ಬೆಂಗಳೂರು: ಒಂದು ವೇಳೆ ಆವತ್ತು ಮಹಮ್ಮದ್ ಶಾರಿಕ್ (Mohammad Shariq) ರಿಕ್ಷಾದಲ್ಲಿ ತೆಗೆದುಕೊಂಡು ಹೊರಟಿದ್ದ ಕುಕ್ಕರ್ ಬಾಂಬ್ (Cooker Bomb) ನಿಗದಿಯಂತೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ (Kadri Manjunatheshwara temple) ಬಳಿ ಸ್ಫೋಟವಾಗುತ್ತಿದ್ದರೆ, ಇಷ್ಟು ಹೊತ್ತಿಗೆ ಉಡುಪಿ ಶ್ರೀ ಕೃಷ್ಣ ಮಠ (Udupi Krishna matt) ಮತ್ತು ಚಿಕ್ಕಮಗಳೂರಿನ ಬಿಜೆಪಿ ಕಚೇರಿಯೂ (Chikkamagaluru BJP Office) ಸ್ಫೋಟವಾಗುತ್ತಿತ್ತು ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಶಿವಮೊಗ್ಗ ಟೆರರ್ ಬ್ರದರ್ಸ್ (Shivamogga Terror) ಎಂದೇ ಕರೆಯಲಾಗುವ ಮತೀನ್ ತಾಹಾ, ಮಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್, ಮಹಮ್ಮದ್ ಯಾಸಿನ್ ಮತ್ತು ಇತ್ತೀಚೆಗೆ ದಿಲ್ಲಿಯಲ್ಲಿ ಸೆರೆ ಸಿಕ್ಕ ಅರಾಫತ್ ಅಲಿ ಮೊದಲಾದ ಶಂಕಿತ ಉಗ್ರರ ವಿಚಾರಣೆಯ ವೇಳೆ ಹಲವಾರು ಮಹತ್ವದ ವಿಚಾರಗಳು ಬಯಲಿಗೆ ಬಂದಿವೆ.
ಅದರಲ್ಲೂ ಮುಖ್ಯವಾಗಿ ಇತ್ತೀಚಿನವರೆಗೂ ಕೀನ್ಯಾದ ನೈರೋಬಿಯಲ್ಲಿದ್ದು, ಇತ್ತೀಚೆಗಷ್ಟೇ ದಿಲ್ಲಿ ಮೂಲಕ ದೇಶ ಪ್ರವೇಶಿಸಿದ ಅರಾಫತ್ ಅಲಿ ಹಲವು ಸಂಗತಿಗಳನ್ನು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.
ಆತನೇ ಬಾಯಿಬಿಟ್ಟಿರುವ ಪ್ರಕಾರ, ಉಗ್ರರು ಕದ್ರಿ ದೇವಸ್ಥಾನ, ಉಡುಪಿ ಕೃಷ್ಣ ಮತ್ತು ಚಿಕ್ಕಮಗಳೂರಿನ ಬಿಜೆಪಿ ಕಚೇರಿಯನ್ನು ಸ್ಫೋಟಿಸಲು ಸಂಚು ನಡೆಸಿದ್ದರು. ಅದರ ಭಾಗವಾಗಿಯೇ 2022ರ ನವೆಂಬರ್ 19ರಂದು ಮಹಮ್ಮದ್ ಶಾರಿಕ್ ಕುಕ್ಕರ್ ಬಾಂಬ್‌ನ್ನು ಹಿಡಿದುಕೊಂಡು ದೇವಸ್ಥಾನದತ್ತ ಹೊರಟಿದ್ದ. ಆದರೆ, ಅದು ನಾಗುರಿ ಸಮೀಪ ರಿಕ್ಷಾದಲ್ಲಿ ಸಾಗುತ್ತಿದ್ದಾಗ ಸ್ಫೋಟಿಸಿದೆ. ಈ ಘಟನೆಯಲ್ಲಿ ಶಾರಿಕ್ ಮತ್ತು ರಿಕ್ಷಾ ಚಾಲಕ ಪುರುಷೋತ್ತಮ ಅವರಿಗೆ ಗಾಯಗಳಾಗಿತ್ತು. ಈಗ ಇಬ್ಬರೂ ಚೇತರಿಸಿಕೊಂಡಿದ್ದಾರೆ.
