Site icon Vistara News

Shivamogga Airport: ಬಿ.ಎಸ್‌. ಯಡಿಯೂರಪ್ಪ ಜನ್ಮದಿನಕ್ಕೆ ಶುಭ ಕೋರಿದ ಪ್ರಧಾನಿ ಮೋದಿ: ಮೊಬೈಲ್‌ ಫ್ಲಾಷ್‌ ಲೈಟ್‌ ಮೂಲಕ ಗೌರವ

#image_title

ಶಿವಮೊಗ್ಗ: ಎಷ್ಟೇ ಎತ್ತರಕ್ಕೆ ಏರಿದರೂ ವಿನಮ್ರತೆಯನ್ನು ಮರೆಯಬಾರದು ಎನ್ನುವುದಕ್ಕೆ ಕರ್ಣಾಟಕದ ಅತ್ಯಂತ ಜನಪ್ರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರೇ ನಮಗೆಲ್ಲ ಪ್ರೇರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು. ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆ ಜತೆಗೆ ಬಿ.ಎಸ್‌. ಯಡಿಯೂರಪ್ಪ ಅವರ ಜನ್ಮದಿನದ ಶುಭಾಶಯವನ್ನೂ ಕೋರುತ್ತ ಪ್ರಧಾನಿ ಮಾತನಾಡಿದರು.

ಇಂದು ಕರ್ನಾಟಕದ ಲೋಕಪ್ರಿಯ ಜನನಾಯಕ ಬಿ.ಎಸ್.‌ ಯಡಿಯೂರಪ್ಪ ಅವರ ಜನ್ಮದಿನವೂ ಹೌದು. ಅವರ ದೀರ್ಘ ಆಯಸ್ಸಿಗೆ ನಾನು ಆಶಿಸುತ್ತೇನೆ. ಅವರು ತಮ್ಮ ಜೀವನವನ್ನು ಬಡವರ ಕಲ್ಯಾಣಕ್ಕೆ, ರೈತರ ಕಲ್ಯಾಣಕ್ಕೆ ಸಮರ್ಪಣೆ ಮಾಡಿದ್ದಾರೆ. ಯಡಿಯೂರಪ್ಪ ಅವರು ಹಿಂದಿನ ವಾರವಷ್ಟೆ ವಿಧಾನಸಭೆಯಲ್ಲಿ ಭಾಷಣ ಮಾಡಿದರು. ಅದು ಎಲ್ಲ ವ್ಯಕ್ತಿಗಳಿಗೂ ಪ್ರೇರಣೆ ನೀಡುವಂತಹದ್ದು.

ಇಷ್ಟು ಎತ್ತರಕ್ಕೆ ಏರಿದರೂ ಹೇಗೆ ವಿನಮ್ರವಾಗಿರಬೇಕು ಎನ್ನುವುದಕ್ಕೆ ಯಡಿಯೂರಪ್ಪ ಅವರ ಜೀವನ ನಮಗೆ ಎಂದೆಂದಿಗೂ ಪ್ರೇರಣಾದಾಯಿ ಎಂದರು. ನನ್ನದೊಂದು ವಿನಂತಿ ಇದೆ. ನಿಮ್ಮ ಕೈಯಲ್ಲಿ ಮೊಬೈಲ್‌ ಫೋನ್‌ ತೆಗೆದು, ಫ್ಲಾಷ್‌ ಲೈಟ್‌ ಮೂಲಕ ಯಡಿಯೂರಪ್ಪ ಅವರಿಗೆ ಗೌರವ ಸೂಚಿಸಿ ಎಂದು ಕರೆ ನೀಡಿದರು. ಸಭಿಕರೆಲ್ಲರೂ ಮೊಬೈಲ್‌ ಫೋನ್‌ ತೆಗೆದು ಫ್ಲಾಷ್‌ ಲೈಟ್‌ ಮೂಲಕ ಶುಭಾ ಕೋರಿದರು. 60-70 ವರ್ಷದ ತಮ್ಮ ಜೀವನವನ್ನು ಅವರು ಸಾರ್ವಜನಿಕರಿಗೆ ತೊಡಗಿಸಿದ್ದಾರೆ, ಅದಕ್ಕಾಗಿ ಈ ಗೌರವ ಎಂದು ಪ್ರಧಾನಿ ಮೋದಿ ತಿಳಿಸಿದರು.

