ಬೆಂಗಳೂರು: ಶಿವಮೊಗ್ಗದಲ್ಲಿ ಸಣ್ಣ ಗಲಾಟೆ ಆಗಿದೆ ಎಂಬ ಗೃಹ ಸಚಿವ ಜಿ. ಪರಮೇಶ್ವರ್ (Home Minister G Parameshwar) ಹೇಳಿಕೆಯನ್ನು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ (MLC N Ravikumar) ಖಂಡಿಸಿದ್ದು, ಇಂಥ ಹೇಳಿಕೆ ನೀಡಲು ನಿಮಗೆ ನಾಚಿಕೆ ಆಗಲ್ವಾ (Dont you feel Ashamed? ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ʻʻಶಿವಮೊಗ್ಗದಲ್ಲಿ ನಡೆದಿರುವ ಹಿಂದೂ-ಮುಸ್ಲಿಂ ಗಲಭೆಗೆ Shivamogga violence) ಸರ್ಕಾರದ ವೈಫಲ್ಯವೇ ಕಾರಣ. ನಿನ್ನೆ ದಿನ ಕತ್ತಿ ಗುರಾಣಿ ಹಿಡಿದು ಮೆರವಣಿಗೆ (Procession with Swords in Hand) ಮಾಡಲು ಅವಕಾಶ ನೀಡಿದ್ದು ಯಾರು.?ʼʼ ಎಂದು ಪ್ರಶ್ನೆ ಮಾಡಿದ್ದಾರೆ.
ʻʻದುಷ್ಕರ್ಮಿಗಳು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಮನೆಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಗಾಯಗೊಂಡ ಜನರು ಭಯದಿಂದ ತಲ್ಲಣಿಸುತ್ತಿದ್ದಾರೆ. ಶಾಂತಮ್ಮ ಅನ್ನೋರಿಗೆ ಸ್ಟಿಚ್ಚಸ್ ಹಾಕಿದ್ದಾರೆ. ಇದೆಲ್ಲವನ್ನ ನೋಡಿದ್ರೆ ಸರ್ಕಾರ ಉದ್ದೇಶ ಪೂರ್ವಕವಾಗಿ ಗಲಭೆ ನಡೆಸಲು ಪ್ರೇರಣೆ ನೀಡಿದ ಎಂದು ಅನಿಸುತ್ತದೆʼʼ ಎಂದು ರವಿಕುಮಾರ್ ಹೇಳಿದರು.
ʻʻಗೃಹ ಸಚಿವರಾಗಿರುವ ಜಿ. ಪರಮೇಶ್ವರ್ ಇದೊಂದು ಕ್ಷುಲ್ಲಕ ಘಟನೆ ಎಂದು ಹೇಳಿದ್ದಾರೆ. ದೊಡ್ಡ ಗಲಭೆ ಆಗೋದನ್ನ ನಮ್ಮ ಪೊಲೀಸರು ತಡೆದಿದ್ದಾರೆ ಅಂದಿದ್ದಾರೆ. ಈ ರೀತಿ ಹೇಳಿಕೆ ನೀಡಲು ಗೃಹ ಸಚಿವರಿಗೆ ನಾಚಿಕೆ ಆಗಲ್ವಾ.? ಉಡುಪಿ ಪ್ರಕರಣದಲ್ಲೂ ಇದೇ ರೀತಿ ಹೇಳಿಕೆ ನೀಡಿದರು.ʼʼ ಎಂದು ಹೇಳಿದ ರವಿ ಕುಮಾರ್ ಅವರು, ʻʻಸಿಎಂ, ಡಿಸಿಎಂ ಈ ವಿಚಾರದಲ್ಲಿ ಮೌನವಹಿಸಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆ ತಂದ ಬಳಿಮ ಎಲ್ಲಾ ಸಮಸ್ಯೆ ಬಗೆಹರಿದಿದೆ ಅಂದುಕೊಂಡಿದ್ದಾರೆ. ಸಂಪೂರ್ಣ ನಿರ್ಲಕ್ಷ್ಯ ಮಾಡಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್. ರವಿ ಕುಮಾರ್.
