Site icon Vistara News

Shivamogga Airport: ಬೆಂಗಳೂರು ನಂತರ ಅತಿ ದೊಡ್ಡ ವಿಮಾನ ನಿಲ್ದಾಣ ಎಂದ ಯಡಿಯೂರಪ್ಪ: ಕಾರ್ಯಕ್ರಮಕ್ಕೆ ಪಾಸ್‌ ಬೇಕಿಲ್ಲ ಎಂದ ಬಿವೈಆರ್‌

shivamogga-airport-will be second largest in state after Bengaluru says bs yediyurappa

#image_title

ಶಿವಮೊಗ್ಗ: ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ವಿಮಾನ ನಿಲ್ದಾಣವು (Shivamogga Airport) ರಾಜ್ಯದಲ್ಲಿ ಬೆಂಗಳೂರಿನ ನಂತರ ಎರಡನೇ ದೊಡ್ಡ ವಿಮಾನ ನಿಲ್ದಾಣ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಸೋಮವಾರ ನನ್ನ ಜೀವನದಲ್ಲಿ ಮರೆಲಾಗದ ಕ್ಷಣ. ನರೇಂದ್ರ ಮೋದಿಯವರು ಆಗಮಿಸಿ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಿದ್ದಾರೆ. ಲಕ್ಷಾಂತರ ಜನರು ಈ ವಿಶೇಷ ಕ್ಷಣದಲ್ಲಿ ಭಾಗವಹಿಸಿ. ಇಷ್ಟು ಬೇಗ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಬೆಂಗಳೂರಿನ ನಂತರ ಇದೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದೆ ಎಂದರು.

ಮೋದಿಯವರ ಇಡೀ ದೇಶಕ್ಕೆ ಆದರ್ಶವಾದ ವ್ಯಕ್ತಿ. ಕಾರ್ಯಕ್ರಮಕ್ಕೆ ಆಗಮಿಸಿ ಶಾಂತ ರೀತಿಯಲ್ಲಿ ವರ್ತಿಸಿ ಎಂದು ಜನರಲ್ಲಿ ಮನವಿ ಮಾಡಿದರು. ಇದು ಹುಟ್ಟುಹಬ್ಬಕ್ಕೆ ಗಿಫ್ಟ್‌ ಇರಬಹುದೇ ಎಂಬ ಕುರಿತು ಪ್ರತಿಕ್ರಿಯಿಸಿ, ನೀವು ಏನು ಬೇಕಾದ್ರು ಕರೀರಿ. ಮೋದಿಯವರನ್ನು ಲೋಕಾರ್ಪಣೆ ಮಾಡಲು ಕರೆದಿದ್ದೆವು. ನಿಮ್ಮ ಹುಟ್ಟು ಹಬ್ಬದ ದಿನದಂದೆ ಬರುತ್ತೇವೆ ಎಂದು ಹೇಳಿದ್ದಾರೆ. ಅದು ನನಗೆ ಸಂತೋಷ ತರುವ ವಿಷಯವಾಗಿದೆ ಎಂದರು.

ಬಿಜೆಪಿ ಬಿಎಸ್ವೈ ಕಡಗಣನೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ಯಾರೂ ನನನ್ನು ಕಡೆಗಣನೆ ಮಾಡಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ ಮಾಡುತ್ತೇನೆ. ಮತ್ತೆ ಅಧಿಕಾರಕ್ಕೆ ತರಲು ಹಾಗೂ ಮೋದಿ ಯವರ ಕೈ ಬಲಪಡಿಸಲು ನಿರಂತರವಾಗಿ ಕೆಲಸ ಮಾಡುತ್ತೇವೆ. ಪಕ್ಷದ ಒಬ್ಬ ಕಾರ್ಯಕರ್ತರಾಗಿ ನಾನು ಕೆಲಸ ಮಾಡುತ್ತೇನೆ. ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆ ವಿಚಾರದಲ್ಲಿ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಬಿಎಸ್ ವೈ ಮನೆಯಲ್ಲಿ ಜನಜಂಗುಳಿ ನೆರೆದಿದ್ದು, ಯಡಿಯೂರಪ್ಪ ಅವರಿಗೆ ಹಾರ, ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಬಿ ವೈ ರಾಘವೇಂದ್ರ ಅವರನ್ಬೂ ಕಾರ್ಯಕರ್ತರು ಅಭಿನಂದಿಸಿದರು.

