ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಬಸ್ ಸ್ಟ್ಯಾಂಡ್ ಬಳಿ ಸ್ಫೋಟ ಪ್ರಕರಣದ (Shivamogga Blast) ಹಿನ್ನೆಲೆಯಲ್ಲಿ ಎಸ್‌ಪಿ ಮಿಥುನ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಬದಿ ಫುಟ್‌ಪಾತ್ ಮೇಲೆ ಬ್ಯಾಗ್‌ನಲ್ಲಿದ್ದ ನಿಗೂಢ ವಸ್ತು ಸ್ಫೋಟಗೊಂಡಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಆಕಸ್ಮಿಕವಾಗಿ ಸಿಡಿಮದ್ದು ಸ್ಫೋಟವಾಗಿದ್ದರಿಂದ ಅವಘಡ ನಡೆದಿದೆ, ಸಿಡಿಮದ್ದು ಎಲ್ಲಿಂದ ತಂದಿದ್ದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಶಿಕಾರಿಪುರದಲ್ಲಿ ಪ್ರತಿಕ್ರಿಯಿಸಿದ ಎಸ್‌ಪಿ ಮಿಥುನ್ ಕುಮಾರ್, ಆಕಸ್ಮಿಕವಾಗಿ ಸಿಡಿಮದ್ದು ಸ್ಫೋಟವಾಗಿದೆ. ಘಟನೆಯಲ್ಲಿ ಅಂಥೋನಿ ದಾಸ್ ಎಂಬುವರಿಗೆ ಗಾಯವಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಶಿರಾಳಕೊಪ್ಪ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿಡಿಮದ್ದು ಎಲ್ಲಿಂದ ತಂದಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸಿಡಿಮದ್ದು ಬ್ಯಾಗಿನಲ್ಲಿಟ್ಟು ಉಮೇಶ್ ಹಾಗೂ ರೂಪ ದಂಪತಿ ಸಂತೆಗೆ ತೆರಳಿದ್ದರು. ಈ ವೇಳೆ ಸ್ಫೋಟಗೊಂಡು ಅಂಥೋನಿ ದಾಸ್ ಕಾಲಿಗೆ ತಗುಲಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಆಯಾಮದಲ್ಲೂ ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಪರಿಚಯ ಇಲ್ಲದವರು ಬ್ಯಾಗ್ ಇಟ್ಟು ಹೋದ್ರು ಎಂದ ಗಾಯಾಳು
ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಅಂಥೋಣಿ ದಾಸ್ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಗಾಯಾಳು ಅಂಥೋಣಿ ದಾಸ್, ನನಗೆ ಪರಿಚಯ ಇಲ್ಲದವರು ಬಂದು ಬ್ಯಾಗ್ ಇಟ್ಟು ಹೋಗಿದ್ದರು. ಪರಿಚಯ ಇರುವವರ ರೀತಿಯಲ್ಲಿ ಮಾತನಾಡಿಸಿದರು. ಬಂದು ಬ್ಯಾಗ್ ಇಟ್ಟಾಗ ನನಗೆ ಗೊತ್ತಾಗಿಲ್ಲ, ಕೆಲ ಸಮಯದಲ್ಲಿ ಬ್ಯಾಗ್‌ನಲ್ಲಿದ್ದ ವಸ್ತು ಸ್ಫೋಟವಾಯಿತು ಎಂದು ತಿಳಿಸಿದ್ದಾರೆ.
ಏನಿದು ಘಟನೆ?
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಸಂತೆಯ ಅಂಗಡಿ ಬಳಿ ಭಾನುವಾರ ನಿಗೂಢ ವಸ್ತು ಸ್ಫೋಟಗೊಂಡು ಇಬ್ಬರು ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಸಿಡಿಮದ್ದು ತಂದಿದ್ದ ಹಾವೇರಿ ಮೂಲದ ಉಮೇಶ್ ಹಾಗೂ ರೂಪ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ | Fire accident: ಬೆಂಗಳೂರಿನ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿದುರಂತ; ಮೂವರ ಸಜೀವ ದಹನ
ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿ ಸ್ಫೋಟದ ವೇಳೆ ಜೋರಾದ ಶಬ್ಧ ಬಂತು. ಶಬ್ಧ ಬಂದ ಜಾಗದಲ್ಲಿ ಸ್ಟವ್ ಮೇಲೆ ಹಾರಿತ್ತು. ನಾವು ಓಡಿ ಹೋಗಿ ನೋಡಿದಾಗ, ಬೆಡ್ ಶೀಟ್ ಮಾರುವ ವ್ಯಾಪಾರಿಗಳಿಗೆ ಗಾಯಗಳಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಜೋರಾಗಿ ಶಬ್ಧ ಬಂದಾಗ ಎಲ್ಲರೂ ಭಯಭೀತರಾಗಿದ್ದರು. ನೋಡನೋಡುತ್ತಿದ್ದಂತೆ ಸ್ಫೋಟಗೊಂಡ ಜಾಗದಲ್ಲಿ ಜನರು ಸೇರಿದ್ದರು. ಸದ್ಯ ಯಾವುದೇ ಹೆಚ್ಚು ಅನಾಹುತ ನಡೆದಿಲ್ಲ ಎಂದು ಪ್ರತ್ಯಕ್ಷದರ್ಶಿ ಶಾರುಖ್ ಎಂಬುವವರು ಮಾಹಿತಿ ನೀಡಿದ್ದಾರೆ.