Site icon Vistara News

Naxal leader: ನಕ್ಸಲ್‌ ನಾಯಕ ಬಿ.ಜಿ. ಕೃಷ್ಣಮೂರ್ತಿಗೆ ಜೈಲಲ್ಲೇ ಟ್ರೀಟ್ಮೆಂಟ್; ಶಿವಮೊಗ್ಗ ಕೋರ್ಟ್‌ಗೆ ಆದೇಶ

bg Krishnamurthy naxal leader

ಶಿವಮೊಗ್ಗ: ಮಾವೋವಾದಿ ನಕ್ಸಲರ (Maoist Naxal leader) ಪ್ರಮುಖ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು (BG Krishnamurthy) ಬುಧವಾರ (ಜ.31) ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಒಂದು ಪ್ರಕರಣವನ್ನು ಮುಂದೂಡಲಾಗಿದೆ. ಇನ್ನೊಂದು ಪ್ರಕರಣದ ವಿಚಾರಣೆಯು ಗುರುವಾರ (ಫೆ. 1) ನಡೆಯಲಿದೆ. ಇನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿಗೆ ಜೈಲಿನಲ್ಲಿ ಚಿಕಿತ್ಸೆ ನೀಡಲು ಕೋರ್ಟ್‌ ಅವಕಾಶ ನೀಡಿದೆ.

ಒಟ್ಟು 5 ವಿವಿಧ ಕೇಸ್‌ಗಳ ಅಡಿಯಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ಪೊಲೀಸರು ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯದ ಎದುರು ಬಿ.ಜಿ. ಕೃಷ್ಣಮೂರ್ತಿಯನ್ನು ಹಾಜರು ಪಡಿಸಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ಮಂಗಳವಾರ ರಾತ್ರಿ ಬಿ.ಜಿ. ಕೃಷ್ಣಮೂರ್ತಿಯನ್ನು ಶಿವಮೊಗ್ಗಕ್ಕೆ ಪೊಲೀಸರು ಕರೆತಂದಿದ್ದಾರೆ.

ನಕ್ಸಲ್‌ ಚಟುವಟಿಕೆ ಹಿನ್ನೆಲೆಯಲ್ಲಿ ಮಾಡಲಾಗಿದ್ದ ಆರೋಪವನ್ನು ಕೋರ್ಟ್‌ನಲ್ಲಿ ಬಿ.ಜಿ.ಕೃಷ್ಣಮೂರ್ತಿ ಅಲ್ಲಗಳೆದಿದ್ದಾನೆ. ಈ ವೇಳೆ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಅವರು ವಿಚಾರಣೆಯನ್ನು ಮುಂದೂಡಿದ್ದಾರೆ. ಆದರೆ, ಮತ್ತೊಂದು ಕೇಸ್‌ನಲ್ಲಿ ನಾಳೆ ವಿಚಾರಣೆಯನ್ನು ನಡೆಸಲಾಗುವುದು ಎಂದು ಕೋರ್ಟ್‌ ಹೇಳಿದೆ. ಹೀಗಾಗಿ ಬುಧವಾರ ಕೃಷ್ಣಮೂರ್ತಿ ಶಿವಮೊಗ್ಗದ ಸೆಂಟ್ರಲ್ ಜೈಲಿನಲ್ಲಿರಲಿದ್ದಾನೆ.

ಬಿ.ಜಿ. ಕೃಷ್ಣಮೂರ್ತಿ ದಾಖಲಾಗಿರುವ ಪ್ರಕರಣಗಳಾವುವು?

