Site icon Vistara News

Shivamogga violence : ಶಿವಮೊಗ್ಗ ಗಲಭೆಯಲ್ಲಿ ಮೊದಲ ಕಲ್ಲು ಬಿದ್ದಿದ್ದು ಎಲ್ಲಿಂದ: FIRಗಳಲ್ಲಿ ಏನಿದೆ?

Shivamogga Violence

ಶಿವಮೊಗ್ಗ: ಕಳೆದ ಭಾನುವಾರ ಈದ್‌ ಮಿಲಾದ್‌ ಮೆರವಣಿಗೆ (Eid Milad process) ವೇಳೆ ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಡೆದ ಗಲಭೆ (Shivamogga violence) ಸಂದರ್ಭದಲ್ಲಿ ಮೊದಲ ಕಲ್ಲು ತೂರಾಟ (Stone pelting) ಯಾರಿಂದ ಆಯಿತು ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಮುಸ್ಲಿಮರ ಮೆರವಣಿಗೆ (Muslims Procession) ಮೇಲೆ ಕಲ್ಲು ತೂರಾಟ ನಡೆದ ಬಳಿಕ ಹಿಂಸೆ ಭುಗಿಲೆದ್ದಿತ್ತು ಎಂಬುದು ಒಂದು ವಾದವಾದರೆ ಮೆರವಣಿಗೆಯಲ್ಲಿದ್ದವರೇ ಮೊದಲು ಕಲ್ಲು ತೂರಿದ್ದು ಎಂಬ ವಾದ ಇನ್ನೊಂದೆಡೆ. ಈ ನಡುವೆ ಶಿವಮೊಗ್ಗ ಪೊಲೀಸರು (Shivamogga police) ದಾಖಲಿಸಿಕೊಂಡಿರುವ 24 ಎಫ್‌ಐಆರ್‌ಗಳಲ್ಲಿ (24 FIRs Registered) ಏನಿದೆ ಎಂಬುದು ಕುತೂಹಲಕಾರಿ ವಿಷಯ ಮತ್ತು ಗಲಭೆಯ ಆರಂಭ ಎಲ್ಲಿಂದ ಎಂಬುದರ ಸೂಚನೆ ಕಂಡುಬರುತ್ತಿದೆ.

ಗಲಭೆಯ ಸಂದರ್ಭದ ವಿಡಿಯೊಗಳನ್ನು ನೋಡಿದರೆ ಮುಸ್ಲಿಂ ಯುವಕರ ಒಂದು ತಂಡ ಮೆರವಣಿಗೆಯ ನಡುವೆ ಓಡುತ್ತಾ ನಮ್ಮ ಮೇಲೆ ಕಲ್ಲು ತೂರಲಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತದೆ. ಇದರಿಂದ ಪ್ರಚೋದಿತರಾದ ಇತರ ಯುವಕರು ಹಿಂಸಾಚಾರಕ್ಕೆ ಇಳಿಯುತ್ತಾರೆ. ಆದರೆ, ನಿಜಕ್ಕೂ ಮೊದಲು ಮೆರವಣಿಗೆ ಮೇಲೆ ಕಲ್ಲು ಬಿದ್ದಿತ್ತಾ ಎನ್ನುವುದರ ಬಗ್ಗೆ ಯಾವ ಸ್ಪಷ್ಟತೆಯೂ ಇಲ್ಲ. ಯುವಕರ ತಂಡ ಗಲಭೆ ಸೃಷ್ಟಿ ಮಾಡುವುದಕ್ಕಾಗಿಯೇ ಈ ರೀತಿ ಬೊಬ್ಬೆ ಹೊಡೆದುಕೊಂಡು ಓಡಿತಾ ಎಂಬ ಸಂಶಯ ಕಾಡಿದೆ.

