Site icon Vistara News

Shivamogga Violence : ಶಿವಮೊಗ್ಗ ಗಲಭೆ ವೇಳೆ ಕಾಣಿಸಿಕೊಂಡ ಹೊರ ಜಿಲ್ಲೆ ಕಾರುಗಳ ರಹಸ್ಯ ಬಯಲು

Shivamogga galabhe Car

ಶಿವಮೊಗ್ಗ: ಭಾನುವಾರ ಈದ್‌ ಮಿಲಾದ್‌ ಮೆರವಣಿಗೆ (Eid milad Procession) ಸಂದರ್ಭ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆಯ (Shivamogga Violence) ವೇಳೆ ಹೊರ ಜಿಲ್ಲೆಯ ಎರಡು ಕಾರುಗಳು ಕಾಣಿಸಿಕೊಂಡಿದ್ದವು. ಈ ಕಾರಿನಲ್ಲಿ ಬಂದವರೇ ಗಲಭೆಯ ಕಿಡಿ ಹಚ್ಚಿರಬಹುದೇ ಎಂಬ ಸಂಶಯ ನೆಲೆಗೊಂಡಿತ್ತು. ಇದೀಗ ಶಿವಮೊಗ್ಗ ಪೊಲೀಸರು (Shivamogga police) ಈ ಕಾರುಗಳ ಹಿನ್ನೆಲೆಯನ್ನು ಪತ್ತೆ ಹಚ್ಚಿ ರಹಸ್ಯ ಭೇದಿಸಿದ್ದಾರೆ (Omni cars Back ground revealed).

ಶಿವಮೊಗ್ಗದಲ್ಲಿ ಭಾನುವಾರ ಈದ್‌ ಮೆರವಣಿಗೆ ನಡೆಯುತ್ತಿದ್ದ ವೇಳೆ ಒಮ್ಮಿಂದೊಮ್ಮೆಗೆ ಕಲ್ಲು ತೂರಾಟವಾಗಿದೆ ಎಂಬ ಸುದ್ದಿ ಹರಡಿ ಮೆರವಣಿಗೆಯಲ್ಲಿ ಇದ್ದ ಕೆಲವರು ಹಿಂಸಾಚಾರಕ್ಕೆ ಇಳಿದಿದ್ದರು. ಹಲವಾರು ಮನೆಗಳಿಗೆ ಕಲ್ಲು ತೂರಾಟ ನಡೆದಿತ್ತು, ಮನೆಗಳಿಗೆ ಹಾನಿ ಮಾಡುವ ಪ್ರಯತ್ನವೂ ನಡೆದಿತ್ತು. ಒಂದು ಹಂತದಲ್ಲಿ ಗಲಭೆ ನಿಯಂತ್ರಿಸಲು ಬಂದ ಪೊಲೀಸರ ಮೇಲೆ ಕೂಡಾ ಮುಸ್ಲಿಂ ಯುವಕರು ಕಲ್ಲು ತೂರಿದ್ದರು. ಆಗ ಪೊಲೀಸರು ಲಾಠಿ ಚಾರ್ಜ್‌ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ಇದಾದ ಬಳಿಕ ಸಿಸಿ ಟಿವಿ ಫೂಟೇಜ್‌ಗಳನ್ನು ಗಮನಿಸಿದಾಗ ಹೊರ ಜಿಲ್ಲೆಯ ನೋಂದಣಿ ಸಂಖ್ಯೆ ಹೊಂದಿದ್ದ ಎರಡು ಕಾರುಗಳು ಈ ಸಂದರ್ಭದಲ್ಲಿ ಕಂಡುಬಂದಿದ್ದವು.

ಇದನ್ನು ಉಲ್ಲೇಖಿಸಿ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಅವರು ಹೊರ ಜಿಲ್ಲೆಯ ವಾಹನಗಳು ಹೇಗೆ ಬಂದವು? ಯಾಕೆ ಬಂದವು? ಅವರೇ ಈ ಗಲಭೆಗೆ ಕುಮ್ಮಕ್ಕು ಕೊಟ್ಟಿದ್ದಾರೆ. ಇದರಲ್ಲಿ ಹೊರ ಜಿಲ್ಲೆಯ ಶಕ್ತಿಗಳ ಕೈವಾಡ ಇದೆ ಎಂದು ಆರೋಪಿಸಿದ್ದರು. ಪೊಲೀಸರು ಕೂಡಾ ಹೊರ ಜಿಲ್ಲೆಯ ವಾಹನದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿ ತನಿಖೆ ಮಾಡಿದ್ದರು. ಈಗ ಅದರ ರಹಸ್ಯ ಬಯಲಾಗಿದೆ.

ಗಲಭೆಕೋರರಲ್ಲ, ಹಿಂದು-ಮುಸ್ಲಿಂ ಇಬ್ಬರೂ ಇದ್ದರು

ಸಿಸಿಟಿವಿಯಲ್ಲಿ ಸೆರೆಯಾದ ಓಮ್ನಿ ಕಾರುಗಲ ಬಗ್ಗೆ ಎಸ್ಪಿ ಜಿಕೆ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದು, ಅದರಲ್ಲಿದ್ದವರು ಗಲಭೆಕೋರರಲ್ಲ ಎಂದಿದ್ದಾರೆ.

