Site icon Vistara News

ಲಾಸ್ಟ್‌ ಟ್ರೇನ್‌ ಕಳ್ಳರು: ತಿನ್ನುವ ಬಿಸ್ಕೆಟ್‌ ಕದಿಯುತ್ತಿದ್ದವರು ಈಗ ಚಿನ್ನದ ಬಿಸ್ಕೆಟ್‌ಗೆ ಕೈ ಇಟ್ಟರು

ಕಳ್ಳತನ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ಕೆಲ ದಿನಗಳಿಂದ ಸರಣಿ ಕಳ್ಳತನ ಮುಂದುವರೆದಿದೆ. ಕತ್ತಲು ಕವಿದ ಮೇಲೆ ಕಳ್ಳತಕ್ಕೆ ಇಳಿಯುವ ಕಳ್ಳರು ತಾಳಗುಪ್ಪಕ್ಕೆ ಬರುವ ಕೊನೆಯ ರೈಲಿನಲ್ಲೆ ಬಂದು ಕಳ್ಳತನ ಮಾಡುತ್ತಿದ್ದಾರೆ. ಇಲ್ಲಿವರೆಗೆ ಸಣ್ಣಪುಟ್ಟ ವಸ್ತುಗಳನ್ನು ಕದಿಯುತ್ತಿದ್ದವರು ಈಗ ಚಿನ್ನದಂಗಡಿಗೆ ಕೈಯಿಟ್ಟಿದ್ದಾರೆ.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಮಗುವಿನ ಪ್ರಾಣ ರಕ್ಷಿಸಿದ ಆಟೋ ಚಾಲಕ

ಕಳೆದೊಂದು ತಿಂಗಳಿಂದ ರಾಷ್ಟ್ರೀಯ ಹೆದ್ದಾರಿ ಅಂಚಿನ ಗೂಡಂಡಿಗಳ ಬೀಗ ಮುರಿದು ಚಿಲ್ಲರೆ ಹಣ, ಸಿಗರೇಟು, ಬಿಸ್ಕತ್‍ನಂತಹ ತಿಂಡಿ ಪದಾರ್ಥ ಕಳ್ಳತನ ಪ್ರಕರಣ ಹಲವು ಬಾರಿ ನಡೆದಿದೆ. ಇಲ್ಲಿನ ತರಕಾರಿ ಕೃಷ್ಣನವರ ಅಂಗಡಿಯಲ್ಲಿ 4 ಬಾರಿ, ಶೆಟ್ರ ಕ್ಯಾಂಟಿನ್‌ನಲ್ಲಿ, ವೀರೆಂದ್ರ ಎಂಬುವವರ ಅಂಗಡಿಯಲ್ಲಿ ಮೂರು ಬಾರಿ ಕಳ್ಳರು ಕೈಚಳಕ ತೋರಿಸಿದ್ದಾರೆ.

ಜೂನ್‌ 27ರ ರಾತ್ರಿ ರೈಲ್ವೇ ಗೇಟ್ ಸಮೀಪದ ಮಂಜುನಾಥ ಎಂಬುವವರಿಗೆ ಸೇರಿದ ಆಭರಣದ ಅಂಗಡಿ ಬಾಗಿಲು ಒಡೆದು ಅಂದಾಜು 5 ಲಕ್ಷ ರೂ. ಮೌಲ್ಯದ ಒಡವೆಗಳನ್ನು ದೋಚಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಕಳ್ಳತನದ ದೃಶ್ಯ ಸಿ.ಸಿ.ಕ್ಯಾಮರದಲ್ಲಿ ಸೆರೆಯಾಗಿದ್ದು, ಕಳ್ಳರನ್ನು ಶೀಘ್ರವೇ ಬಂಧಿಸುವ ಭರವಸೆಯನ್ನು ಇನ್ಸೆಪೆಕ್ಟರ್‌ ಪ್ರವೀಣ ಕುಮಾರ್ ನೀಡಿದ್ದಾರೆ.

ತಾಳಗುಪ್ಪ ಗ್ರಾಮಕ್ಕೆ ರಾತ್ರಿ 10.30ರ ನಂತರ ಎರಡು ರೈಲುಗಳು ಬೆಂಗಳೂರು ಮತ್ತು ಮೈಸೂರಿನಿಂದ ಬಂದು, ಬೆಳಗಿನ ಜಾವ 4.30ರಿಂದ 5ರ ಸಮಯದಲ್ಲಿ ಮರಳಿ ಸಾಗುತ್ತವೆ. ರೈಲ್ವೆ ಸ್ಟೇಷನ್ ಅಕ್ಕ-ಪಕ್ಕದಲ್ಲೇ ಕಳ್ಳತನ ನಡೆಯುತ್ತಿದ್ದು, ಹೊರಗಿನಿಂದ ರಾತ್ರಿ ಬಂದು ಕಳ್ಳತನ ಮಾಡಿ ಬೆಳಗಿನ ಜಾವದ ರೈಲಿನಲ್ಲಿ ತೆರಳುತ್ತಿರುವ ಶಂಕೆ ವ್ಯಕ್ತವಾಗಿದೆ.