ಶಿವಮೊಗ್ಗ ಗಲಭೆಗೆ ಸಂಬಂಧಪಟ್ಟು ಒಟ್ಟು 24 ಎಫ್‌ಐಆರ್‌ಗಳು ದಾಖಲಾಗಿವೆ. ಇದರಲ್ಲಿ 20 ಸಾರ್ವಜನಿಕರಿಂದ ದಾಖಲಾಗಿದ್ದು, ಉಳಿದ ನಾಲ್ಕು ಸ್ಥಳದಲ್ಲಿದ್ದ ಪೊಲೀಸರಿಂದ ದಾಖಲಾಗಿದ್ದು. ಪೊಲೀಸರು ದಾಖಲಿಸಿದ ನಾಲ್ಕು ಎಫ್‌ಐಆರ್‌ಗಳಲ್ಲಿಯೂ ಮೆರವಣಿಗೆ ನಡೆಸುತ್ತಿದ್ದವರೇ ಮೆರವಣಿಗೆ ನೋಡುತ್ತಿದ್ದ ಹಿಂದುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಒಟ್ಟಾರೆಯಾಗಿ ಒಂದು ಎಫ್‌ಐಆರ್‌ನಲ್ಲಿ ಮಾತ್ರ ಹಿಂದೂಗಳು ಮತ್ತು ಮುಸ್ಲಿಂ ಯುವಕರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎಂಬುದನ್ನು ಉಲ್ಲೇಖಿಸಲಾಗಿದೆ. ಆದರೆ ಹಿಂದುಗಳು ಮೊದಲು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿಲ್ಲ. ಹೀಗಾಗಿ ಎಲ್ಲ ಎಫ್‌ಐಆರ್‌ಗಳಲ್ಲೂ ಕಲ್ಲು ತೂರಾಟ ಮೊದಲು ನಡೆದಿದ್ದು ಮೆರವಣಿಗೆಯಲ್ಲಿದ್ದವರಿಂದಲೇ ಎಂಬುದನ್ನು ಉಲ್ಲೇಖಿಸಲಾಗಿದೆ.

ಈ ಎಫ್ಐಆರ್‌ಗಳ ಆಧಾರದಲ್ಲಿ ಐಪಿಸಿಯ 143 144 147 148 504 5 0 6 324 332 353 307 427 149 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಗಲಭೆಯಲ್ಲಿ ಭಾಗಿಯಾದ 60 ಜನರನ್ನು ಬಂಧಿಸಿದ ಪೊಲೀಸರು ಅವರನ್ನು ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಜೈಲಿಗೆ ರವಾನೆ ಮಾಡಿದ್ದಾರೆ.

Shivamogga Fake Video

ಮೂರು ದಿನಗಳಿಂದ ಸೆಕ್ಷನ್;‌ ನಲುಗಿದ ರಾಗಿಗುಡ್ಡ ನಿವಾಸಿಗಳು

ಶಿವಮೊಗ್ಗದ ರಾಗಿಗುಡ್ಡದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಹೇರಿ ಇಂದಿಗೆ ಮೂರು ದಿನಗಳಾಗಿವೆ. ಈಗಾಗಲೇ, ರಾಗಿಗುಡ್ಡದ ನಿವಾಸಿಗಳು ನಲುಗಿ ಹೋಗಿದ್ದಾರೆ. ಕೂಲಿ ಕೆಲಸ ಮಾಡುವವರು, ದಿನನಿತ್ಯ ದುಡಿದು ತಿನ್ನೋರು. ತರಕಾರಿ ವ್ಯಾಪಾರಿಗಳು, ಹೀಗೆ ಅಕ್ಷರಶಃ ರಾಗಿಗುಡ್ಡದ ನಿವಾಸಿಗಳು ಮನೆಯಿಂದ ಹೊರಬರಲಾರದೇ ನಲುಗಿ ಹೋಗಿದ್ದಾರೆ. ಇತ್ತ ರಾಗಿಗುಡ್ಡ ಸೇರಿದಂತೆ ಶಿವಮೊಗ್ಗ ಶಾಂತವಾಗಿದ್ದರೂ ಕೂಡ, ರಾಗಿಗುಡ್ಡದ ನಿವಾಸಿಗಳಿಗೆ ಸಂಚರಿಸಲು ನಿರ್ಬಂಧ ವಿಧಿಸಲಾಗಿದೆ.

ಪೊಲೀಸರು ಮನೆಯಿಂದ ಯಾರನ್ನೂ ಕೂಡ ಹೊರಗೆ ಬಿಡದಂತೆ, ಮನೆಯಲ್ಲಿಯೇ ಲಾಕ್ ಮಾಡಿದ್ದಾರೆ. ಗಲಭೆಯಲ್ಲಿ ಭಾಗಿಯಾಗಿದ್ದವರನ್ನು ಬಂಧಿಸುವ ಉದ್ದೇಶದಿಂದ ಹಾಗೂ ಪರಿಸ್ಥಿತಿ ತಹಬದಿಗೆ ತರುವ ನಿಟ್ಟಿನಲ್ಲಿ, ಅಘೋಷಿತ ಕರ್ಫ್ಯೂ ನಿಷೇಧಾಜ್ಞೆ ಹೇರಲಾಗಿದೆ.