ʻʻಎರಡು ಓಮಿನಿ ಕಾರಿನಲ್ಲಿ ಬಂದಿದ್ದ ಯುವಕರು ಮೆರವಣಿಗೆ ನೋಡಲು ಬಂದಿದ್ದರು. ಬಂದವರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನವರು. ಕಾರಿನಲ್ಲಿ ಬಂದವರಲ್ಲಿ ಎರಡೂ ಕೋಮಿನವರಿದ್ದರು. ನಗರದಲ್ಲಿ ಮೆರವಣಿಗೆ ವೀಕ್ಷಿಸಿ ರಾಗಿಗುಡ್ಡಕ್ಕೆ ಬಂದಿದ್ದರು. ಮೆರವಣಿಗೆ ಸಂದರ್ಭ ಗಲಾಟೆ ಆರಂಭವಾಗುತ್ತಿದ್ದಂತೆ ವಾಪಸ್ಸಾಗಿದ್ದಾರೆʼʼ ಎಂದು ವಿವರಣೆ ನೀಡಿದ್ದಾರೆ. ಅದರೊಂದಿಗೆ ಗಲಭೆಗೆ ಹೊರಗಿನ ಪ್ರಚೋದನೆ ಎಂಬ ಒಂದು ವಾದ ತಣ್ಣಗಾಗಬಹುದಾಗಿದೆ.

ಸೆಕ್ಷನ್‌ ಇದ್ದರೂ ವ್ಯಾಪಾರ ವಹಿವಾಟಿಗೆ ತೊಂದರೆ ಇಲ್ಲ

ರಾಗಿಗುಡ್ಡದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಸೆಕ್ಷನ್‌ 144 ಜಾರಿಯಲ್ಲಿ ಇದೆಯಾದರೂ ವ್ಯಾಪಾರ ವಹಿವಾಟಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಎಸ್‌ಪಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ 24 ಮಂದಿಯ ಮೇಲೆ ಎಫ್ಐಆರ್‌ ದಾಖಲಾಗಿದೆ. 60 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ, 8 ಜನರು ತಲೆಮರೆಸಿಕೊಂಡಿದ್ದಾರೆ ಎಂದು ಎಸ್‌ಪಿ ವಿವರಿಸಿದರು. ಘಟನೆಯ ವಿಡಿಯೋಗಳನ್ನು ಗಮನಿಸಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಎಲ್ಲ ಆರೋಪಿಗಳನ್ನು ಹಿಡಿಯುತ್ತೇವೆ. ಯಾರು ಭಯಪಡುವ ಅವಶ್ಯಕತೆ ಇಲ್ಲ, ಎಲ್ಲ ಕಡೆ ಭದ್ರತೆ ನೀಡಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಶಿವಮೊಗ್ಗ ನಗರದಲ್ಲಿ ಎಲ್ಲೂ ಕೂಡಾ ಅಂಗಡಿ ಬಂದ್ ಮಾಡಿಸಿಲ್ಲ. ಎಂದಿನಂತೆ ವ್ಯಾಪಾರ ವಹಿವಾಟು ಮಾಡಬಹುದು ಎಂದು ಎಸ್‌ಪಿ ನುಡಿದರು.

ಎಲ್ಲ ವಾರ್ಡ್‌ಗಳ ಶಾಂತಿ ಕದಡಿಲ್ಲ ಎಂದ ಆಯನೂರು

ರಾಗಿಗುಡ್ಡದಲ್ಲಿ ನಡೆದ ಗಲಭೆ ಒಂದು ವಾರ್ಡ್‌ಗೆ ಸೀಮಿತವಾಗಿದೆ. ಉಳಿದಂತೆ ಇಡೀ ಶಿವಮೊಗ್ಗದ ಎಲ್ಲ 35 ವಾರ್ಡ್‌ಗಳಲ್ಲಿ ಶಾಂತಿ ಇದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್‌ ಹೇಳಿದ್ದಾರೆ.

ರಾಗಿಗುಡ್ಡದಲ್ಲಿ ಘಟನೆ ನಡೆದಿದ್ದರೂ ಶಿವಮೊಗ್ಗದ ಎಎ ಸರ್ಕಲ್ ನಲ್ಲಿ ಮಧ್ಯರಾತ್ರಿವರೆಗೂ ಕಾರ್ಯಕ್ರಮ ನಡೆದಿದೆ. ತಮ್ಮ ಪಾಡಿಗೆ ಹಬ್ಬ, ಮೆರವಣಿಗೆ ಆಚರಿಸಲಿ ಎಂದು ಪೊಲೀಸರು ಬಿಟ್ಟಿದ್ದರು ಎಂದು ವಿವರಿಸಿದರು.

ಕಟೌಟ್ ಗಳು, ಬ್ಯಾನರ್ ಗಳು ವಿವಾದಾತ್ಮಕವಿದ್ದರೂ ಅದನ್ನು ಯಾಕೆ ಪೊಲೀಸರು ತೆಗೆಸಿಲ್ಲ ಎಂಬುದು ಪ್ರಶ್ನೆಯಾಗಿದೆ. ಬಹುಷಃ ಆ ಸಮಯದಲ್ಲಿ ತೆಗೆಸಿದ್ದರೆ ಉದ್ರಿಕ್ತರಾಗುತ್ತಾರೆಂದು ಪೊಲೀಸರು ಭಾವಿಸಿರಬಹುದು, ಇದಕ್ಕೆ ಪೊಲೀಸರೇ ಉತ್ತರಿಸಬೇಕು ಎಂದು ಹೇಳಿದರು.

Exit mobile version