Site icon Vistara News

Shivamogga Violence : ಎನ್‌ಕೌಂಟರ್‌ ಸುದ್ದಿ ಸುಳ್ಳು, ಮುಸ್ಲಿಮರು ಬಳಸಿದ್ದು ಆಟಿಕೆ ತಲವಾರ್‌ ಎಂದ ಎಸ್ಪಿ

Shivamogga encounter Fake News

ಶಿವಮೊಗ್ಗ: ಶಿವಮೊಗ್ಗದಲ್ಲಿ ಪೊಲೀಸರು ಎನ್‌ಕೌಂಟರ್‌ (Police Encounter) ಮಾಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು (Fake News) ಹರಡಿಸಲಾಗುತ್ತಿದೆ. ನಮ್ಮಲ್ಲಿ ಯಾವುದೇ ಎನ್‌ಕೌಂಟರ್‌ ನಡೆದಿಲ್ಲ ಎಂದು ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌ (Shivamogga SP Mithun Kumar) ಸ್ಪಷ್ಟಪಡಿಸಿದ್ದಾರೆ. ಈ ರೀತಿಯಾದ ಸುಳ್ಳು ಸುದ್ದಿಯನ್ನು ಫಾರ್ವರ್ಡ್‌ ಮಾಡಿ ಸಮಾಜದಲ್ಲಿ ಅಶಾಂತಿ ಹರಡಿಸುವ ಪ್ರಯತ್ನ ನಡೆಸಿದ ಅಜ್ಗರ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು. ಇದೇ ವೇಳೆ ಮುಸ್ಲಿಮರ ಮೆರವಣಿಗೆಯಲ್ಲಿ (Muslims Procession) ಬಳಸಿದ್ದು ಆಟಿಕೆಯ ತಲವಾರ್‌ (Toy Talwar) ಎಂದು ಅವರು ಸ್ಪಷ್ಟಪಡಿಸಿದರು.

ಶಿವಮೊಗ್ಗ ಪೊಲಿಸರು ಒಬ್ಬ ಆರೋಪಿಯನ್ನು ಎನ್‌ಕೌಂಟರ್‌ ಮಾಡಿದ್ದಾರೆ ಎಂದು ಹೇಳುವ ಚಿತ್ರ, ವರದಿ, ವಿಡಿಯೊಗಳು ಬೆಳಗ್ಗಿನಿಂದ ಹರಿದಾಡುತ್ತಿದ್ದವು. ಇದು ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ಸದ್ದು ಮಾಡಿತ್ತು. ಕೂಡಲೇ ಎಚ್ಚೆತ್ತುಕೊಂಡ ಶಿವಮೊಗ್ಗ ಪೊಲೀಸರು ಶಿವಮೊಗ್ಗದಲ್ಲಿ ಈ ಫೋಟೊ ಮತ್ತು ಸುದ್ದಿ ಹರಡಲು ಯಾರು ಕಾರಣ ಎಂದು ಹುಡುಕಾಡಿದರು. ಕೊನೆಗೆ ಈ ಚಿತ್ರ ಮತ್ತು ವರದಿಯನ್ನು ಫಾರ್ವರ್ಡ್‌ ಮಾಡಿದ್ದು ಅಜ್ಗರ್‌ ಎಂಬಾತ ಎಂದು ತಿಳಿದುಬಂತು. ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇಷ್ಟು ಮಾತ್ರವಲ್ಲ, ಯಾರೆಲ್ಲ ಈ ಸುಳ್ಳು ಸುದ್ದಿಯನ್ನು ಫಾರ್ವರ್ಡ್‌ ಮಾಡಿದ್ದಾರೋ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಸ್‌ಪಿ ಮಿಥುನ್‌ ಕುಮಾರ್‌ ತಿಳಿಸಿದರು. ಫಾರ್ವರ್ಡ್ ಆಗಿದ್ದ ವಿಡಿಯೋ ಡಿಲಿಟ್ ಮಾಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಯಾರೂ ವದಂತಿಗಳಿಗೆ ಕಿವಿಗೊಡಬೇಡಿ ಎಂದ ಎಸ್‌ಪಿ