ಬುಧವಾರ ರಾಗಿಗುಡ್ಡ ಬಡಾವಣೆ ಕೊಂಚ ಸುಧಾರಿಸಿಕೊಂಡಂತೆ ಕಂಡುಬಂದಿದ್ದು, ಈಗ ಸಹಜ ಸ್ಥಿತಿಯತ್ತ ಸಾಗಿದೆ. ಸೆಕ್ಷನ್ 144 ನಿಷೇಧಾಜ್ಞೆ ಕೊಂಚ ಸಡಿಲಿಸಿದ ಪೊಲೀಸರು, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದಾರೆ. ಶಾಲಾ-ಕಾಲೇಜಿಗೆ ತೆರಳಲು ಬಸ್ ಹಾಗೂ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಕೆಲಸಕ್ಕೆಂದು ಹೊರಗೆ ತೆರಳುವವರಿಗೂ ಕಲ್ಪಿಸಿದ ಅವಕಾಶ ನೀಡಲಾಗಿದ್ದು, ಸುಖಾಸುಮ್ಮನೆ ಸಂಚರಿಸುವವರಿಗೆ ಬ್ರೇಕ್ ಹಾಕಲಾಗಿದೆ.

ಹಿಂಜಾವೇ ನಾಯಕರ ಆಗಮನ, ನಾಳೆ ಸತ್ಯಶೋಧನಾ ತಂಡ

ಬುಧವಾರ ಜಗದೀಶ್‌ ಕಾರಂತ ನೇತೃತ್ವದ ಹಿಂದು ಜಾಗರಣ ವೇದಿಕೆ ಟೀಮ್‌ ರಾಗಿಗುಡ್ಡ ಪ್ರದೇಶಕ್ಕೆ ಭೇಟಿ ನೀಡಿತು. ಇನ್ನು ಗುರುವಾರ (ಆಗಸ್ಟ್‌ 5) ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ಆಗಮಿಸಲಿದೆ.

ಕೇಸರಿ ಧ್ವಜ ಹಿಡಿದು ಕಲ್ಲು ಎಸೆಯುವ ಫೇಕ್ ವಿಡಿಯೋ ವೈರಲ್!

Shivamogga Fake Video

ಈ ನಡುವೆ ರಾಗಿಗುಡ್ಡದಲ್ಲಿ ಹಿಂದೂಗಳೇ ಕಲ್ಲು ಹೊಡೆದಿದ್ದಾರೆ ಎಂದು ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದು ಅಶಾಂತಿ ಸೃಷ್ಟಿಸಲು ಕಿಡಿಗೇಡಿಗಳು ಹರಡಿರುವ ವಿಡಿಯೊ. ಇದು ರಾಗಿಗುಡ್ಡದ ವಿಡಿಯೋ ಅಲ್ಲವೆಂದು ಶಿವಮೊಗ್ಗ ಎಸ್ಪಿ ಜಿ ಕೆ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Shivamogga Violence : ವೇಷ ಮರೆಸಿ ಗಲಭೆ ಹೇಳಿಕೆ; ರಾಮಲಿಂಗಾ ರೆಡ್ಡಿ ಮೇಲೆ ಮುಗಿಬಿದ್ದ ಬಿಜೆಪಿ

ಆಂತರಿಕ ಭದ್ರತಾ ವಿಭಾಗದಿಂದ ತನಿಖೆ

ರಾಗಿಗುಡ್ಡಕ್ಕೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಅವರು ಪ್ರಮುಖವಾಗಿ ಘಟನೆಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ಡಿವೈಎಸ್‌ಪಿ ನಾಗೇಶ್ ಐತಾಳ್ ನೇತೃತ್ವದ ತಂಡ ಭೇಟಿ ನೀಡಿದೆ. ಕಲ್ಲು ತೂರಾಟದಿಂದ ಹಾನಿಗೀಡಾದ ಮನೆಗಳಿಗೆ ಭೇಟಿ ನೀಡಿರುವ ಟೀಮ್‌, ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದೆ.

Exit mobile version