ಕಾರ್ಯಕ್ರಮಕ್ಕೆ ಪಾಸ್‌ ಬೇಕಿಲ್ಲ

ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ. ರಾಘವೇಂದ್ರ, ನಾವು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಫೆ. 27ರಂದು ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟಿದ ಹಬ್ಬ. ಅವರಿಗೆ ಅಂದು 80 ವರ್ಷ ತುಂಬುತ್ತಿದೆ. ಚುನಾಯಿತ ಪ್ರತಿನಿಧಿಯಾಗಿ 50 ವರ್ಷ ತುಂಬುತ್ತಿದೆ. ಯಡಿಯೂರಪ್ಪ ಅಂದ್ರೆ ಅಭಿವೃದ್ಧಿಯ ಹರಿಕಾರರು. ಕ್ಷೇತ್ರಕ್ಕೆ, ರಾಜ್ಯಕ್ಕೆ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಪ್ರಪಂಚ ಕಂಡ ಅದ್ವಿತೀಯ ನಾಯಕ ಮೋದಿ ಶಿವಮೊಗ್ಗಕ್ಕೆ ಬರ್ತಿದ್ದಾರೆ.

ಅವರು ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡುತ್ತಿರುವುದು ಇಡೀ ಮಲೆನಾಡು ಭಾಗಕ್ಕೆ ಸಂತಸವಾಗಿದೆ. ದೇಶದ ಆರ್ಥಿಕತೆಯ ಬೆಳವಣಿಗೆಯ ಮೋದಿ ಕನಸಿಗೆ ಶಿವಮೊಗ್ಗ ಸಹಕಾರಿಯಾಗಲಿದೆ. ಶಿವಮೊಗ್ಗದಿಂದ ವಿಮಾನಗಳ ಹಾರಾಟ ಶೀಘ್ರ ಆರಂಭವಾಗಲಿದೆ. ಸ್ಟಾರ್ ಏರ್ಲೈನ್ಸ್, ಇಂಡಿಗೋ ಕರಾರುಪತ್ರ ಮಾಡಿಕೊಳ್ಳುತ್ತಿದೆ. ಉದ್ಘಾಟನೆಯ 15-20 ದಿನಗಳಲ್ಲಿ ವಿಮಾನ ಹಾರಾಟದ ನಿರೀಕ್ಷೆಯಿದೆ. ವಿಮಾನ ಹಾರಾಟದಿಂದ ಮಲೆನಾಡು ಭಾಗಕ್ಕೆ ಸಹಕಾರಿಯಾಗಲಿದೆ. ಪ್ರತ್ಯಕ್ಷ, ಪರೋಕ್ಷ ಉದ್ಯೋಗಾವಕಾಶ ಸಿಗಲಿದೆ. ಪ್ರಪಂಚದ ಯಾವುದೇ ಭಾಗದಿಂದ ಪ್ರವಾಸಿಗರು ಬಂದ್ರೆ 8-10 ದಿನ ಈ ಭಾಗದಲ್ಲಿ ವಾಸ್ಯವ್ಯ ಮಾಡುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗಿದೆ. 200 ಕೋಟಿ ರೂ. ವೆಚ್ಚದಲ್ಲಿ ಜೋಗಫಾಲ್ಸ್ ಅಭಿವೃದ್ಧಿ ಆಗುತ್ತಿದೆ. ಕೊಡಚಾದ್ರಿ-ಕೊಲ್ಲೂರು ನಡುವೆ ಕೇಬಲ್ ಕಾರ್ ನಿರ್ಮಾಣವಾಗಲಿದೆ. 20 ಕೋಟಿ ರೂ. ವೆಚ್ಚದಲ್ಲಿ ಸಕ್ರೆಬೈಲ್ ಆನೆಬಿಡಾರ ಅಭಿವೃದ್ಧಿ ಆಗುತ್ತಿದೆ. ಕಳಸವಳ್ಳಿ-ಸಿಗಂದೂರು ಸೇತುವೆ ನಿರ್ಮಾಣವಾಗುತ್ತಿದೆ.

