ಬೆಂಗಳೂರು: ಶರಾವತಿ ಜಲ ವಿದ್ಯುತ್ ಯೋಜನೆಯಲ್ಲಿ ಜಮೀನು ಕಳೆದುಕೊಂಡು ದಶಕಗಳಿಗೂ ಹೆಚ್ಚು ಸಮಯದಿಂದ ಪರಿಹಾರಕ್ಕಾಗಿ ಕಾಯುತ್ತಿರುವವರಿಗೆ ಪರಿಹಾರ ಕಲ್ಪಿಸುವ ಕುರಿತಂತೆ ಗೃಹಸಚಿವ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು.
ರೈತ ಕುಟುಂಬಗಳಿಗೆ ಪರಿಹಾರ ಒದಗಿಸುವ ಸಂಬಂಧ ಸಾಗರ ಶಾಸಕ ಹರತಾಳು ಹಾಲಪ್ಪ, ಸಂತ್ರಸ್ತರ ನಿಯೋಗದ ಸದಸ್ಯರ ಜತೆ ಸಭೆ ನಡೆಸಿದರು.
ಈ ಕುರಿತು ಕೂಲಂಕಷವಾಗಿ ಚರ್ಚಿಸಿ, ಪರಿಹಾರ ಕಂಡು ಕೊಳ್ಳಬೇಕು. ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ದೆಹಲಿಗೆ ನಿಯೋಗ ಕೊಂಡೊಯ್ಯಬೇಕು. ಸಂತ್ರಸ್ತರ ನೆರವಿಗೆ ನಿಲ್ಲಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಈ ಕುರಿತಂತೆ ಸಭೆಯ ಬಳಿಕ ಮಾಹಿತಿ ನೀಡಿದ ಶಾಸಕ ಹರತಾಳು ಹಾಲಪ್ಪ, ಶಿವಮೊಗ್ಗ ಜಿಲ್ಲೆಯ ಶರಾವತಿ ಸಂತ್ರಸ್ತರಿಗಾಗಿ ಅಂದು ಸುಮಾರು 6ಸಾವಿರ ಎಕರೆ ಅರಣ್ಯ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆದರೆ ಹೈಕೋರ್ಟ್ 1980ರ ಅರಣ್ಯ ಕಾಯ್ದೆಯಂತೆ ಕೇಂದ್ರ ಸರ್ಕಾರದ ಪೂರ್ವನುಮತಿಯಿಲ್ಲದೇ ಜಮೀನು ನೋಟಿಫಿಕೇಶನ್ ಮಾಡಿರುವುದು ಮಂಜೂರು ಮಾಡಿರುವುದು ಸರಿಯಲ್ಲ. ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿತ್ತು. ಹೈಕೋರ್ಟ್ ರದ್ದುಗೊಳಿಸಿರುವ ಎಲ್ಲ 57 ಅತಿ ಸೂಚನೆಗಳನ್ನು ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ಊರ್ಜಿತಗೊಳಿಸಬಹುದಾಗಿದೆ ಈ ಹಿನ್ನಲೆಯಲ್ಲಿ ಕೇಂದ್ರಕ್ಕೆ ನಿಯೋಗ ಕರೆದೊಯ್ದು ಅನುಷ್ಠಾನಗೊಳಿಸುವಂತೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ, ಸಾಂಖ್ಯಿಕ ಮತ್ತು ಯೋಜನಾ ಅಧಿಕಾರಿಗಳ ಸ್ಪಷ್ಟ ಮಾಹಿತಿಯನ್ನು ಕಲೆ ಹಾಕಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಈಗಾಗಲೇ ನೋಟಿಫಿಕೇಶನ್ ಮಾಡಿರುವ ಆರು ಸಾವಿರ ಎಕರೆ ಜಮೀನಿಗೆ ಇನ್ನೂ ಮೂರು ಸಾವಿರ ಎಕರೆ ಅರಣ್ಯ ಭೂಮಿಯನ್ನು ಸೇರ್ಪಡೆಗೊಳಿಸುವಂತೆ ವರದಿಯಲ್ಲಿ ಪ್ರಸ್ತಾಪಿಸುವಂತೆ ಚರ್ಚಿಸಲಾಯಿತು ಎಂದು ಹೇಳಿದರು.
ಸಭೆಯಲ್ಲಿ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಇಲಾಖೆಯ ಡಿಸಿಎಫ್ ಸಂಜಯ್ ಬಿಜ್ನೂರ್ , ಶರಾವತಿ ಮುಳುಗಡೆ ಪ್ರದೇಶದ ರೈತರಾದ ಕಾಳನಾಯ್ಕ, ತಿಮ್ಮಪ್ಪ ಕುಂಬ್ರಿ, ಕೃಷ್ಣಮೂರ್ತಿ, ಜಾನಪದ ಆಕಾಡೆಮಿ ಮಾಜಿ ಸದಸ್ಯ ಬೂದ್ಯಪ್ಪ, ಸೇರಿದಂತೆ ಮುಳಗಡೆ ರೈತ ಮುಖಂಡರು ಹಾಜರಿದ್ದರು.
ಇದನ್ನೂ ಓದಿ | ಎಲೆಕ್ಷನ್ ಹವಾ | ಸಾಗರ | ಕಾಂಗ್ರೆಸ್ ಟಿಕೆಟ್ ಬೇಳೂರುಗೋ, ಕಾಗೋಡು ಪುತ್ರಿಗೋ ?