ʻʻರಾಜ್ಯ ಸರ್ಕಾರಕ್ಕೆ ಹಿಂದೂಗಳ ರಕ್ಷಣೆ ಅನ್ನೋದು ಕೊನೆಯ ಪ್ರಿಯಾರಿಟಿಯಾಗಿದೆ. ಹಿಂದೂಗಳ ವಿಚಾರ ಸರ್ಕಾರ ಅತೀವ ನಿರ್ಲಕ್ಷ್ಯ ತೋರಿಸುತ್ತಿದೆʼʼ ಎಂದು ಹೇಳಿದ ಅವರು, ಈ ರೀತಿ ಮೆರವಣಿಗೆ ಮಾಡಲು ಅನುಮತಿ ಕೊಟ್ಟವರು ಯಾರು? ಅವರನ್ನು ಮೊದಲು ಸಸ್ಪೆಂಡ್ ಮಾಡಬೇಕುʼʼ ಎಂದು ಆಗ್ರಹಿಸಿದರು.
ಇದನ್ನೂ ಓದಿ: Shivamogga Violence : ಶಿವಮೊಗ್ಗ ಗಲಭೆಕೋರರನ್ನು ರಕ್ಷಣೆ ಮಾಡಲ್ಲ, 43 ಮಂದಿ ಅರೆಸ್ಟ್ ಎಂದ ಸಿದ್ದರಾಮಯ್ಯ
ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಗೃಹ ಸಚಿವರು ಹೇಳುತ್ತಾರೆ. ಒಂದು ವೇಳೆ ಕ್ರಮ ಕೈಗೊಂಡಿದ್ದರೆ ಯಾಕೆ ಇಂಥ ಘಟನೆ ನಡೆಯಿತು? ಹಿಂದೆ ಬೆಂಗಳೂರಿನ ಕೆ.ಜಿ. ಹಳ್ಳಿಯಲ್ಲಿ ಕಾಂಗ್ರೆಸ್ನದೇ ಶಾಸಕರ ಮನೆಗೆ ಮನೆಗೆ ಬೆಂಕಿ ಹಚ್ಚಿದರು. ಅದರ ಬಗ್ಗೆಯೂ ಕ್ರಮ ತೆಗೆದುಕೊಂಡಿಲ್ಲ. ಕೋಲಾರದಲ್ಲಿ ಕತ್ತಿ, ಗುರಾಣಿ ಆಡಿಸಿದ್ದಾರೆ. ಹಿಂದೂಗಳ ರಕ್ಷಣೆಗೆ ಬೆಲೆ ಇಲ್ಲವಾ.? ನಿಮಗೆ ರಕ್ಷಣೆ ಕೊಡಲು ಆಗುವುದಿಲ್ಲ ಎಂದಾದರೆ, ನಿಮ್ಮ ಕೈಯಲ್ಲಿ ಆಗದಿದ್ದರೆ ರಾಜೀನಾಮೆ ಕೊಟ್ಟು ಹೊರಡಿʼʼ ಎಂದು ಆಗ್ರಹಿಸಿದರು ರವಿಕುಮಾರ್.
ʻʻಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಬಂಧುಗಳು ಮಾತ್ರ ಮತ ಕೊಟ್ಟಿಲ್ಲ. ಅನೇಕ ಹಿಂದೂಗಳು ಕೂಡ ಮತ ಕೊಟ್ಟಿದ್ದಾರೆ. ಅವರ ರಕ್ಷಣೆಯ ಜವಾಬ್ದಾರಿ ನಿಮಗೆ ಇಲ್ವಾ? ನಿಮ್ಮ ಕೈಯಲ್ಲಿ ಆಗದಿದ್ದರೆ ಕೂಡಲೇ ರಾಜೀನಾಮೆ ಕೊಟ್ಟು ಹೊರಡಿʼʼ ಎಂದು ರವಿ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.