ಈ ನಡುವೆ, ಮಹಮ್ಮದ್ ಶಾರಿಕ್‌ನ ವಿಚಾರಣೆಯ ವೇಳೆ ತಾನು ಕದ್ರಿ ದೇವಸ್ಥಾನವನ್ನು ಟಾರ್ಗೆಟ್ ಮಾಡಲು ಹೋಗುತ್ತಿರುವುದಾಗಿ ತಿಳಿಸಿದ್ದ. ಒಂದು ವೇಳೆ ಕದ್ರಿ ದೇವಸ್ಥಾನದ ಬಳಿ ಸ್ಫೋಟ ನಡೆಸುವ ಸಂಚು ಸಫಲವಾಗಿದ್ದರೆ ಬಳಿಕ ಉಡುಪಿ ಮಠದಲ್ಲಿ ಬಾಂಬ್ ಇಡುವ ಸ್ಕೆಚ್ ನಡೆದಿತ್ತು. ಅದಾದ ಬಳಿಕ ಚಿಕ್ಕಮಗಳೂರಿನ ಬಿಜೆಪಿಯನ್ನು ಕೂಡಾ ಟಾರ್ಗೆಟ್ ಮಾಡಲಾಗಿತ್ತು. ಆದರೆ, ಕದ್ರಿ ದೇವಸ್ಥಾನದ ಟಾರ್ಗೆಟ್ ಮಿಸ್ ಆಗಿದ್ದರಿಂದ ಉಡುಪಿ ಮತ್ತು ಚಿಕ್ಮಮಗಳೂರು ಬಿಜೆಪಿ ಕಚೇರಿ ಟಾರ್ಗೆಟ್‌ಗಳು ಮುಂದೆ ಹೋಗಿವೆ ಎನ್ನಲಾಗಿದೆ.
ತೀವ್ರ ವಿಚಾರಣೆ ನಡೆಸುತ್ತಿರುವ ಎನ್‌ಐಎ
ಅರಾಫತ್ ಅಲಿಯ ಬಂಧನದ ಬಳಿಕ ಶಿವಮೊಗ್ಗ ಟೆರರಿಸ್ಟ್‌ಗಳ ಅಡ್ಡೆಯಾಗಿರುವುದನ್ನು ಎನ್‌ಐಎ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿಯೇ ಕಳೆದ ಮೂರು ದಿನದಿಂದ ಮಲೆನಾಡಲ್ಲಿ ಬೀಡು ಬಿಟ್ಟಿದೆ ಎನ್‌ಐಎ.
ಈಗಾಗಲೇ ತೀರ್ಥಹಳ್ಳಿಯ ನಾಲ್ವರಿಗೆ ನೊಟೀಸ್ ನೀಡಿರುವ ಎನ್‌ಐಎ ಅವರನ್ನು ಕರೆಸಿಕೊಂಡು ವಿಚಾರಣೆ ನಡೆಸುತ್ತಿದೆ.
ಅರಾಫತ್ ಹಿಂದೆ ವಿದೇಶಿ ಕ್ಷುದ್ರ ಶಕ್ತಿಗಳು
ದಿಲ್ಲಿಯಲ್ಲಿ ಸೆರೆ ಸಿಕ್ಕಿರುವ ಅರಾಫರ್ ಐಸಿಸ್ ಪ್ರಚಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಹಲವು ಉಗ್ರ ಚಟುವಟಿಕೆಯಲ್ಲಿ (Terrorist activity) ಭಾಗಿಯಾಗಿದ್ದ ಆತ ಇಸ್ಲಾಮಿಕ್ ಸ್ಟೇಟ್‌ನ (Islamic State) ಭಾರತ ವಿರೋಧಿ ಭಯೋತ್ಪಾದಕ ಅಜೆಂಡಾವನ್ನು (Anti India terrorist agenda) ಉತ್ತೇಜಿಸಲು ವಿದೇಶದಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದ ಎನ್ನಲಾಗಿದೆ.
ಆತ ಅಲ್ಲಿರುತ್ತಲೇ ಶಿವಮೊಗ್ಗದ ಟೆರರ್ ಎಲಿಮೆಂಟ್‌ಗಳ ಸಂಪರ್ಕದಲ್ಲಿದ್ದ. ಇಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಗೆ ಅಲ್ಲಿಂದಲೇ ಬೆಂಬಲ ಕೊಡುತ್ತಿದ್ದ ಎನ್ನಲಾಗಿದೆ. ಈಗ ಅರಾಫತ್ ಅಲಿ ಬಂಧನ ಉಗ್ರರ ಮೂಳೆ ಮುರಿದಂತಾಗಿದೆ. ಆದರೆ, ಅವನಿಗಿಂತಲೂ ಭಯಾನಕವಾಗಿರುವ ಮತೀನ್ ತಾಹಾ ಮಾತ್ರ ಇನ್ನೂ ಪೊಲೀಸರ ಬಲೆಗೆ ಬಿದ್ದಿಲ್ಲ.