ಶಿವಮೊಗ್ಗ: ನಾವು ನಮ್ಮ ಸಂಪ್ರದಾಯದಲ್ಲಿ ತ್ರಿಶೂಲ (Trishul in hindu culture) ಹಿಡಿದುಕೊಳ್ಳಲ್ವಾ? ಹಾಗೆ ಅವರು ತಲವಾರು (Talwar weapon) ಹಿಡಿದುಕೊಂಡಿದ್ದಾರೆ ಅಷ್ಟೆ. ಹಾಗಂತ ಅದೇನೂ ಆಯುಧ ಆಗಿರಲಿಲ್ಲ. ಪ್ಲಾಸ್ಟಿಕ್‌ನಿಂದ ಮಾಡಿದ ಆಯುಧ ಅದು- ಶಿವಮೊಗ್ಗದಲ್ಲಿ (Shivamogga Violence) ನಡೆದ ಈದ್ ಮಿಲಾದ್ ಮೆರವಣಿಗೆ (Eid milad procession) ವೇಳೆ ತಲವಾರು ಝಳಪಿಸಿದ ವಿವಾದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ನೀಡಿದ ವಿವರಣೆ ಇದು.
ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಬೆಳಗ್ಗೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಲಭೆಯಲ್ಲಿ ಗಾಯಗೊಂಡವರ ಜತೆ ಮಾತನಾಡಿ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ಅವರು ಶಿವಮೊಗ್ಗದಲ್ಲಿ ದೊಡ್ಡ ಮಟ್ಟದ ಗಲಭೆ ಏನೂ ತಡೆದಿಲ್ಲ. ಜನರು ಭಯಪಡುವ ಅಗತ್ಯವೇನೂ ಇಲ್ಲ ಎಂದು ಹೇಳಿದರು.
ಭಾನುವಾರ ನಡೆದ ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ ರಾಗಿ ಗುಡ್ಡ ಪ್ರದೇಶದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ ಎಂಬ ಆರೋಪ ಕೇಳಿಬಂದು ಗಲಭೆ ಶುರುವಾಗಿತ್ತು. ಕೆಲವರು ಮುಸುಕು ಹಾಕಿಕೊಂಡು ರಾಗಿಗುಡ್ಡದ ಕೆಲವು ಮನೆಗಳಿಗೆ ದಾಳಿ ಮಾಡಿದರು. ಕೆಲವು ವಾಹನಗಳು ಧ್ವಂಸವಾಗಿದ್ದವು. ತಡೆಯಲು ಹೋದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿತ್ತು. ಬಳಿಕ ಸೋಮವಾರದ ಹೊತ್ತಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆದರೆ, ರಾಗಿಗುಡ್ಡ ಪ್ರದೇಶದಲ್ಲಿ ಸೆಕ್ಷನ್ 144 ಮುಂದುವರಿದಿದೆ. ಶಿವಮೊಗ್ಗ ಗಲಭೆಗೆ ಸಂಬಂಧಿಸಿ ರಾಜಕಾರಣಿಗಳು ಪರಸ್ಪರ ದೋಷಾರೋಪ ಮಾಡಿಕೊಳ್ಳುತ್ತಿದ್ದಾರೆ. ಅದರ ನಡುವೆ ಈಗ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ.
ತಲವಾರು, ಖಡ್ಗದಿಂದ ಯಾರ ಮೇಲೂ ಹಲ್ಲೆ ನಡೆದಿಲ್ಲ
ʻʻನಮ್ಮ ಸಂಪ್ರದಾಯದಲ್ಲಿ ತ್ರಿಶೂಲ ಹಿಡಿಯುತ್ತೇವೆ. ಅದೇ ರೀತಿ ಅವರು ತಲವಾರು ಹಿಡಿದಿದ್ದಾರೆ. ಪ್ಲಾಸ್ಟಿಕ್‌ನಲ್ಲಿ ಮಾಡಿದ ಆಯುಧ ಹಿಡಿದಿದ್ದಾರೆ. ಅದರಿಂದ ಯಾವುದೇ ಅನಾಹುತವಾಗಿಲ್ಲ. ಅವರು ಕಲ್ಲು, ಕೋಲು, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆಯೇ ಹೊರತು ಎಲ್ಲೂ ತಲ್ವಾರ್, ಖಡ್ಗದಿಂದ ಯಾರ ಮೇಲೂ ದಾಳಿಯಾಗಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.
