ಶಿವಮೊಗ್ಗ : ವ್ಯಕ್ತಿಯೊಬ್ಬ ವೃದ್ಧೆಯನ್ನು ಬರ್ಬರವಾಗಿ ಕೊಲೆ (Murder Case) ಮಾಡಿದ್ದಾನೆ. ಶಿವಮೊಗ್ಗದ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಫಜಲುನ್ನಿಸ್ಸಾ (70) ಕೊಲೆಯಾದವರು.
ಮಂಜುನಾಥ್ ಕೊಲೆ ಆರೋಪಿಯಾಗಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ತಸಿಕ್ತವಾಗಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು , ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಇನ್ನೂ ಕೊಲೆ ವಿಷಯ ತಿಳಿಯುತ್ತಿದ್ದಂತೆ ಮನೆ ಮುಂದೆ ನೂರಾರು ಮಂದಿ ಜಮಾಯಿಸಿದ್ದರು.
ಮಚ್ಚು ಬೀಸಿ ಹಲ್ಲೆ ಮಾಡಿದ ಅಪ್ರಾಪ್ತ!
ಶಿವಮೊಗ್ಗದ ಟಿಪ್ಪುನಗರದ ಸಮೀಪ ಅನ್ಯಕೋಮಿನ ಬಾಲಕನೊಬ್ಬ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಡಿಕೊಪ್ಪದ ನಿವಾಸಿ ಮಲ್ಲೇಶ್ (40) ಹಲ್ಲೆಗೊಳಗಾದವರು. ಮಲ್ಲೇಶ್ ಅವರು ಮಟನ್ ಖರೀದಿ ಮಾಡುವಾಗ ಅಪ್ರಾಪ್ತ ಮುಖಕ್ಕೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡಿರುವ ಮಲ್ಲೇಶ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನೆ ಮಾಡಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Food Poisoning : ಮೈಸೂರಲ್ಲಿ ಗೃಹ ಪ್ರವೇಶದ ಊಟ ತಿಂದ ವೃದ್ಧೆ ಸಾವು; 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಚಾಮರಾಜನಗರದಲ್ಲಿ ಅತ್ತಿಗೆ ಮೇಲಿನ ಮೋಹಕ್ಕೆ ಅಣ್ಣನನ್ನೇ ಕೊಂದ ಕಾಮುಕ ತಮ್ಮ
ಚಾಮರಾಜನಗರ: ಪಾಪಿ ತಮ್ಮನೊಬ್ಬ ಒಡಹುಟ್ಟಿದ ಅಣ್ಣನನ್ನೇ ಚಾಕುವಿನಿಂದ ಇರಿದು (Murder Case) ಕೊಂದಿದ್ದಾನೆ. ಚಾಮರಾಜನಗರದ (chamarajanagara News) ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಚೌಡಹಳ್ಳಿ ಗ್ರಾಮದ ಪ್ರಸಾದ್ (45) ಕೊಲೆಯಾದ ದುರ್ದೈವಿ. ಪ್ರಸಾದ್ ಸಹೋದರ ಕುಮಾರ್ (39) ಎಂಬಾತನಿಂದ ಈ ಕೃತ್ಯ ನಡೆದಿದೆ.
ಆರೋಪಿ ಕುಮಾರ್‌ನ ಕಾಮುಕತ್ವ ಎಷ್ಟರ ಮಟ್ಟಿಗೆ ಇತ್ತೆಂದರೆ, ಅತ್ತಿಗೆಗೆ ತನ್ನ ಜತೆ ಅನೈತಿಕ ಸಂಬಂಧ ಹೊಂದುವಂತೆ ಕಾಮುಕ ಮೈದುನ ನಿತ್ಯ ಪೀಡಿಸುತ್ತಿದ್ದನಂತೆ. ಇದೇ ವಿಚಾರಕ್ಕೆ ಅಣ್ಣ-ತಮ್ಮನ ನಡುವೆ ಶನಿವಾರ ರಾತ್ರಿ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ನಿನ್ನ ಹೆಂಡತಿ ಬೇರೆಯವರ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದಿದ್ದಾನೆ.
ಇದರಿಂದ ಸಿಟ್ಟಾದ ಪ್ರಸಾದ್ ತಮ್ಮ ಕುಮಾರ್‌ಗೆ ಹೊಡೆಯಲು ಹೋಗಿದ್ದಾರೆ. ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿ ಕುಮಾರ್ ಸಿಟ್ಟಿನಲ್ಲಿ ಅಣ್ಣ ಪ್ರಸಾದ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಗುಂಡ್ಲುಪೇಟೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