ಶಿವಮೊಗ್ಗ: ಕರ್ನಾಟಕ ಪೊಲೀಸರು ಕರ್ತವ್ಯ ಎಂದು ಅಖಾಡಕ್ಕಿಳಿದರೆ ಮನೆ ಮಠವನ್ನು ಮರೆತು ಜನರ ಸೇವೆಗೆ ನಿಂತುಬಿಡುತ್ತಾರೆ. ಬಿಸಿಲು, ಮಳೆ, ಗಾಳಿ ಯಾವುದನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುವ ಖಾಕಿ ಪಡೆ, ಮನೆಯ ಸದಸ್ಯರಿಂದ ದೂರ ಉಳಿದು ಬೆಳಕಿನ ಹಬ್ಬವನ್ನು ನಡುರಸ್ತೆಯಲ್ಲಿ (Deepawalli 2022) ಆಚರಿಸಿದ್ದಾರೆ.
ಗಲಭೆಗ್ರಸ್ಥ ಶಿವಮೊಗ್ಗದಲ್ಲಿ ಜನರಿಗಷ್ಟೇ ಅಲ್ಲ ಅವರನ್ನು ಕಾವಲು ಕಾಯುತ್ತಿರುವ ಪೊಲೀಸರಿಗೂ ನೆಮ್ಮದಿ ಇಲ್ಲದಂತಾಗಿದೆ. ತಿಂಗಳುಗಟ್ಟಲೆ ಶಿವಮೊಗ್ಗದ ಬೀದಿಯಲ್ಲಿ ಅಲೆದಾಡುತ್ತಿರುವ ಪೊಲೀಸರು ಬೀದಿಯಲ್ಲಿ ದೀಪಾವಳಿಯನ್ನು ಸಂಭ್ರಮಿಸಿದ್ದಾರೆ.
ಕಳೆದ 1 ವರ್ಷದಿಂದ ಶಿವಮೊಗ್ಗದ ಘಟನೆಗಳು ಪೊಲೀಸರ ನೆಮ್ಮದಿಯನ್ನು ಕಿತ್ತುಕೊಂಡಿದೆ. ರಾಷ್ಟ್ರಾದ್ಯಂತ ಸದ್ದು ಮಾಡಿದ್ದ ಶಿವಮೊಗ್ಗದಲ್ಲಿ ನಡೆದಿದ್ದ ಹಲವು ಘಟನೆಗಳು, ಜನಾಕ್ರೋಶ ಸಹಿಸಿಕೊಂಡು, ಹಗಲಿರುಳು ಕೆಲಸ ಮಾಡುತ್ತಿರುವ ಶಿವಮೊಗ್ಗ ಪೊಲೀಸರು, ಮನೆ ಬಿಟ್ಟು ನಡುರಸ್ತೆಯಲ್ಲಿ ದೀಪಾವಳಿ ಆಚರಿಸಿ, ಸಂಭ್ರಮಿಸಿದರು.
ಟ್ರಾಫಿಕ್ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದಲ್ಲಿ ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಬೆಳಕಿನ ಹಬ್ಬವನ್ನು ಆಚರಿಸಲಾಯಿತು.ಹಣತೆ ಬೆಳಗಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂಭ್ರಮದಲ್ಲಿ ಖುದ್ದು ಶಿವಮೊಗ್ಗದ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್ ಭಾಗಿಯಾದರು. ತಾವು ಹಣತೆ ಹಚ್ಚಿ, ಸಿಬ್ಬಂದಿಗೆ ಹಬ್ಬದ ಶುಭಾಶಯ ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ 24 ಗಂಟೆಯೂ ಕೆಲಸ ಇರುತ್ತದೆ. ನಮ್ಮ ಸಿಬ್ಬಂದಿ ಯಾರೊಬ್ಬರು ಮನೆಗೆ ಹೋಗಲು ಸಾಧ್ಯವಾಗಿಲ್ಲ. ದೀಪಾವಳಿಯ ಖುಷಿ ನಮಗೂ ಇದೆ, ಆದರೆ ಕುಟುಂಬಸ್ಥರೊಂದಿಗೆ ಹಬ್ಬದ ಆಚರಣೆ ಸಾಧ್ಯವಾಗಿಲ್ಲ. ಹೀಗಾಗಿ ಎಲ್ಲ ಸಿಬ್ಬಂದಿ ಸೇರಿ ರಸ್ತೆಯಲ್ಲಿಯೇ ಹಬ್ಬ ಆಚರಿಸಿದ್ದೇವೆ ಎಂದು ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ತಿಳಿಸಿದರು.
ಇದನ್ನೂ ಓದಿ | Murder | ಶಿವಮೊಗ್ಗದ ಕೊಲೆ ಆರೋಪಿ ಕಾಲಿಗೆ ಗುಂಡು, ಸ್ಥಳ ಮಹಜರು ವೇಳೆ ಹಲ್ಲೆಗೆ ಯತ್ನಿಸಿದವನಿಗೆ ತಕ್ಕ ಪಾಠ