ಮಲೆನಾಡು ಸೌಂದರ್ಯ ಹೆಚ್ಚಿಸುವ ಕೆಲಸ ಆಗುತ್ತಿದೆ. 80 ಕೋಟಿ ರೂ.ವೆಚ್ಚದಲ್ಲಿ ಅಕ್ಕಮಹಾದೇವಿ ಜನ್ಮಸ್ಥಳ ಅಭಿವೃದ್ಧಿ ಆಗುತ್ತಿದೆ. ಮುಂದಿನ ತಿಂಗಳು 17ರಂದು ಉದ್ಘಾಟನೆ ಆಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಬರುವ ನಿರೀಕ್ಷೆಯಿದೆ. ಹೀಗಾಗಿ ನೂರಕ್ಕೆ ನೂರು ವಿಮಾನ ನಿಲ್ದಾಣ ಯಶಸ್ವಿಯಾಗಿ ಲೋಕಾರ್ಪಣೆಗೊಂಡು ವ್ಯವಸ್ಥಿತವಾಗಿ ನಡೆಯುತ್ತೆ.

ವಿಮಾನ ನಿಲ್ದಾಣಕ್ಕೆ ಪೂರಕವಾಗಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಶೇ.90ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಅದರ ಉದ್ಘಾಟನೆಯೂ ಪ್ರಧಾನಿ ಅವರಿಂದ ನೆರವೇರಲಿದೆ. ಇದಲ್ಲದೆ ಶಿವಮೊಗ್ಗದಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ಗೆ ಹಣ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ 10 ಕೋಟಿ ರೂ. ಬಿಡುಗಡೆ ಆಗಿದೆ. ಎರಡನೇ ಹಂತದಲ್ಲಿ 20 ಕೋಟಿ ರೂ. ಕೊಡುವುದಾಗಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಫೋನ್ ಮಾಡಿ ಹೇಳಿದ್ದಾರೆ. ಸುಮಾರು 75 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣ ಆಗಲಿದೆ.