ಪೊಲೀಸರ ನಿರ್ಲಕ್ಷ್ಯದ ಆರೋಪ

ತಾಳಗುಪ್ಪದಲ್ಲಿ ನಡೆಯುತ್ತಿರುವ ಸರಣಿ ಪ್ರಕರಣಗಳು ಪೊಲೀಸ್‌ರ ಗಮನಕ್ಕೂ ಬಂದಿದೆ. ಆದರೆ ಅಧಿಕಾರಿಗಳು ಬೀಟ್ ಮೊದಲಾದ ಯಾವ ನಿಯಂತ್ರಣ ಕ್ರಮವನ್ನು ಕೈಗೊಳ್ಳದೆ ನಿಷ್ಕ್ರಿಯವಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗೂಡಂಗಡಿ ಕಳ್ಳತನವನ್ನು ಪೊಲೀಸರು ನಿರ್ಲಕ್ಷಿಸಿದ ಪರಿಣಾಮ ಈಗ ಚಿನ್ನದ ಅಂಗಡಿ ಕಳ್ಳತನ ನಡೆದಿದೆ. ಹೆದ್ದಾರಿ ಅಂಚಿನಲ್ಲಿ 70ಕ್ಕೂ ಹೆಚ್ಚು ಸಣ್ಣ ಪುಟ್ಟ ಅಂಗಡಿಗಳಿದ್ದು, ಪದೇಪದೆ ನಡೆಯುತ್ತಿರುವ ಕಳ್ಳತನದಿಂದ ಬೇಸತ್ತು ಹೋಗಿರುವ ವ್ಯಾಪಾರಿಗಳು, ಸೂಕ್ತ ರಕ್ಷಣೆಯ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರನ್ನು ಆಗ್ರಹಿಸಿದ್ದಾರೆ.

ಸಿಬ್ಬಂದಿ ಕೊರತೆ

ತಾಳಗುಪ್ಪ ಗ್ರಾಮದಲ್ಲಿ ಸಾಗರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಉಪಠಾಣೆ ಇದೆ. ಆದರೆ ಒಬ್ಬರು ಹೆಡ್ ಕಾನಸ್ಟೇಬಲ್, 4 ಪೇದೆ ಹುದ್ದೆ ಇರುವ ಈ ಠಾಣೆಯಲ್ಲಿ ಕೇವಲ ಮೂವರು ಪೇದೆಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 50 ಕಿಮೀ ವ್ಯಾಪ್ತಿಯ ಬೀಟ್ ಹೊಣೆ ಈ ಠಾಣೆಗಿದ್ದು, ಒಬ್ಬರಿಗೆ ಹಳ್ಳಿ ತಿರುಗಾಟವೇ ಹೊರೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯು ಪೇಟೆಯ ಮಧ್ಯ ಭಾಗದಲ್ಲಿ ಹಾದು ಹೋಗಿರುವುದರಿಂದ ವಾಹನ ದಟ್ಟಣೆ ಇದ್ದು, ಅಪಘಾತಗಳು ಸಾಮಾನ್ಯವೆಂಬಂತೆ ನಡೆಯುತ್ತದೆ.

ವಾರದ ರಜಾ ದಿನದಲ್ಲಿ ಜೋಗ ಪ್ರವಾಸಿಗರ ಒತ್ತಡವೂ ಇರುತ್ತದೆ. ಸಿಬ್ಬಂದಿ ಕೊರತೆಯಿಂದಾಗಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಗಸ್ತು ತಿರುಗುವ ವ್ಯವಸ್ಥೆಯೇ ಮರೆಯಾಗಿದೆ. ಎರಡು ಮೂರು ವರ್ಷದ ಹಿಂದೆ ಇದೇ ರೀತಿಯ ಘಟನೆ ನಡೆದಿದ್ದಾಗ ಸಾಗರದಲ್ಲಿ ಗಸ್ತು ತಿರುಗುವ ಹೊಯ್ಸಳ ವಾಹನಗಳನ್ನು ತಾಳಗುಪ್ಪದವರೆಗೂ ಬಂದು ಹೋಗುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಇತ್ತೀಚೆಗೆ ಹೊಯ್ಸಳ ಗಸ್ತು ವ್ಯವಸ್ಥೆ ನಡೆಯುತ್ತಿಲ್ಲ. ದೂರುಗಳಿದ್ದರೆ ಮಾತ್ರ 102 ವಾಹನ ಓಡಾಡುತ್ತವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮದಲ್ಲಿ ಗಸ್ತು ಅವಧಿಯನ್ನು ಹೆಚ್ಚಿಸಿ, ಕಳ್ಳತನದಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ವಿದೇಶಕ್ಕೆ ಪರಾರಿಯಾದ ಯುವಕ

Exit mobile version