ಶಿವಮೊಗ್ಗ : ಈ ಬಾರಿ 400 ಮೀರಿ – ಇದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶಿವಮೊಗ್ಗದ ಅಲ್ಲಮ ಪ್ರಭು ಮೈದಾನದಲ್ಲಿ (Modi in Shivamogga) ನಡೆದ ಬಿಜೆಪಿಯ ಲೋಕಸಭಾ ಚುನಾವಣಾ (Lok Sabha Election 2024) ಪ್ರಚಾರ ಸಮಾವೇಶದಲ್ಲಿ ನೀಡಿದ ಹೊಸ ಘೋಷ ವಾಕ್ಯ. ಈ ಬಾರಿ ದೇಶದ ಜನರು ಬಿಜೆಪಿಗೆ 400ಕ್ಕೂ ಅಧಿಕ ಸ್ಥಾನಗಳನ್ನು ನೀಡಲು ಸಿದ್ಧರಾಗಿದ್ದಾರೆ ಎಂದು ಪ್ರಧಾನಿ ಹೇಳಿದರು ಮತ್ತು ಅದನ್ನು ಸಾಧ್ಯಗೊಳಿಸಲು ಕರ್ನಾಟಕದ ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಾಹನ ರ‍್ಯಾಲಿಯಲ್ಲಿ ಅಲ್ಲಮ ಪ್ರಭು ಮೈದಾನಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಸಭಾಂಗಣದ ಒಳಗೆ ತೆರೆದ ವಾಹನದ ರ‍್ಯಾಲಿ ನಡೆಸಿ ಎಲ್ಲರನ್ನೂ ಆತ್ಮೀಯವಾಗಿ ಎದುರ್ಗೊಂಡರು. ಅಲ್ಲಿಂದ ವೇದಿಕೆಗೆ ತೆರಳಿದಾಗ ಇಡೀ ಮೈದಾನದಲ್ಲಿ ಹೈ ಮೋದಿ, ಜೈ ಶ್ರೀರಾಮ್ ಎಂಬ ಘೋಷ ವಾಕ್ಯ ಮೊಳಗಿತು.
ಭಾಷಣದ ಆರಂಭದಲ್ಲಿ ಶಕ್ತಿ ಸ್ವರೂಪಿಣಿ ಸಿಗಂಧೂರು ಚೌಡೇಶ್ವರಿಯನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಲು ಪಟ್ಟ ಕಷ್ಟವನ್ನೂ ಕಣ್ಣೆದುರು ತೆರೆದಿಟ್ಟರು. ಇಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತ ಮುನ್ಸಿಪಾಲಿಟಿ ಮೆಂಬರ್ ಆಗುವ ಪರಿಸ್ಥಿತಿ ಇರಲಿಲ್ಲ. ಆ ಕಾಲದಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಯೌವನವನ್ನು ಇಲ್ಲಿ ಬಿಜೆಪಿಗಾಗಿ ಸಮರ್ಪಿಸಿದರು. ಇದು ಯಡಿಯೂರಪ್ಪ ಅವರ ತಪೋಭೂಮಿಯಾಗಿ ಬೆಳೆದು ಬಿಜೆಪಿಯ ಶಕ್ತಿಯಾಗಿದೆ ಎಂದರು.
ಯಾಕೆ ಈ ಬಾರಿ ಯಾಕೆ ಬಿಜೆಪಿಗೆ 400 ಸ್ಥಾನ ಬೇಕು?
ಈ ಚುನಾವಣೆಯಲ್ಲಿ ಬಿಜೆಪಿಗೆ ನಾಲ್ಕು ನೂರಕ್ಕೂ ಅಧಿಕ ಸ್ಥಾನ ಕೊಡಬೇಕು ಎಂದು ಕೇಳಿದ ಅವರು ಅದಕ್ಕೆ ಕೆಲವು ಕಾರಣಗಳನ್ನು ನೀಡಿದರು. ವಿಕಸಿತ ಭಾರತಕ್ಕಾಗಿ, ವಿಕಸಿತ ಕರ್ನಾಟಕಕ್ಕಾಗಿ, ಯುವಜನರ ಆಶಾವಾದ ಪೂರೈಸಲು, ಬಡವರ ಕಲ್ಯಾಣಕ್ಕಾಗಿ, ರೈತರ ಅಭಿವೃದ್ಧಿಗಾಗಿ, ಭಯೋತ್ಪಾದನೆ ನಿಗ್ರಹಕ್ಕಾಗಿ, ಕಾಶ್ಮೀರದ ಅಭಿವೃದ್ಧಿಗಾಗಿ, ಮಹಿಳೆಯರ ಸಬಲೀಕರಣಕ್ಕಾಗಿ ಬಿಜೆಪಿಗೆ 400ಕ್ಕೂ ಅಧಿಕ ಸ್ಥಾನ ಬೇಕು ಎಂದು ಕೇಳಿದರು.
ಕಾಂಗ್ರೆಸ್‌ಗೆ ಒಂದು ಅಭಿವೃದ್ಧಿಯ ಅಜೆಂಡಾವೇ ಇಲ್ಲ
ಕಾಂಗ್ರೆಸ್ ನ್ನು ತಮ್ಮ ತೀವ್ರ ವಾಗ್ಬಾಣಗಳಿಂದ ಚುಚ್ಚಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿಯ ಅಜೆಂಡಾವೇ ಇಲ್ಲ ಎಂದರು.