ಕೆಲವರು ಹಿರಿಯರ ಮಾತು ಕೇಳುವುದಿಲ್ಲ
ಸಮಾಜದ ಹಿರಿಯರು ಯುವಜನರಿಗೆ ಬುದ್ಧಿ ಹೇಳಬಹುದಲ್ವಾ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ʻʻಕೆಲವರು ತಲೆಹರಟೆ ಇರುತ್ತಾರೆ. ನೀವು ಹೇಳ್ದಂಗೆ ಕೇಳ್ತೀವಿ ಅಂತಾರೆ. ಆದರೆ, ಅಲ್ಲಿ ಹೋದ ಮೇಲೆ ತಲೆಹರಟೆ ಮಾಡುತ್ತಾರೆ. ಅವರ ಬಾಯಿಗೆ ಬೀಗ ಹಾಕಲು ಆಗುತ್ತಾʼʼ ಎಂದು ಕೇಳಿದರು ಮಧು ಬಂಗಾರಪ್ಪ.
ಶಿವಮೊಗ್ಗದಲ್ಲಿ ಈ ಘಟನೆ ಆಗಬಾರದಿತ್ತು. ಗಾಯಾಳುಗಳಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ಮಾಡುತ್ತೇನೆ. ಕೊಡುವುದಾದರೆ ಸರ್ಕಾರದಿಂದ ಕೊಡಿಸುತ್ತೇನೆ ಎಂದು ಹೇಳಿದ ಮಧು ಬಂಗಾರಪ್ಪ, ಪೊಲೀಸರು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಶಿವಮೊಗ್ಗ ಶಾಂತಿಯಿಂದ ಇದೆ, ಜನ ಸಹಕರಿಸುತ್ತಿದ್ದಾರೆ. ಕಾನೂನು ಹದ್ದುಬಸ್ತು ಮಾಡಬೇಕು. ಅಧಿಕಾರಿಗಳು ಆ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ಬಗ್ಗೆ ಐ ಯಾಮ್ ಹ್ಯಾಪಿ ಎಂದು ಮಧು ಬಂಗಾರಪ್ಪ ನುಡಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, ೧೧ಗಣಪತಿ ಹಬ್ಬ ಚೆನ್ನಾಗಿ, ಅದ್ಧೂರಿಯಾಗಿ ಆಯ್ತು. ಈದ್ ಮೀಲಾದ್ ಮೆರವಣಿಗೆ ಕೂಡ ಚೆನ್ನಾಗಿ ಆಯ್ತು. ಆದರೆ, ಕೊನೆಯಲ್ಲಿ ಕೆಲವರಿಂದ ಅಶಾಂತಿ ಉಂಟಾಗಿದೆ. ಗಲಭೆ ಹಿನ್ನೆಲೆಯಲ್ಲಿ 24 ಎಫ್ಐಆರ್ ಆಗಿದೆ, 60 ಮಂದಿಯನ್ನು ಬಂಧಿಸಲಾಗಿದೆ. ಯಾರಿಗೂ ಮೇಜರ್ ಹಲ್ಲೆ ಆಗಿಲ್ಲ. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆʼʼ ಎಂದು ವಿವರ ನೀಡಿದರು.
ಇದನ್ನೂ ಓದಿ: Shivamogga Violence : ಈದ್ ಮೆರವಣಿಗೆಯಲ್ಲಿ ಝಳಪಿಸಿದ ತಲ್ವಾರ್; ಹಿಂದುಗಳಿಗೆ ರಕ್ಷಣೆ ಇಲ್ಲವೇ ಎಂದ ಜನ
ನಾನು ಕಾನೂನಿನ ಪರ ನಿಲ್ಲುವವನು
ʻʻನಾನು ಕಾನೂನಿನ ಪರ ನಿಲ್ಲುವವನು, ಯಾರ‍್ಯಾರು ಶುರು ಮಾಡಿದ್ದಾರೆ, ಭಾಗಿವಾಗಿದ್ದಾರೆ, ಯಾರನ್ನೂ ಬಿಡುವುದಿಲ್ಲ. ಈಗಾಗಲೇ ಅಧಿಕಾರಿಗಳಿಗೆ ಹೇಳಿದ್ದೇನೆ. ಜನರಿಗೂ ಶಾಂತಿ ಕಾಪಾಡಲು ಮನವಿ ಮಾಡುತ್ತೇನೆʼʼ ಎಂದು ಮಧು ಹೇಳಿದರು.
ʻʻಹೊರಗಿನವರು ಬಂದಿದ್ದಾರೆ, ಅವರೇ ಗಲಭೆ ಮಾಡಿದ್ದು ಎಂಬ ಆರೋಪ ಇದೆ. ಆರೋಪ ಸಹಜ, ಆರೋಪಕ್ಕೆ ಉತ್ತರಿಸಲು ಬಂದಿಲ್ಲʼʼ ಎಂದು ಹೇಳಿದ ಮಧು ಬಂಗಾರಪ್ಪ ಅವರು, ಮಾಧ್ಯಮದವರು ಅಂತೆ-ಕತೆ ಬಿಡಿ, ನಿಮಗೆ ಏನಾದರೂ ಮಾಹಿತಿ ಸಿಕ್ಕರೆ ಪೊಲೀಸರಿಗೆ ಕೊಡಿ ಎಂದು ವಿನಂತಿ ಮಾಡಿದರು.