Site icon Vistara News

Shivamogga Violence : ಪೊಲೀಸ್‌ ವರ್ಗಾವಣೆಗೂ ಶಿವಮೊಗ್ಗ ಗಲಭೆಗೂ ಸಂಬಂಧ ಕಲ್ಪಿಸಿದ ಬೊಮ್ಮಾಯಿ

Basavaraja Bommai

#image_title

ಬೆಂಗಳೂರು: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ (Law and order) ಕಾಪಾಡಲು ಸರ್ಕಾರ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ. ಜತೆಗೆ ಶಿವಮೊಗ್ಗ ಗಲಭೆಗೂ (Shivamogga violence) ಪೊಲೀಸ್‌ ಅಧಿಕಾರಿಗಳ ವರ್ಗಾವಣೆಗೂ (Police officers transfer) ಸಂಬಂಧ ಕಲ್ಪಿಸಿದ್ದಾರೆ.

ಸೋಮವಾರ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಶಿವಮೊಗ್ಗ ಪ್ರಕ್ಷುಬ್ಧ ವಾತಾವರಣ ಇರುವ ನಗರ. ಅಲ್ಲಿ ಹಿಂದೆ ಹಲವಾರು ಘಟನೆ ನಡೆದಿದೆ. ಈದ್‌ ಮಿಲಾದ್‌ನಂಥ ಮೆರವಣಿಗೆ ನಡೆದಾಗ ಪೊಲೀಸರು ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಶಿವಮೊಗ್ಗದ ಮೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇಂಥ ಘಟನೆ ನಡೆಯುತ್ತದೆ. ಇಂಥ ಸ್ಟೇಷನ್‌ಗೆ ವರ್ಗಾವಣೆ ಮಾಡುವಾಗ ಸಮರ್ಥ ಅಧಿಕಾರಿ ಹಾಕಬೇಕು. ಸ್ವಹಿತಾಸಕ್ತಿಗಳಿಗೆ ಬಲಿಯಾಗಿ ಅಧಿಕಾರಿಗಳ ವರ್ಗಾವಣೆ ಮಾಡಿದರೆ, ಅವರು ಕಾನೂನು ಕಾಪಾಡುವ ಬದಲು ಬೇರೆ ಕೆಲಸದಲ್ಲಿಯೇ ಮಗ್ನರಾಗುತ್ತಾರೆ. ಇದರಿಂದ ಸಮಾಜಘಾತುಕ ಶಕ್ತಿಗಳಿಗೆ ಕುಮ್ಮಕ್ಕು ಸಿಗುತ್ತದೆʼʼ ಎಂದು ಬೊಮ್ಮಾಯಿ ಅವರು ಆರೋಪಿಸಿದರು. ಪೊಲೀಸ್‌ ಅಧಿಕಾರಿಗಳ ನೇಮಕಾತಿಯಲ್ಲಿ ಆಗಿರುವ ಹಗರಣವೇ ಶಿವಮೊಗ್ಗದಲ್ಲಿ ಗಲಭೆ ಭುಗಿಲೇಳಲು ಕಾರಣ ಎಂದಿದ್ದಾರೆ.

ರಾಜ್ಯ ಪ್ರತಿ ಜಿಲ್ಲೆಯಲ್ಲೂ ಕ್ಲಬ್, ರಿಯಲ್ ಎಸ್ಟೇಟ್ ಮಾಫಿಯಾ ಶುರುವಾಗಿದೆ. ರಾಜ್ಯ ಸರ್ಕಾರ ಮಾಡಿರುವ ವರ್ಗಾವಣೆ ಮಾಫಿಯಾದ ಫಲ ಇದು. ಇದನ್ನ ಸಮಗ್ರವಾಗಿ ನಿಭಾಯಿಸದೆ ಹೋದರೆ ಮುಂದೆ ದೊಡ್ಡ ಅನಾಹುತವಾಗಲಿದೆ ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದರು.

ʻʻರಾಜ್ಯದಲ್ಲಿ ಶಾಂತಿ ಕಾಪಾಡಬೇಕು ಎಂದರೆ ಹಬ್ಬಗಳ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದಿಂದ ಪೊಲೀಸರಿಗೆ ಒಂದು ಸ್ಪಷ್ಟ ನಿರ್ದೇಶನ ಹೋಗಬೇಕು. ತಪ್ಪಾದಾಗ ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೆ ಟ್ರಾನ್ಸ್‌ಫರ್ ಮಾಡಬೇಕು. ಆಗ ಮಾತ್ರ ಇಂಥ ಘಟನೆಗಳನ್ನು ತಡೆಯಬಹುದುʼʼ ಎಂದು ಬೊಮ್ಮಾಯಿ ಸಲಹೆ ನೀಡಿದರು.

