Site icon Vistara News

KS Eshwarappa : ಶಿವಮೊಗ್ಗದಲ್ಲಿ ಪಕ್ಷೇತರನಾಗಿ ಸ್ಪರ್ಧೆ; ಬಂಡಾಯ ಸಾರಿದ ಈಶ್ವರಪ್ಪ

KS Eshwarappa

ಶಿವಮೊಗ್ಗ: ತಮ್ಮ ಪುತ್ರ ಕೆ.ಇ ಕಾಂತೇಶ್‌ (KE Kanthesh) ಅವರಿಗೆ ಲೋಕಸಭಾ ಚುನಾವಣೆಯ (Lok Sabha Election 2024) ಟಿಕೆಟ್‌ ಕೈತಪ್ಪಿದ್ದರಿಂದ ಆಕ್ರೋಶಿತರಾಗಿರುವ ಬಿಜೆಪಿಯ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ (KS Eshwarappa) ಅವರು ಬಂಡಾಯದ ಕಹಳೆ (Descident act by Eshwarappa) ಊದಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (Shivamogga Constituency) ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ (BY Raghavendra) ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ (Eshwarappa to Contest as Independent) ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ.

ಕಾಂತೇಶ್‌ ಅವರಿಗೆ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಬಂಜಾರ ಸಮುದಾಯ ಭವನದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಬಂಬಲಿಗರ ಸಭೆಯಲ್ಲಿ ಕೆ.ಎಸ್‌. ಈಶ್ವರಪ್ಪ ಈ ಘೋಷಣೆ ಮಾಡಿದರು.

ಸಭೆಯಲ್ಲಿ ಮಾತನಾಡಿದ ಕೆ.ಎಸ್‌. ಈಶ್ವರಪ್ಪ ಅವರು ಬಿ.ಎಸ್‌. ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ಬಿಜೆಪಿಯಲ್ಲೂ ಈಗ ಕಾಂಗ್ರೆಸ್‌ ಸಂಸ್ಕೃತಿ ಹೆಚ್ಚಾಗುತ್ತಿದೆ. ಕುಟುಂಬ ರಾಜಕಾರಣ ನಡೆಯುತ್ತಿದೆ. ಬಿಜೆಪಿ ಒಂದು ಕುಟುಂಬದ ಕೈಯಲ್ಲಿ ಇರಬಾರದು ಎನ್ನುವ ಕಾರಣಕ್ಕೆ ನಾನು ಪಕ್ಷೇತರನಾಗಿ ಚುನಾವಣೆಗೆ ನಿಲ್ಲುತ್ತಿದ್ದೇನೆ ಎಂದು ಈಶ್ವರಪ್ಪ ಚುನಾವಣಾ ಸ್ಪರ್ಧೆಯನ್ನು ಘೋಷಿಸಿದರು.

ಬಂಜಾರ ಸಮುದಾಯ ಭವನದಲ್ಲಿ ನಡೆದ ಈ ಸಭೆಯಲ್ಲಿ ನಾನಾ ಸಮುದಾಯದ ಮುಖಂಡರು, ಕೆ.ಇ. ಕಾಂತೇಶ್‌ ಮತ್ತು ಈಶ್ವರಪ್ಪ ಆಪ್ತರು ಭಾಗಿಯಾಗಿದ್ದರು. ಶಿವಮೊಗ್ಗ ಪಾಲಿಕೆಯ ಮಾಜಿ ಸದಸ್ಯರು ಕೂಡಾ ಇದ್ದರು.

ಇದನ್ನೂ ಓದಿ : KS Eshwarappa : ಹಾವೇರಿ ಟಿಕೆಟ್‌ ಸಿಗದಿದ್ರೆ ಕೆ.ಎಸ್ ಈಶ್ವರಪ್ಪ ರೆಬೆಲ್‌ ಆಗೋದು ಗ್ಯಾರಂಟಿ?

ಮೋದಿ ಫೋನ್‌ಗೆ ಬೆಲೆ ಕೊಟ್ಟು ಸ್ಪರ್ಧೆಯಿಂದ ಹಿಂದೆ ಸರಿದೆ, ಅದಕ್ಕೆ ಈ ಪರಿಸ್ಥಿತಿ

ಆವತ್ತು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಫೋನ್‌ ಮಾಡಿದರು. ನಾನು ಆವತ್ತು ನನ್ನ ಜನ್ಮ ಪಾವನ ಆಯ್ತು ಅಂದುಕೊಂಡಿದ್ದೆ. ಅದಕ್ಕೆ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ. ಅದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್‌ ಶೆಟ್ಟರ್‌ ಅವರಿಗೂ ಫೋನ್‌ ಬಂದಿತ್ತು. ಆದರೆ, ಅವರು ಬಂಡಾಯವೆದ್ದು ಬಿಜೆಪಿಗೇ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಹೋದರು. ಈಗ ಅವರು ಮರಳಿ ಬಂದಾಗ ಲೋಕಸಭೆ ಸ್ಪರ್ಧೆಗೆ ಟಿಕೆಟ್‌ ನೀಡಿದ್ದಾರೆ. ಆದರೆ, ನಾನು ಪಕ್ಷ ನಿಷ್ಠೆ ತೋರಿದ್ದಕ್ಕೆ ಸಿಕ್ಕಿದ್ದೇನು ಎಂದು ಸಭೆಯಲ್ಲಿ ಈಶ್ವರಪ್ಪ ಪ್ರಶ್ನೆ ಮಾಡಿದರು.