ʻʻಶಿವಮೊಗ್ಗದಲ್ಲಿ ಈಗ ಪರಿಸ್ಥಿತಿ ಶಾಂತವಾಗಿದೆ. ಸಹಜ ಸ್ಥಿತಿ ಮರುಕಳಿಸಿದೆ. ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ 24 ಕೇಸು ದಾಖಲಾಗಿದೆ. ಒಟ್ಟು 60 ಜನರನ್ನು ಬಂಧಿಸಲಾಗಿದೆ. ಎಲ್ಲೆಡೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಯಾರೂ ಕೂಡ ವದಂತಿಗೆ ಕಿವಿಗೊಡಬೇಡಿ. ಸಾರ್ವಜನಿಕರು ಸುಳ್ಳು ಸುದ್ದಿ ನಂಬಬೇಡಿʼʼ ಎಂದು ವಿನಂತಿಸಿರುವ ಎಸ್‌ಪಿ ಮಿಥುನ್‌ ಕುಮಾರ್‌ ಅವರು, ಇನ್ನೂ ಹಲವರನ್ನು ಬಂಧಿಸಲಿದ್ದೇವೆ. ಘಟನೆಗೆ ಕಾರಣರಾದ ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ಹೊರಗಿನಿಂದ ಬಂದವರ ತನಿಖೆ ಮಾಡುತ್ತಿದ್ದೇವೆ. ಎಲ್ಲಾ ಆಯಾಮಗಳಲ್ಲಿ ಸಾಕ್ಷಿಗಳು ನಮಗೆ ಸಿಕ್ಕಿವೆ. ಯಾರು ಕಾರಣಕರ್ತರಿದ್ದಾರೆ ಅವರ ಬಗ್ಗೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಯಾರು ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಮೆರವಣಿಗೆಯಲ್ಲಿ ಮಚ್ಚು, ಲಾಂಗು ತೋರಿಸಿದವರ ಬಗ್ಗೆ ತನಿಖೆ ನಡೆಯುತ್ತಿದೆʼʼ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Shivamogga Violence : ಶಿವಮೊಗ್ಗ ಗಲಭೆ ವೇಳೆ ಕಾಣಿಸಿಕೊಂಡ ಹೊರ ಜಿಲ್ಲೆ ಕಾರುಗಳ ರಹಸ್ಯ ಬಯಲು

ಮೆರವಣಿಗೆಯಲ್ಲಿ ಜಳಪಿಸಿದ ಕತ್ತಿ ಒರಿಜಿನಲ್‌ ಅಲ್ಲ, ಆಟಿಕೆ

ಮಚ್ಚು, ಲಾಂಗ್‌ ತೋರಿಸಿದವರ ವಿರುದ್ಧ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗುವುದು, ಮೆರವಣಿಗೆಯಲ್ಲಿ ಕತ್ತಿಗಳನ್ನು ಝಳಪಿಸಿರುವುದಕ್ಕೆ ಆಕ್ಷೇಪ ಮಾಡಲಾಗಿದೆ. ಆದರೆ, ಕೆಲವು ಕಡೆ ಆಟಿಕೆ ಕತ್ತಿಗಳನ್ನು ತರಲಾಗಿದೆ. ಇದು ಒರಿಜಿನಲ್ ಕತ್ತಿ ಅಲ್ಲ ಎಂಬುದು ತಿಳಿದು ಬಂದಿದೆ. ಆಕಸ್ಮಾತ್ ಒರಿಜಿನಲ್ ಕತ್ತಿ ಎಂದು ಕಂಡು ಬಂದರೆ, ಅಂತಹ ವಿಡಿಯೋ ನನಗೆ ಕಳಿಸಿ. ನಾನು ಪರಿಶೀಲನೆ ನಡೆಸಿ ತಿಳಿಸುತ್ತೇನೆ. ಆದರೆ, ಯಾವುದೇ ಸುಳ್ಳು ಸುದ್ದಿ ವಿಡಿಯೋಗಳನ್ನು ನಂಬಬೇಡಿ ಎಂದು ಅವರು ಹೇಳಿದರು.

ʻʻರಾಗಿಗುಡ್ಡದಲ್ಲಿ ಮೆರವಣಿಗೆ ದಿನ ಎರಡು ಮಾರುತಿ ವ್ಯಾನ್ ಬಂದಿರುವ ಬಗ್ಗೆ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಅವರು ನ್ಯಾಮತಿಯಿಂದ ಮೆರವಣಿಗೆ ನೋಡಲು ಬಂದಿದ್ದವರಾಗಿದ್ದರು. ಅವರ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ ಜರುಗಿಸಲಾಗುವುದುʼʼ ಎಂದು ಕೂಡಾ ಎಚ್ಚರಿಕೆ ನೀಡಿದರು.

Exit mobile version