ಶಿವಮೊಗ್ಗ/ದಾವಣಗೆರೆ: ದಾವಣಗೆರೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದ ಬಳಿ ಭೀಕರ ಅಪಘಾತ (Road Accident) ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ ಮತ್ತು ಓಮ್ನಿ ಕಾರು ಮಧ್ಯೆ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ನಂಜುಂಡಪ್ಪ (83), ರಾಕೇಶ್ (27), ದೇವರಾಜ್ (30) ಎಂದು ಗುರುತಿಸಲಾಗಿದೆ. ಈ ಮೂವರು ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಹರಮಘಟ್ಟ ಗ್ರಾಮದವರು ಎಂದು ತಿಳಿದು ಬಂದಿದೆ.
ಕೆಎಸ್‌ಆರ್‌ಟಿಸಿ ಬಸ್ ಶಿಕಾರಿಪುರದ ಕಡೆಯಿಂದ ಬರುತ್ತಿತ್ತು. ಶಿವಮೊಗ್ಗದ ಕಡೆಯಿಂದ ಹೊರಟಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಬಸ್-ಕಾರು ಮುಖಾಮುಖಿ ಡಿಕ್ಕಿಯಾಗಿ ಓಮ್ನಿ ಕಾರು ಗುರುತು ಸಿಗದಂತೆ ಅಪ್ಪಚ್ಚಿ ಆಗಿತ್ತು. ಡಿಕ್ಕಿ ರಭಸಕ್ಕೆ ಕಾರಿನಲ್ಲಿ ಸಿಲುಕಿದ್ದ ಮೂವರು ಚೆಲ್ಲಾಪಿಲ್ಲಿಯಾಗಿದ್ದರು. ಇನ್ನೂ ಬಸ್ಸಿನ ಮುಂಭಾಗವು ಛಿದ್ರಗೊಂಡಿತ್ತು.
ಘಟನೆಯಲ್ಲಿ ಆರಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ತೀವ್ರ ಗಾಯಗೊಂಡ ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಣ್ಣ ಪುಟ್ಟ ಗಾಯಗೊಂಡವರನ್ನು ನ್ಯಾಮತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನ್ಯಾಮತಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ನ್ಯಾಮತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಮತಿ ತಾಲೂಕಿನ ಚಿನ್ನಕಟ್ಟೆ-ಶಿವಪುರ ಬಳಿ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Honeybee Attack : ಹುಲಿ ಸೆರೆ ಕಾರ್ಯಾಚರಣೆ ವೇಳೆ ಹೆಜ್ಜೇನು ದಾಳಿ; ಬೆದರಿ ಓಡಿದ ಸಾಕಾನೆ ಭೀಮ
ನೈಟ್ ಪಾರ್ಟಿಗೆ ಬೈಕ್‌ನಲ್ಲಿ ಹೊರಟಿದ್ದ ಸವಾರ ಸಾವು, ಮತ್ತೊಬ್ಬ ಗಂಭೀರ
ಧಾರವಾಡ: ಸ್ನೇಹಿತನೊಟ್ಟಿಗೆ ಪಾರ್ಟಿಗೆ ತೆರಳುತ್ತಿದ್ದ ಯುವಕನೊಬ್ಬ ರಸ್ತೆ ಅಪಘಾತದಲ್ಲಿ (Road Accident) ಮೃತಪಟ್ಟಿದ್ದಾನೆ. ಧಾರವಾಡದ (Dharwad News) ಮುಮ್ಮಿಗಟ್ಟಿ ಬಳಿ ಬುಧವಾರ ರಾತ್ರಿ ಘಟನೆ ನಡೆದಿದೆ. ಯುವಕರಿಬ್ಬರು ಪಾರ್ಟಿಗೆಂದು ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಓಂಕಾರ ಸಂಗಣ್ಣವರ (18) ಮೃತ ದುರ್ದೈವಿ.
ಧಾರವಾಡದ ಶೆಟ್ಟರ್ ಕಾಲೋನಿಯ ನಿವಾಸಿ ಓಂಕಾರ ಗೆಳೆಯನ ಜತೆಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದಾ, ನಿಂತಿದ್ದ ಟ್ರಾಕ್ಟರ್ ಕಾಣದೇ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಕೆಳೆಗೆ ಬಿದ್ದ ಓಂಕಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಓಂಕಾರ ಜತೆಗಿದ್ದ ಮತ್ತೊಬ್ಬ ಯುವಕ ವೃತ್ವಿಕ್ ಸಜ್ಜನ್ನವರ ಎಂಬಾತ ಗಂಭೀರ ಗಾಯಗೊಂಡಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃತ್ವಿಕ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದ ಸ್ಥಳಕ್ಕಾಗಮಿಸಿದ ಗರಗ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