ಇದನ್ನೂ ಓದಿ: Shivamogga Airport: ಕರ್ನಾಟಕವು ಅಭಿವೃದ್ಧಿ ರಥದ ಮೇಲೆ; ಈ ರಥವು ಪ್ರಗತಿಯ ಪಥದ ಮೇಲೆ: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ ಬಣ್ಣನೆ

ಶಿವಮೊಗ್ಗದ ಕುರಿತು ಬಣ್ಣಿಸಿದ ಪ್ರಧಾನಿ, ಪರಿಸರ, ಸಂಸ್ಕೃತಿ ಹಾಗೂ ಕೃಷಿಯ ಕ್ಷೇತ್ರ ಶಿವಮೊಗ್ಗಕ್ಕೆ ಈ ವಿಮಾನ ನಿಲ್ದಾಣ ಹೊಸ ಅವಕಾಶ ತೆರೆಯಲಿದೆ. ಗಂಗಾ ಸ್ನಾನ ತುಂಗಾ ಪಾನ ಎಂಬ ಮಾತಿದೆ. ಸಿಗಂಧೂರು ಚೌಡೇಶ್ವರಿ, ಕೋಟೆ ಆಂಜನೇಯ, ಸಂಸ್ಕೃತ ಗ್ರಾಮ ಮತ್ತೂರು, ಶ್ರೀಧರ ಸ್ವಾಮಿಯವರ ಆಶ್ರಮಗಳಂತೆ ಅನೇಕ ಸ್ಥಾನಗಳು ಶಿವಮೊಗ್ಗದಲ್ಲಿವೆ. ಶಿವಮೊಗ್ಗದ ಈಸೂರು ಗ್ರಾಮ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿತ್ತು. ಇದು ನಮಗೆಲ್ಲ ಪ್ರೇರಣಾ ಸ್ಥಳ.

ಶಿವಮೊಗ್ಗದ ಕೃಷಿಯಲ್ಲಿಯೂ ವಿಭಿನ್ನತೆ ಇದೆ. ಇಲ್ಲಿನ ಚಹಾ, ಸುಪಾರಿ, ಮಸಾಲೆ ಜತೆಗೆ ಹಣ್ಣು ಹಂಪಲು ಇಲ್ಲಿದೆ. ಶಿವಮೊಗ್ಗದ ಈ ಸಾಂಸ್ಕೃತಿಕ ವೈಭವಕ್ಕೆ ಉತ್ತೇಜನ ನೀಡಲು ಬಹಳ ದೊಡ್ಡ ಸಂಪರ್ಕದ ಅವಶ್ಯಕತೆ ಇತ್ತು. ಡಬಲ್‌ ಇಂಜಿನ್‌ ಸರ್ಕಾರ ಈ ಅವಶ್ಯಕತೆಯನ್ನು ಈಡೇರಿಸುತ್ತಿದೆ. ಸ್ಥಳೀಯರಿಗೆ ಅವಕಾಶದ ಜತೆಗೆ ದೇಶ ವಿದೇಶದ ಪ್ರವಾಸಿಗರಿಗೂ ವಿಮಾನ ನಿಲ್ದಾಣದಿಂದ ಅನುಕೂಲ ಆಗುತ್ತದೆ. ಇದರಿಂದಲೂ ಉದ್ಯೋಗಾವಕಾಶ ಹೆಚ್ಚಾಗುತ್ತದೆ. ರೈತರಿಗೆ ಹೊಸ ಮಾರುಕಟ್ಟೆ ತೆರೆದುಕೊಳ್ಳುತ್ತದೆ ಎಂದರು.

Exit mobile version