ಶಿವಮೊಗ್ಗದ ರೈಲ್ವೆ ಮಾರ್ಗ ಒಳಭಾಗದಲ್ಲಿದೆ. ಉಪ ಮಾರ್ಗ ಶಿವಮೊಗ್ಗಕ್ಕೆ ಸಂಪರ್ಕಿಸುತ್ತಿದೆ. ಹೀಗಾಗಿ ಉತ್ತರ ಕರ್ನಾಟಕಕ್ಕೂ, ಮಲೆನಾಡಿಗೂ ರೈಲ್ವೆ ಸಂಪರ್ಕವಿಲ್ಲ. ಹೀಗಾಗಿ 600 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ನಡೆಯಲಿದೆ. ಶಿವಮೊಗ್ಗ-ರಾಣೆಬೆನ್ನೂರು ನಡುವೆ ಹೊಸ ರೈಲ್ವೆ ಮಾರ್ಗಕ್ಕೆ ಪ್ರಧಾನಿ ಶಂಕುಸ್ಥಾಪನೆ ಮಾಡಲಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಶಿವಮೊಗ್ಗದಲ್ಲಿ ಇದು ಮೊದಲ ಹೊಸ ರೈಲ್ವೆ ಮಾರ್ಗ ಆಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸಹಕಾರದಿಂದ ಈ ರೈಲ್ವೆ ಮಾರ್ಗ ನಡೆಯುತ್ತಿದೆ. ಕೇಂದ್ರ ರೈಲ್ವೆ ಸಚಿವರ ಸಹಕಾರವನ್ನೂ ಎಷ್ಟು ಹೇಳಿದರೂ ಕಮ್ಮಿಯೇ. ಇದರ ಜೊತೆಗೆ ಶಿವಮೊಗ್ಗ, ಸಾಗರ, ತಾಳಗುಪ್ಪ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಪ್ರಸಕ್ತ ಬಜೆಟ್ನಲ್ಲಿ ಘೋಷಿಸಲಾಗಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 3.78 ಲಕ್ಷ ಕುಟುಂಬಗಳಿವೆ. ಆದರೆ ಸ್ವಾತಂತ್ರ್ಯ ಬಂದ ನಂತರ ಈವರೆಗೆ ಕೇವಲ 75 ಸಾವಿರ ಮನೆಗಳಿಗೆ ಶುದ್ಧ ನೀರು ನಲ್ಲಿ ಮೂಲಕ ಕಲ್ಪಿಸಲಾಗಿದೆ. ಆದರೆ ನಮ್ಮ ಕೇಂದ್ರ ಸರ್ಕಾರ ಉಳಿದ 3 ಲಕ್ಷ ಮನೆಗಳಿಗೆ ಶುದ್ಧ ನೀರು ಒದಗಿಸುವ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ‌Shivamogga Airport: ಲೋಕಾರ್ಪಣೆಗೆ ಮುನ್ನ ಶಿವಮೊಗ್ಗದ ಏರ್ಪೋರ್ಟ್‌ನಲ್ಲಿ ವಾಯುಪಡೆ ವಿಮಾನ ಲ್ಯಾಂಡಿಂಗ್‌, ಟ್ರಯಲ್‌ ರನ್‌ ಯಶಸ್ವಿ

ಬರುವಂತಹ ದಿನಗಳಲ್ಲಿ ಉತ್ತಮ ಶಕ್ತಿ ಮಲೆನಾಡು ಭಾಗಕ್ಕೆ ಆಗುತ್ತೆ. ಸುಮಾರು ಒಂದು ಮಿಲಿಯನ್ ಜನರಿಗೆ ವಿಮಾನ ನಿಲ್ದಾಣದಿಂದ ಅನುಕೂಲ ಆಗುತ್ತೆ. ವಿಮಾನ ಸಂಚಾರ ಮಧ್ಯಮ ವರ್ಗದವರಿಗೂ ಸಿಗಬೇಕು ಎಂಬುದು ಮೋದಿಯವರ ಕನಸು. ಆ ನಿಟ್ಟಿನಲ್ಲಿ ಕೆಲಸ ಆಗುತ್ತಿದೆ. ಮೋದಿಯವರು ಶಿವಮೊಗ್ಗ ಕಾರ್ಯಕ್ರಮ ಮುಗಿಸಿ ಒಂದು ಗಂಟೆಗೆ ಬೆಳಗಾವಿಗೆ ಹೊರಡುತ್ತಾರೆ. ಕಾರ್ಯಕ್ರಮದಲ್ಲಿ 2 ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ವ್ಯವಸ್ಥೆ ಮಾಡುವ ಕೆಲಸ ಆಗಿದೆ.

ಪಾಸ್ ಇದ್ರೆ ಮಾತ್ರ ಒಳಪ್ರವೇಶ ಎಂಬ ವದಂತಿ ಅಪ್ಪಟ ಸುಳ್ಳು. ಪಾಸ್ ಇಲ್ಲದವರಿಗೂ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವಿದೆ. ಸರಿಯಾದ ಸಮಯದಲ್ಲಿ ಎಲ್ಲರೂ ಆಗಮಿಸಬೇಕು ಎಂದರು.

Exit mobile version