Site icon Vistara News

Shivamogga News: ಆಧುನಿಕತೆಗೆ ತಕ್ಕಂತೆ ಡಿಜಿಟಲ್ ಗ್ರಂಥಾಲಯ ಅಭಿವೃದ್ಧಿ: ಮಧು ಬಂಗಾರಪ್ಪ

Shivamogga News: Libraries provide knowledge that no other university in the world can provide says Minister S Madhu Bangarappa

ಸೊರಬ: ಜಗತ್ತಿನ ಯಾವುದೇ ವಿಶ್ವವಿದ್ಯಾಲಯಗಳು ನೀಡದ ಜ್ಞಾನವನ್ನು (Knowledge) ಗ್ರಂಥಾಲಯಗಳು (Libraries) ಒದಗಿಸುತ್ತವೆ, ಈ ನಿಟ್ಟಿನಲ್ಲಿ ಆಧುನಿಕತೆಗೆ ತಕ್ಕಂತೆ ಡಿಜಿಟಲ್ ಗ್ರಂಥಾಲಯವನ್ನು ಅಭಿವೃದ್ಧಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಹಾಗೂ ಜಿಲ್ಲಾ ಗ್ರಂಥಾಲಯ ಇವರ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಮತ್ತು ಸಿಬ್ಬಂದಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಂಥಾಲಯಗಳು ಜ್ಞಾನದ ಸಂಪತ್ತಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗೆ ಅನೇಕ ಪುಸ್ತಕಗಳು ದೊರೆಯುತ್ತಿದೆ. ದೇಶದಲ್ಲಿಯೇ ಅತಿ ಹೆಚ್ಚು ಗ್ರಂಥಾಲಯಗಳನ್ನು ಹೊಂದಿರುವ ರಾಜ್ಯದಲ್ಲಿ ಸಿಬ್ಬಂದಿ ಕೊರತೆಯಾಗದಂತೆ ನಿಗಾವಹಿಸಲಾಗುವುದು ಎಂದರು.

ಇದನ್ನೂ ಓದಿ: Vastu Tips: ಸಂಪತ್ತು, ಆರೋಗ್ಯ ವೃದ್ಧಿಗೆ ಇಲ್ಲಿದೆ ಸರಳ ಮಾರ್ಗ

ಓದಿಗೆ ವಯಸ್ಸಿನ ಭೇದವೆಂಬುದು ಇಲ್ಲ. ಎಲ್ಲಾ ವಯೋಮಾನದವರು ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಒಳಗಾಗದಂತೆ ಡಿಜಿಟಲ್ ಗ್ರಂಥಾಲಯದ ಮೂಲಕ ಜ್ಞಾನದ ವೃದ್ಧಿಗಾಗಿ ಓದಿನೆಡೆ ಸೆಳೆಯುವ ಕಾರ್ಯ ಮಾಡಲಾಗುವುದು.

ವಿದೇಶದ ಓದುಗರು ಸೇರಿದಂತೆ ಪ್ರಸ್ತುತ 4.5 ಕೋಟಿ ಓದುಗರು ಡಿಜಿಟಲ್ ಗ್ರಂಥಾಲಯದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಡಿಜಿಟಲ್ ಗ್ರಂಥಾಲಯದಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಇನ್ನೆರಡು ತಿಂಗಳಲ್ಲಿ ಪುನಃ ಬಿಡುಗಡೆ ಮಾಡುವ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಂಥಾಲಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸುಮಾರು 23 ಜನ ಸಿಬ್ಬಂದಿಗೆ ಸಿಬ್ಬಂದಿ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕಿರು ಪರಿಚಯದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: ICC World Cup 2023: ವಿಶ್ವ ದಾಖಲೆ ಬರೆದ ವಿಶ್ವಕಪ್​!

ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ರಾಂತ ನಿರ್ದೇಶಕ ಡಾ. ಪಿ.ವೈ. ರಾಜೇಂದ್ರ ಕುಮಾರ್, ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಡಾ. ಪಿ.ವಿ. ಕೊಣ್ಣೂರು ಮಾತನಾಡಿದರು.

ಇದಕ್ಕೂ ಮೊದಲು ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗ ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಡೊಳ್ಳು ಹೊಡೆಯುವುದರ ಮೂಲಕ ಮೆರವಣಿಗೆಗೆ ಸಚಿವ ಎಸ್. ಮಧು ಬಂಗಾರಪ್ಪ ಚಾಲನೆ ನೀಡಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶಕುಮಾರ್ ಎಸ್. ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದನ್ನೂ ಓದಿ: ಕರ್ನಾಟಕಕ್ಕೆ ತಪ್ಪಿದ ಟೆಸ್ಲಾ ಫ್ಯಾಕ್ಟರಿ ಮಹಾರಾಷ್ಟ್ರ, ತಮಿಳು ನಾಡು, ಗುಜರಾತ್‌ನಲ್ಲಿ ಸ್ಥಾಪನೆ?

ಈ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಪಿ.ಆರ್. ತಿಪ್ಪೆಸ್ವಾಮಿ, ತಹಸೀಲ್ದಾರ್ ಹುಸೇನ್ ಎ. ಸರಕಾವಸ್, ತಾಪಂ ಇಒ ಡಾ. ಎನ್.ಆರ್. ಪ್ರದೀಪಕುಮಾರ್, ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್. ಮಂಜುನಾಥ್, ಶಾಖಾ ಗ್ರಂಥಾಲಯದ ಸಹಾಯಕ ಗ್ರಂಥಪಾಲಕ ಟಿ.ಜಿ. ಕೃಷ್ಣಮೂರ್ತಿ, ಗ್ರಂಥಾಲಯ ನೌಕರರ ಸಂಘದ ಅಧ್ಯಕ್ಷ ಸಿ.ಕೆ. ಬಲೀಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಟಿ. ಬಾಲಚಂದ್ರ, ಪುರಸಭೆ ಸದಸ್ಯರಾದ ಎಂ.ಡಿ. ಉಮೇಶ್, ಮಧುರಾಯ್ ಜಿ. ಶೇಟ್, ಶ್ರೀರಂಜನಿ ಪ್ರವೀಣ್ ಕುಮಾರ್, ಡಿ.ಎಸ್. ಪ್ರಸನ್ನಕುಮಾರ್ ದೊಡ್ಮನೆ, ಪ್ರೇಮಾ, ಜಯಲಕ್ಷ್ಮಿ, ಆಫ್ರೀನಾ, ಸುಲ್ತಾನಾಬಾನು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಗ್ರಂಥಾಲಯ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version