ತೀರ್ಥಹಳ್ಳಿ ಠಾಣೆಯ ಅಪರಾಧ ಸಂಖ್ಯೆ 94/06, 174/07, ಆಗುಂಬೆ ಪೊಲೀಸ್ ಠಾಣೆಯ 12/09, 51/09 ಹಾಗೂ 03/12 ಪ್ರಕರಣಗಳಲ್ಲಿ ಬಿಜಿಕೆ ಆರೋಪಿಯಾಗಿದ್ದಾನೆ. ಎನ್‌ಕೌಂಟರ್‌ನಲ್ಲಿ ಹತನಾದ ಸಾಕೇತ್ ರಾಜನ್ (Saketh Rajan) ಬಳಿಕ ನಕ್ಸಲ್ ನಾಯಕನಾಗಿ ಗುರುತಿಸಿಕೊಂಡಿದ್ದ ಬಿ.ಜಿ.ಕೃಷ್ಣಮೂರ್ತಿ, 2021ರ ನವೆಂಬರ್‌ನಲ್ಲಿ ಕೇರಳ ಪೊಲೀಸರಿಂದ ಬಂಧಿತನಾಗಿದ್ದ. ಚಿಕ್ಕಮಗಳೂರು ಜಿಲ್ಲೆಯ ನೆಮ್ಮಾರು ಬುಕ್ಕಡಿಬೈಲ್ ಗ್ರಾಮದ ಬಿ.ಜಿ.ಕೃಷ್ಣಮೂರ್ತಿ ದಾಖಲಾದ 5 ಕೇಸ್‌ಗಳಲ್ಲೂ ಪ್ರಮುಖ ಆರೋಪಿಯಾಗಿದ್ದಾನೆ.

ತೀರ್ಥಹಳ್ಳಿ ಪೊಲೀಸ್ ಠಾಣೆಯ ಕೇಸ್ ನಂ 94/06ರಲ್ಲಿ ಬಿಜಿಕೆ ಎ-2 ಆರೋಪಿಯಾಗಿದ್ದಾನೆ. ಆಗುಂಬೆ ಸಮೀಪದ ಉಳ್ಮಡಿ ಗ್ರಾಮದ ತಿಮ್ಮಪ್ಪ ಗೌಡ ಎಂಬವರಿಗೆ ಬೆದರಿಕೆ ಹಾಕಲಾಗಿತ್ತು. ಗದ್ದೆಯಲ್ಲಿ ನೀರಿನ ಕಾಲುವೆ ಬಿಡುವಂತೆ 2006 ಮಾರ್ಚ್ 17ರಂದು ಮನೆಗೆ ಬಂದಿದ್ದ ನಕ್ಸಲ್ ಗ್ಯಾಂಗ್ ಜೀವ ಬೆದರಿಕೆ ಹಾಕಿತ್ತು. ಕಾಲುವೆ ಬಿಡದಿದ್ದರೆ ಜೀವ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿತ್ತು.

ತೀರ್ಥಹಳ್ಳಿ ಪೊಲೀಸ್ ಠಾಣೆಯ ಕೇಸ್ ನಂ 174/07ರಲ್ಲಿ, ಸರ್ಕಾರಿ ಬಸ್‌ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಎ-3 ಆರೋಪಿಯಾಗಿದ್ದಾನೆ. ತೀರ್ಥಹಳ್ಳಿಯ ತಲ್ಲೂರಂಗಡಿ ಬಳಿ 2007ರ ಜುಲೈ 1ರಂದು ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಸಿಗೆ ಡಿಸೇಲ್ ಸುರಿದು ಬೆಂಕಿ ಹಚ್ಚಿದ್ದರು. ಮಾವೋವಾದಿ ಜಿಂದಾಬಾದ್- ನಕ್ಸಲೈಟ್ ಜಿಂದಾಬಾದ್ ಎಂದು ಕೂಗುತ್ತಿದ್ದ ಗ್ಯಾಂಗ್, ಪೊಲೀಸರು- ಪತ್ರಿಕೆಯವರಿಗೆ ಕೊಡುವಂತೆ ಬಸ್‌ನಲ್ಲಿದ್ದವರಿಗೆ ಕರಪತ್ರ ಕೊಟ್ಟಿತ್ತು.

ದರೋಡೆ ಕೇಸ್

ಆಗುಂಬೆ ಠಾಣೆಯ ಕೇಸ್ ನಂ. 12/09ರಲ್ಲಿ, ಬಿಜಿಕೆ ಎ-1 ಆರೋಪಿಯಾಗಿದ್ದಾನೆ. ತೀರ್ಥಹಳ್ಳಿಯ ಬಿದರಗೋಡು ಗ್ರಾಮದ ಬಿ.ಕೆ.ಅರುಣ್ ಕುಮಾರ್ ಮನೆ ಮೇಲೆ 2009ರ ಫೆಬ್ರವರಿ 1ರ ರಾತ್ರಿ 10 ಗಂಟೆಗೆ 8 ಜನರ ತಂಡ ದಾಳಿ ಮಾಡಿತ್ತು. ಅರುಣ್ ಅವರ ಪತ್ನಿಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದರು. ಸಿಂಗಲ್ ಬ್ಯಾರಲ್ ಮತ್ತು ಡಬ್ಬಲ್ ಬ್ಯಾರಲ್ ಗನ್ ತೋರಿಸಿ 1000 ರೂ. ಕೊಂಡೊಯ್ದಿದ್ದ ಗ್ಯಾಂಗ್, ಅಡಿಕೆ ಚೀಲ, ಸೋಫಾ ಹಾಗೂ ಬಜಾಜ್ ಬೈಕನ್ನು ಡಿಸೇಲ್ ಹಾಕಿ ಸುಟ್ಟಿತ್ತು.

ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿತ್ತು

ಆಗುಂಬೆ ಠಾಣೆಯ ಕೇಸ್ ನಂ. 51/09ರಲ್ಲಿ ಎ-1 ಆರೋಪಿಯಾಗಿದ್ದಾನೆ. ಇದರಲ್ಲಿ ಬಂಧಿತ ಆರೋಪಿಗಳ ಮಾಹಿತಿ ಅನುಸಾರ ಸ್ಥಳ ಪರಿಶೀಲನೆ ಮಾಡಿ ಹಲವು ವಸ್ತುಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಉಳ್ಮಡಿ ಸಮೀಪದ ನೆಕರ್ಕೆ ಗುಡ್ಡ ಹಾಗೂ ಮಾಕೋಡು ದಟ್ಟಾರಣ್ಯದಲ್ಲಿ ಮಾವೋವಾದಿ ಸಂಘಟನೆಯ ಪುಸ್ತಕಗಳು, 9ಎಂಎಂ ಬಂದೂಕು, ಡಿಟೋನೇಟರ್, ಮೂರು 303 ರೈಫಲ್‌ನ 40 ಜೀವಂತ ಗುಂಡು, 7.62 ಎಂಎಂನ 70 ಜೀವಂತ ಗುಂಡು, 9 ಎಂಎಂನ 20 ಜೀವಂತ ಗುಂಡು ವಶಪಡಿಸಿಕೊಳ್ಳಲಾಗಿತ್ತು. 2009ರ ಮೇ 30ರಂದು ಎ-3 ಸುರೇಶ್ ನಾಯ್ಕ್, ಎ-4 ಸರೋಜಾ ಮಾಹಿತಿ ಮೇರೆಗೆ ಶೋಧ ನಡೆಸಲಾಗಿತ್ತು.

ಇದನ್ನೂ ಓದಿ: Hanuman Flag: ಧ್ವಜಸ್ತಂಭವನ್ನು ನಿರ್ಮಿಸಿದ್ದೇ ಹನುಮಾನ್‌ ಧ್ವಜ ಹಾರಿಸಲು; ಕಾಂಗ್ರೆಸ್‌ ಜನರ ಕ್ಷಮೆ ಕೇಳಲಿ: ವಿಜಯೇಂದ್ರ

ಆಗುಂಬೆ ಠಾಣೆಯ ಕೇಸ್ ನಂ- 03/12ರಲ್ಲಿ ಬಿಜಿಕೆ ಎ-2 ಆರೋಪಿ. ಮಲ್ಲಂದೂರು ಬಳಿ ಎಎನ್ಎಫ್ ತಂಡ ಕೂಂಬಿಂಗ್ ನಡೆಸುತ್ತಿದ್ದ ವೇಳೆ ನಕ್ಸಲರು ಗುಂಡು ಹಾರಿಸಿದ್ದರು. 2012ರ ಜನವರಿ 6ರಂದು ಆಗುಂಬೆ ನಕ್ಸಲ್ ಕ್ಯಾಂಪ್‌ನ ಡಿಆರ್‌ಪಿಐ ವೆಂಕಟೇಶಪ್ಪ ನೇತೃತ್ವದಲ್ಲಿ ಹೋಗಿದ್ದ ತಂಡದ ಕಾರ್ಯಾಚರಣೆ ವೇಳೆ ನಕ್ಸಲರು ಕಾಣಿಸಿಕೊಂಡಿದ್ದು, ಈ ವೇಳೆ ಬೆನ್ನು ಹತ್ತಿದ್ದ ಎಎನ್ಎಫ್ ತಂಡದ ಮೇಲೆ ಗುಂಡು ಹಾರಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ.

Exit mobile version