮಾಜಿ ಸಿಎಂ ಯಡಿಯೂರಪ್ಪ ಸಮರ್ಥಿಸಿದ್ದಾರೆ. ʻʻಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ನವರು ಅಪಾರ್ಥ ಕಲ್ಪಿಸುತ್ತಿದ್ದಾರೆ. ಟೀಕೆ ಟಿಪ್ಪಣಿ ಮಾಡ್ತಾ ಇರೋದಕ್ಕೂ ಈಶ್ವರಪ್ಪ ಹೇಳಿಕೆಗೂ ಸಂಬಂಧ ಇಲ್ಲ. ಈಶ್ವರಪ್ಪ ಹೇಳಿರುವುದು ಹೊಸ ಕಾನೂನು ತನ್ನಿ ಎಂದು. ಅದನ್ನು ಕಾಂಗ್ರೆಸ್ ನವರು ತಿರುಚುವ ಕೆಲಸ ಮಾಡ್ತಾ ಇದ್ದಾರೆʼʼ ಎಂದರು.

ಈಶ್ವರಪ್ಪ ಅವರ ಮೇಲೆ ಎಫ್ಐಆರ್ ಹಾಕಲಿ, ಯಾವುದೇ ತೊಂದರೆ ಇಲ್ಲ. ಆದರೆ, ತಪ್ಪು ಕಲ್ಪನೆ ಮಾಡಿಕೊಂಡು ಎಫ್ ಐ ಆರ್ ಹಾಕೋದು ಸರಿಯಲ್ಲ. ಇದರ ವಿರುದ್ಧ ಈಶ್ವರಪ್ಪ ಕಾನೂನು ಹೋರಾಟ ಮಾಡ್ತಾರೆ ಎಂದರು.

ಈಶ್ವರಪ್ಪ ವಿರುದ್ಧ ಡಿ.ಕೆ ಸುರೇಶ್‌, ಡಿ.ಕೆ ಶಿವಕುಮಾರ್‌ ಗರಂ

ಕೆ.ಎಸ್‌. ಈಶ್ವರಪ್ಪ ಹೇಳಿಕೆ ವಿರುದ್ಧ ಶನಿವಾರ ಬೆಳಗ್ಗೆ ಡಿ.ಕೆ. ಸುರೇಶ್‌ ಮತ್ತು ಡಿ.ಕೆ. ಶಿವಕುಮಾರ್‌ ಸಹೋದರರಿಬ್ಬರೂ ತೀವ್ರವಾಗಿ ಪ್ರತಿಕ್ರಿಯಿಸಿದ್ದರು. ಡಿ.ಕೆ. ಶಿವಕುಮಾರ್‌ ಅವರಂತೂ ಈಶ್ವರಪ್ಪ ಅವರು ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಕ್ಕೆ ಒಂದು ಹಂತದ ಸೆಟ್ಲ್‌ಮೆಂಟ್‌ ಮಾಡಲಾಗಿದೆ. ಈಗ ಮತ್ತೆ ಮಾತನಾಡಿದ್ದಾರೆ ಎಂದು ಹೇಳಿದರು.

Exit mobile version