ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕು ತಡಸ ಬಳಿಯ ದಡಮಘಟ್ಟ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಯಿಂದ ನಾಲ್ಕೂವರೆ ವರ್ಷದ ಬಾಲಕ ಮೃತಪಟ್ಟಿದ್ದಾನೆ. ಬುಧವಾರ ಸಂಜೆ ಮನೆಯಿಂದ ಆಟವಾಡಲು ಹೊರಬಂದಾಗ ಏಳೆಂಟು ನಾಯಿಗಳು ದಾಳಿ (Stray Dogs Attack) ನಡೆಸಿದ್ದರಿಂದ ಬಾಲಕ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾನೆ.
ನಸ್ರುಲ್ಲಾ ಖಾನ್ ಎಂಬುವವರ ಪುತ್ರ ಸೈಯದ್ ಮದಿನಿ ಮೃತ ಬಾಲಕ. ಮಗುವಿನ ತಂದೆ ಜಮೀನಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ತಂದೆಯನ್ನು ಮಗು ಹಿಂಬಾಲಿಸಿಕೊಂಡು ಹೋಗುವಾಗ ಸುಮಾರು 7-8 ಬೀದಿ ನಾಯಿಗಳು ಮಗು ಮೇಲೆ ದಾಳಿ ಮಾಡಿವೆ. ಏಕಾಏಕಿ ನಾಯಿಗಳು ಮೇಲೆರಗಿ ತಲೆಯನ್ನು ಸೀಳಿ, ಎಳೆದಾಡಿದ್ದರಿಂದ ಗಂಭೀರವಾಗಿ ಗಾಯಗೊಂಡ ಬಾಲಕನಿಗೆ ಭದ್ರಾವತಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡುತ್ತಿದ್ದಾಗ ಮಾರ್ಗಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ.
ಇದನ್ನೂ ಓದಿ | Accident Case | ಕಾರವಾರದಲ್ಲಿ ಬೈಕ್‌ಗೆ ಟೆಂಪೋ ಡಿಕ್ಕಿ; ಗಂಭೀರ ಗಾಯಗೊಂಡ ಬೈಕ್ ಸವಾರ ಮಾರ್ಗಮಧ್ಯೆ ಸಾವು
ಘಟನೆ ವೇಳೆ ತಂದೆ ಸ್ವಲ್ಪ ದೂರದಲ್ಲಿ ಯಂತ್ರದಲ್ಲಿ ಭತ್ತ ಕಟಾವು ಮಾಡಿಸುತ್ತಿದ್ದರು. ಯಂತ್ರದ ಶಬ್ದಕ್ಕೆ ದಾಳಿ ಆಗುತ್ತಿರುವುದು ತಿಳಿದಿಲ್ಲ. ದಡಮಘಟ್ಟ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮ ಪಂಚಾಯಿತಿಯವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಇಬ್ಬರಿಗೆ ಗಾಯ
ಶಿವಮೊಗ್ಗ ತಾಲೂಕಿನ ಪುರಲೆ ಗ್ರಾಮದಲ್ಲಿ ಬೀದಿ ನಾಯಿ ದಾಳಿಯಿಂದ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಪ್ರತಿಕ್ಷಾ ಅವಿನಾಶ್ (3), ಪಂಕಜ್ (2.5) ಗಾಯಗೊಂಡವರು. ಪುರಲೆ ಗ್ರಾಮದ ಅಂಬೇಡ್ಕರ್ ನಗರದ ಕೆರೆ ಏರಿಯಲ್ಲಿ ಒಂದೇ ನಾಯಿ, ಇಬ್ಬರು ಮಕ್ಕಳಿಗೆ ಕಚ್ಚಿದೆ. ಗಂಭೀರವಾಗಿ ಗಾಯಗೊಂಡ ಪ್ರತಿಕ್ಷಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಪಂಕಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾನೆ.
ಅಡಕೆ ಕೊಯ್ಯುವಾಗ ಮರದಿಂದ ಬಿದ್ದು ಸಾವು
ಶಿವಮೊಗ್ಗ: ಸಾಗರ ತಾಲೂಕು ಆನಂದಪುರ ಸಮೀಪದ ಘಂಟಿನಕೊಪ್ಪ ಗ್ರಾಮದಲ್ಲಿ ಅಡಕೆ ಕೊಯ್ಯುವಾಗ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಶೇಖರಪ್ಪ (43) ಮೃತರು. ಹಲವು ವರ್ಷಗಳಿಂದ ಅಡಕೆ ಕೊಯ್ಯುವ ಕೆಲಸ ಮಾಡುತ್ತಿದ್ದ ಶೇಖರಪ್ಪ, ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಅಡಕೆ ಕೊಯ್ಯುವಾಗ ಮರದಿದ್ದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಹೊಸನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿದಾಗ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರಾವತಿಯಲ್ಲಿ ಯುವತಿ ನೇಣಿಗೆ ಶರಣು
ಶಿವಮೊಗ್ಗ: ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಂಜಿತಾ (21) ಆತ್ಮಹತ್ಯೆ ಮಾಡಿಕೊಂಡ ಯುವತಿ. ಭದ್ರಾವತಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಯುವತಿಯ ಮೃತದೇಹ ಬುಧವಾರ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆಗೆ ಕಾರಣ ಏನೆಂಬುದು ಪೊಲೀಸರ ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.
ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ
ಶಿವಮೊಗ್ಗ: ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 10 ಜನರನ್ನು ಬಂಧಿಸಿ, ಪಣಕ್ಕಿಟ್ಟಿದ್ದ 79,650 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಲಷ್ಕರ್ ಮೊಹಲ್ಲಾದ ಮನೆಯೊಂದರಲ್ಲಿ ಇಸ್ಪೀಟ್ ಆಡುತ್ತಿದ್ದಾಗ ಪೊಲೀಸ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ | Murder case | ಕಿರಿಕಿರಿ ತಡೆಯಲಾಗದೆ ತವರಿಗೆ ಬಂದು ಬದುಕು ಕಟ್ಟಿಕೊಂಡಿದ್ದಳು: ಅಲ್ಲೂ ಬಿಡದೆ ಇರಿದು ಕೊಂದ ದುಷ್ಟ ಗಂಡ