ಮಾತಲ್ಲಿ ಮಾತ್ರ ಗಾಂಧಿ, ಒಳಗೆ ಗಾಂಧಿ ವಿರೋಧಿ ನೀತಿ

ʻʻಗಾಂಧಿ ಕಂಡ ಕನಸು ಕರ್ನಾಟಕದಲ್ಲಿ ನನಸುʼʼ ಎಂದು ರಾಜ್ಯ ಸರ್ಕಾರ ಜಾಹೀರಾತು ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇವರು ಮಾಡುವುದೆಲ್ಲಾ ಗಾಂಧಿ ವಿರೋಧಿ ನೀತಿ. ಸುಳ್ಳು ಹೇಳುವುದರಿಂದ ಗಾಂಧಿ ವಿರೋಧಿ ನೀತಿ ಪ್ರಾರಂಭ ಆಗುತ್ತದೆ. ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವುದು. ಸಿಕ್ಕಲ್ಲೆಲ್ಲಾ ಮಧ್ಯದಂಗಡಿ ಶುರು ಮಾಡಿದ್ದಾರೆ. ಪ್ರತೀ ಗ್ರಾಮ ಪಂಚಾಯತಿಯಲ್ಲಿ ಮದ್ಯದಂಗಡಿ ತೆರಯುತ್ತಿದ್ದಾರೆ. ಹೇಳಲು ಮಾತ್ರ ಗಾಂಧಿ ಶಾಂತಿ ಮಂತ್ರ ಮಾಡುವುದೆಲ್ಲಾ ಗಾಂಧಿ ವಿರೋಧಿ ಕೆಲಸಗಳು ಎಂದು ಹೇಳಿದರು.

ಇದನ್ನೂ ಓದಿ: Shivamogga Riots : ಶಿವಮೊಗ್ಗಕ್ಕೆ ಇದೇನುS ಹೊಸತಾ?; ಗೃಹ ಸಚಿವ ಪರಮೇಶ್ವರ್‌ ಉಡಾಫೆ ಹೇಳಿಕೆ

ಶಿವಮೊಗ್ಗದಲ್ಲಿ ಆಗಿದ್ದೇನು?

ಭಾನುವಾರ ಬೆಳಗ್ಗೆ ಈದ್​ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿ ತಲ್ವಾರ್​ ಮಾದರಿ ಕಟೌಟ್ ವಿಚಾರಕ್ಕೆ ಗೊಂದಲ ಸೃಷ್ಟಿಯಾಗಿತ್ತು. ಕಟೌಟ್ ವಿಚಾರವಾಗಿ ಹಿಂದೂ-ಮುಸ್ಲಿಂ ಗದ್ದಲ ಎದ್ದಿತ್ತು. ರಾಗಿಗುಡ್ಡ ಮುಖ್ಯರಸ್ತೆಯಲ್ಲಿ ಕಟೌಟ್ ಹಾಕಲಾಗಿದ್ದು ಜನರು ಪ್ರತಿಭಟನೆ ಮಾಡಿದ್ದರು. ತಕ್ಷಣವೇ  ಎಸ್​ಪಿ  ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು. ನಿಷೇಧಾಜ್ಞೆ ಜಾರಿ ಮಾಡಿ ಪರಿಸ್ಥಿತಿ ನಿಯಂತ್ರಿಸಲಾಗಿತ್ತು. ಶಿವಮೊಗ್ಗದ ರಾಗಿಗುಡ್-ಶಾಂತಿನಗರದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಲಾಗಿದೆ. ಟಿಪ್ಪುವಿನ ಕಟೌಟ್​ನ ಕೆಳಭಾಗದಲ್ಲಿ ಆಕ್ಷೇಪಾರ್ಹ ಸಂಗತಿ ಇದ್ದ ಹಿನ್ನಲೆಯಲ್ಲಿ ಪೊಲೀಸರು ಬಿಳಿ ಬಣ್ಣವನ್ನು ಬಳಿದಿದ್ದರು. ಇದರಿಂದ ರೊಚ್ಚಿಗೆದ್ದ ರಾಗಿಗುಡ್ಡದ ಶಾಂತಿನಗರ ನಿವಾಸಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಕಿಡಿಗೇಡಿಗಳು ಮನೆ, ವಾಹನಗಳ ಮೇಲೆ  ಕಲ್ಲು ತೂರಾಟ ನಡೆಸಿದ್ದಾರೆ.

Exit mobile version