ಈಗ ಯಡಿಯೂರಪ್ಪನವರು ಒಂದು ಮಾತು ಹೇಳ್ತಾ ಇದಾರೆ. ಕಾಂತೇಶ್‌ಗೆ ವಿಧಾನ ಪರಿಷತ್ ಟಿಕೆಟ್ ಕೊಡ್ತೀವಿ ಅಂತ. ಇದು ಸುಳ್ಳು. ಇದನ್ನು ನಂಬುವುದು ಕಷ್ಟ ಎಂದು ಈಶ್ವರಪ್ಪ ಹೇಳಿದರು.

ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ಕೊಡಿಸಲು ಹಠ ಹಿಡಿದಿದ್ದಾರೆ ಎಂದು ನೀವು ಟೀವಿಯಲ್ಲಿ ನೋಡಿದ್ದೀರಿ. ನಾವು ಕೂಡಾ ಯಡಿಯೂರಪ್ಪ ಅವರ ಮನೆಗೆ ಹೋಗಿದ್ದೆವು. ನನ್ನ ಮಗ ಹಾವೇರಿ ಟಿಕೆಟ್‌ ಕೇಳ್ತಾ ಇದಾನೆ ಅಂದೆ. ನೀವು ಒಪ್ಪಿಗೆ ಕೊಟ್ರೆ.. ಅಂತಾ ಕಾಂತೇಶ್ ಕೇಳಿದ. ಆಗ ಯಡಿಯೂರಪ್ಪ ಅವರು ಟಿಕೆಟ್ ಕೊಡಿಸುವ ಜವಬ್ದಾರಿ ನನ್ದೆ, ಗೆಲ್ಲಿಸುವ ಜವಾಬ್ದಾರಿ ಕೂಡಾ ನನ್ನದೇ ಅಂದರು. ಹಾವೇರಿಯಲ್ಲಿ ಕಾಂತೇಶ್‌ ನಿಲ್ತಾ ಇದ್ರೆ ಗೆಲ್ತಿದ್ದ ಎಂದು ಈಶ್ವರಪ್ಪ ವಿವರಿಸಿದರು.

ʻʻನಿಮಗೆ ಶೋಭಾ ಕರಂದ್ಲಾಜೆ ಮೇಲೆ ಅಷ್ಟು ವಿಶ್ವಾಸ ಇದೆ. ನನ್ನ ಮಗನ ಮೇಲೆ ಯಾಕೆ ಅಷ್ಟೂ ವಿಶ್ವಾಸ ಇಲ್ವಾ ಯಡಿಯೂರಪ್ಪನವರೇ? ನಾನು ಸುಳ್ಳು ಹೇಳುತ್ತಿದ್ದರೆ ನನ್ನ ಮಗ ಹಾಳಾಗಿ ಹೋಗಲಿ. ಬೊಮ್ಮಾಯಿ ಬೇಡ ಬೇಡ ಅಂದ್ರೂ ಟಿಕೆಟ್ ಕೊಟ್ಟಿದ್ದಾರೆʼʼ ಎಂದು ಹೇಳಿದರು.

ನಾನು ಬಿಜೆಪಿ ಟಿಕೆಟ್ ಕೊಟ್ಟಿರುವವರಿಗಿಂತ ಒಂದು ಗುಲಗಂಜಿ ಜಾಸ್ತಿ ಇದ್ದೀನಿ. ಲಿಂಗಾಯತರು ನನ್ನನ್ನ ಕೈ ಬಿಟ್ಟಿಲ್ಲ. ಬ್ರಾಹ್ಮಣರೂ ನನ್ನ ಕೈ ಬಿಟ್ಟಿಲ್ಲ. ಹಾಗಾಗಿ ನನಗೆ ಗೆಲ್ಲುವ ಬಗ್ಗೆ ಯಾವುದೇ ಸಂಶಯಗಳಿಲ್ಲ ಎಂದು ಈಶ್ವರಪ್ಪ ಹೇಳಿದರು.

ನಾನು ಮೋದಿ ಅಭಿಮಾನಿ, ಗೆದ್ದು ಮತ್ತೆ ಬಿಜೆಪಿ ಸೇರುತ್ತೇನೆ ಎಂದ KS Eshwarappa

ನರೇಂದ್ರ ಮೋದಿಯವರನ್ನು ಎಲ್ಲಾ ದೇಶದವರು ಕೂಡ ನಮ್ಮ‌ ದೇಶಕ್ಕೆ ಬನ್ನಿ ಅಂತ ಆಹ್ವಾನಿಸುತ್ತಾರೆ. ಪಾಕಿಸ್ತಾನ ಇವತ್ತು ಒಬ್ಬಂಟಿಯಾಗಿರುವುದಕ್ಕೆ ಮೋದಿ ಕಾರಣ. ನನ್ನ ಜೀವನದಲ್ಲಿ ಇಂತಹ ದಿನ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ಪ್ರಾಣ ಹೋದರೂ ಮೋದಿ ವಿರುದ್ಧ ಹೋಗುವುದಿಲ್ಲ. ಮೋದಿಯವರು ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಇದೆ ಎಂದು ಹೇಳುತ್ತಾರೆ. ಅದರನ್ನು ತೊಲಗಿಸಬೇಕು ಎನ್ನುತ್ತಾರೆ. ಆದರೆ, ರಾಜ್ಯದಲ್ಲಿ ಇತ್ತೀಚೆಗೆ ಬಿಜೆಪಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಬಂದಿದೆ. ಕುಟುಂಬ ರಾಜಕಾರಣದ ಪರಿಸ್ಥಿತಿ ಬಿಜೆಪಿಗೆ ಬಂದಿದೆ ಎಂದು ಹೇಳಿದ ಈಶ್ವರಪ್ಪ ಅವರು, ನಾನು ಚುನಾವಣೆಗೆ ನಿಂತು ಗೆದ್ದು ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಹೇಳಿದರು.

Exit mobile version