ಶಿವಮೊಗ್ಗ: ಇಡೀ ವಿಶ್ವವೇ ಮೆಚ್ಚುವಂತೆ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ರಾಷ್ಟ್ರಕವಿ ಕುವೆಂಪು ಅವರು ತಿಳಿಸಿದ ವಿಶ್ವ ಮಾನವ ತತ್ವಕ್ಕೆ ಉದಾಹರಣೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಣ್ಣಿಸಿದರು. ಸೋಗಾನೆಯಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣದ (Shivamogga Airport) ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ಎಂಬ ಕವಿವಾಣಿಯಂತೆ ಈ ನಾಡಿನ ಅಭಿವೃದ್ಧಿ ಕನಸಿನೊಂದಿಗೆ 70 ರ ದಶಕದಲ್ಲಿ ಸಾರ್ವಜನಿಕ ಬದುಕು ಪ್ರವೇಶಿಸಿದ ನನ್ನ ಬದುಕಿನಲ್ಲಿ ಈ ದಿನ ಬಹಳ ವೈಶಿಷ್ಟ್ಯಪೂರ್ಣವಾದದ್ದು. ಪ್ರಧಾನಿ ನರೇಂದ್ರ ಮೋದಿಯವರು ನೇರವಾಗಿ ವಿಮಾನದಲ್ಲಿ ಬಂದಿಳಿದು ವಿಮಾನ ನಿಲ್ದಾಣವನ್ನು ಉದ್ಘಾಟಿಸಿರುವುದು ಜಿಲ್ಲೆಯ ಜನರ ಪಾಲಿಗೆ ಸಾರ್ಥಕದ ದಿನ.
ಇದೊಂದು ಕೇವಲ ವಿಮಾನ ನಿಲ್ದಾಣವಲ್ಲ. ಮಲೆನಾಡಿನ ಜನರ ಕನಸು ನನಸಾಗುತ್ತಿರುವ ಶುಭ ಸಂಕೇತ. ಅಭಿವೃದ್ಧಿ ಮತ್ತಷ್ಟು ವೇಗ ಪಡೆದು ಆಗಸದೆತ್ತರಕ್ಕೆ ಏರುವ ಶುಭ ಸೂಚನೆ. ಶಿವಮೊಗ್ಗದ ಜನ ಹಾಗೂ ಶಿಕಾರಿಪುರದ ಜನರು ನನ್ನನ್ನು ಶಾಸಕನನ್ನಾಗಿ ಮಾಡಿ ನಾಡಿನ ಜನರ ಸೇವೆಗೆ ಅವಕಾಶ ನೀಡಿಕೊಟ್ಟಿದ್ದಾರೆ. ಮೋದಿಯವರ ಆಶೀರ್ವಾದದಿಂದ ಸಂಸತ್ ಸದಸ್ಯ, ವಿಧಾನ ಪರಿಷತ್ ಸದಸ್ಯ, ಮುಖ್ಯಮಂತ್ರಿಯಾಗಿ ಸೇವೆಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ಋಣಿಯಾಗಿದ್ದೇನೆ. ಸಂಸದ ರಾಘವೇಂದ್ರ ಅವರ ವಿಶೇಷ ಪ್ರಯತ್ನದಿಂದ ವಿಮಾನ ನಿಲ್ದಾಣ ಆಗಿದೆ.
ಮೋದಿಯವರ ಒತ್ತಾಸೆ ಮೇರೆಗೆ ಶಿವಮೊಗ್ಗ ಲೋಕಸಭೆಗೆ ಸ್ಪರ್ಧಿಸಿದಾಗ ಬೃಹತ್ ಅಂತರದಲ್ಲಿ ಜಯಗಳಿಸುವಂತೆ ಮಾಡಿ ಸೇವೆಗೆ ಅವಕಾಶ ಲಭಿಸಿತ್ತು. ನಾನು ಅಧಿಕಾರದಲ್ಲಿದ್ದದ್ದು ಕೇವಲ ಏಳು ವರ್ಷ ಮಾತ್ರ. ಈ ಅವಧಿಯಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎಂದು ಕೆಲಸ ಮಾಡಿದ್ದೇನೆ. ಅದಕ್ಕೆ ಮೋದಿಯವರ ಆಶೀರ್ವಾದ ಕಾರಣ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿವೃದ್ಧಿಯ ಪ್ರೇರಣೆಯೇ ನಮ್ಮ ಕರ್ನಾಟಕ. ಈ ಕಾರಣಕ್ಕೆ ಕರ್ನಾಟಕದ ಬೆಳವಣಿಗೆಗೆ ವಿಶೇಷ ಆಸಕ್ತಿಯನ್ನು ವಹಿಸಿದ್ದಾರೆ. ಅಣ್ಣ ಬಸವಣ್ಣನವರ ಕಾಯಕತತ್ವದಿಂದ ಪ್ರೇರಣೆ ಪಡೆದಿದ್ದಾರೆ. ವಿಶ್ವದ ಯಾವುದೇ ಮೂಲೆಗೆ ಹೋದರೂ ಬಸವಣ್ಣನವರ ವಚನ ಉಲ್ಲೇಖಿಸುತ್ತಾರೆ.
ಇದನ್ನೂ ಓದಿ: Shivamogga Airport: ಮೋದಿ ಕಾರ್ಯಕ್ರಮಕ್ಕೆ ಐದಾರು ಕಿ.ಮೀ. ನಡೆದೇ ಬಂದ ಲಕ್ಷಾಂತರ ಜನ
ಎಪಿಜೆ ಅಬ್ದುಲ್ ಕಲಾಂ ಅವರು ಗ್ರಾಮೀಣ ಅಭಿವೃದ್ಧಿಯ ಕುರಿತು ಮಾತನಾಡಿದ್ದರು. ನಮ್ಮ ಡಬಲ್ ಇಂಜಿನ್ ಸರ್ಕಾರ ಎಲ್ಲ ಸೌಕರ್ಯಗಳನ್ನೂ ಗ್ರಾಮೀಣ ಭಾಗಕ್ಕೆ ಜೋಡಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ. ಹುಟ್ಟುಹಬ್ಬ ಆಚರಣೆಯಲ್ಲಿ ಹೆಚ್ಚು ಆಸಕ್ತಿಯಿಲ್ಲ. 60 ವರ್ಷದ ಕಾರ್ಯಕ್ರಮದಲ್ಲಿ ವಾಜಪೇಯಿ ಅವರು ಆಗಮಿಸಿದ್ದರು. ಇವತ್ತು 80 ನೇ ವರ್ಷವು ನಿಮ್ಮಿಂದಾಗಿ ಸ್ಮರಣೀಯವಾಗಿದೆ.
ಈ ರೀತಿಯ ಕಾರ್ಯಕ್ರಮವನ್ನು ಶಿವಮೊಗ್ಗ ಎಂದೂ ಕಂಡಿಲ್ಲ. ರಾಷ್ಟ್ರಕವಿ ಕುವೆಂಪು ಅವರು ವಿಶ್ವ ಮಾನವರಾಗುವ ಕುರಿತು ಬರೆದಿದ್ದರು. ನೀವು ಒಬ್ಬರೇ ಇಂದು ನಮ್ಮೆದುರಿಗಿರುವ ವಿಶ್ವ ಮಾನವ. ವಸುಧೈವ ಕುಟುಂಬಕಂ ಆಶಯವನ್ನು ಈಡೇರಿಸುತ್ತಿದ್ದೀರ ಎಂದರು.