ಕಾಂಗ್ರೆಸ್‌ನ ಪ್ರಮುಖ ಅಜೆಂಡಾ ಸುಳ್ಳು ಹೇಳುವುದು. ಒಂದು ಬಾರಿ ಸುಳ್ಳು ಹೇಳುವುದು, ಅದನ್ನು ಮತ್ತೆ ಮತ್ತೆ ಹೇಳುವುದು, ದೊಡ್ಡ ದೊಡ್ಡ ಸುಳ್ಳು ಹೇಳುವುದು, ಸುಳ್ಳುಗಳನ್ನು ನಿಜವೆಂದು ಸಾಧಿಸಲು ಮತ್ತಷ್ಟು ಸುಳ್ಳು ಹೇಳುವುದು ಎಂದು ಪ್ರಧಾನಿ ಗೇಲಿ ಮಾಡಿದರು. ಒಂದೊಮ್ಮೆ ಏನಾದರೂ ತಪ್ಪು ಮಾಡಿ ಸಿಕ್ಕಿ ಬಿದ್ದರೆ ಅದನ್ನು ಬೇರೆಯವರ ತಲೆಗೆ ಕಟ್ಟಿ ಸುಮ್ಮನಿರುವುದು ಅದರ ಪ್ರಧಾನ ಅಜೆಂಡಾ ಎಂದರು.
ಕರ್ನಾಟಕದಲ್ಲಿ ಎಷ್ಟೊಂದು ಸಿಎಂಗಳಿದ್ದಾರೆ ಗೊತ್ತಾ?
ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಆಡಳಿತ ನಡೆಸಲು ಒಂದು ಅವಕಾಶ ಸಿಕ್ಕಿದೆ. ಅದನ್ನು ಅವರು ಅವರನ್ನು ಸದುಪಯೋಗಪಡಿಸಿಕೊಳ್ಳುವ ಬದಲು ದುರುಪಯೋಗ ಪಡಿಸಿಕೊಂಡಿದ್ದಾರೆ. ಇಲ್ಲಿ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮಗಳಿಲ್ಲ. ಅಭಿವೃದ್ಧಿಗೆ ನಯಾ ಪೈಸೆ ಕೂಡಾ ಇಲ್ಲ ಎಂದು ಹೇಳಿದರು.
ಕರ್ನಾಟಕವನ್ನು ಅವರು ಕಾಂಗ್ರೆಸ್‌ನ ಎಟಿಎಂ ಮಾಡಿಕೊಳ್ಳಲು ಬಳಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಅಭಿವೃದ್ಧಿಗೆ ಹಣವೇ ಇಲ್ಲದಂತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ರಾಜ್ಯದಲ್ಲಿ ಇರುವುದು ಒಬ್ಬ ಮುಖ್ಯಮಂತ್ರಿಯಲ್ಲ. ಹಲವು ಮುಖ್ಯಮಂತ್ರಿಗಳಿದ್ದಾರೆ ಎಂದ ಅವರು ಇಲ್ಲಿ ಒಬ್ಬರು ಸಿಎಂ ಆಗಲು ಕಾಯುತ್ತಿದ್ದಾರೆ, ಅವರು ಸಿಎಂ ಇನ್ ವೇಟಿಂಗ್, ಇಲ್ಲಿ ಹಲವರು ಮುಂದಿನ ಸಿಎಂ ಆಗಲು ಆಕಾಂಕ್ಷಿಗಳಾಗಿದ್ದಾರೆ, ಕಾತರರಾಗಿದ್ದಾರೆ. ಇಲ್ಲಿ ಸೂಪರ್ ಸಿಎಂಗಳಿದ್ದಾರೆ, ಶ್ಯಾಡೋ (ಛಾಯಾ) ಸಿಎಂಗಳಿದ್ದಾರೆ. ಇವರ ನಡುವೆ ದಿಲ್ಲಿಯ ಒಬ್ಬ ಕಲೆಕ್ಷನ್ ಮಿನಿಸ್ಟರ್ ಕೂಡಾ ಇದ್ದಾರೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್‌ನ ಈ ಎಲ್ಲ ಅಪಸವ್ಯಗಳಿಂದ ಜನರು ಎಷ್ಟೊಂದು ಅಕ್ರೋಶಿತರಾಗಿದ್ದಾರೆ ಎಂದರೆ ಈ ಬಾರಿ ಎಲ್ಲ 28 ಸಂಸತ್ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು ಪ್ರಧಾನಿ ಮೋದಿ.
ಶಿವಮೊಗ್ಗ, ದಾವಣಗೆರೆ, ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಸಮಾವೇಶ ಇದಾಗಿದ್ದು, ಬಿಜೆಪಿ ಅಭ್ಯರ್ಥಿಗಳಾd ಬಿ.ವೈ ರಾಘವೇಂದ್ರ, ಗಾಯತ್ರಿ ಸಿದ್ದೇಶ್ವರ್, ಕೋಟ ಶ್ರೀನಿವಾಸ ಪೂಜಾರಿ ಮತ್ತು ಕ್ಯಾ. ಬ್ರಿಜೇಶ್ ಚೌಟ ಭಾಗವಹಿಸಿದ್ದರು. ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
ಇದನ್ನೂ ಓದಿ : Modi in Shivamogga LIVE : ಮಲೆನಾಡಿನಲ್ಲಿ ಮೋದಿ ಮತ ಶಿಕಾರಿ, ಬಿಸಿಲಲ್ಲೂ ರಣೋತ್ಸಾಹ : ಇಲ್ಲೇ LIVE ನೋಡಿ
Watch PM @narendramodi campaign in Telangana, Karnataka and Tamil Nadu today. pic.twitter.com/0TXFCi0PJV
— narendramodi_in (@narendramodi_in) March 18, 2024