ಶಿವಮೊಗ್ಗ: ನಮ್ಮ ಮಕ್ಕಳು ಸಣ್ಣ ವಯಸ್ಸಲ್ಲೇ ಗಾಡಿ ಓಡಿಸ್ತಾರೆ (Minors driving) ಅಂತ ಹೇಳಿಕೊಳ್ಳುವುದು ಕೆಲವು ಹೆತ್ತವರಿಗೆ ಹೆಮ್ಮೆ. ಬೈಕ್, ಕಾರುಗಳನ್ನು ಮಕ್ಕಳ ಕೈಯಲ್ಲಿ ಕೊಟ್ಟು ಓಡಿಸೋದು ಒಂಥರಾ ಖುಷಿ. ಇನ್ನು ಕೆಲವು ಮಕ್ಕಳು ಹಠ ಮಾಡಿ ಗಾಡಿ ಓಡಿಸ್ತಾರೆ.. ಈ ಎರಡೂ ಕೆಟಗರಿಯವರಿಗೆ ಎಚ್ಚರಿಕೆ (traffic rules) ನೀಡೊ ಒಂದು ಘಟನೆ ಶಿವಮೊಗ್ಗದಲ್ಲಿ (Shivamogga news) ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕೆ (Minor boy rides scooter) ಅವನ ಅಪ್ಪನಿಗೆ 25 ಸಾವಿರ ರೂ. ದಂಡ (Father gets 25000 penalty) ಬಿದ್ದಿದೆ!
ಶಿವಮೊಗ್ಗ ಕ್ಲಾರ್ಕ್ ಪೇಟೆಯ ಓಂ ಪ್ರಕಾಶ್ (47) ಎಂಬವರೇ ದಂಡ ತೆತ್ತವರು. ಅವರ ಮಗ 17 ವರ್ಷದ ಹುಡುಗ ದ್ವಿಚಕ್ರ ವಾಹನವನ್ನು ಓಡಿಸಿಕೊಂಡು ಹೋಗುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಹೀಗೆ ಸಿಕ್ಕಿಬಿದ್ದಾಗ ಮಕ್ಕಳು ಗಾಡಿ ಓಡಿಸಿದ್ದಾರೆ ಅನ್ನುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಮಕ್ಕಳ ಕೈಗೆ ಗಾಡಿ ಕೊಟ್ಟಿದ್ಯಾಕೆ ಎಂಬ ಪ್ರಶ್ನೆ ಹೆಚ್ಚು ಪ್ರಸ್ತುತವಾಗುತ್ತದೆ. ಹೀಗಾಗಿ ಪೊಲೀಸರು ಅಪ್ಪನನ್ನೇ ಠಾಣೆಗೆ ಕರೆಸಿದ್ದಾರೆ.
ಪೊಲೀಸರು ಈ ವಿಚಾರದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಬಾಲಕ ಗಾಡಿ ಓಡಿಸಿದ್ದಾನೆ ಎಂಬ ದೂರು ದಾಖಲಿಸಿಕೊಂಡಿರುವ ಅವರು ಮಗನಿಗೆ ವಾಹನ ಚಾಲನೆಗೆ ಅವಕಾಶ ನೀಡಿದ್ದಕ್ಕೆ ತಂದೆಯನ್ನೂ ಆರೋಪಿ ಮಾಡಿದ್ದಾರೆ.
ದೂರು ದಾಖಲಿಸಿಕೊಂಡ ಪಶ್ಚಿಮ ಸಂಚಾರಿ ಠಾಣೆ ಪಿಎಸ್ಐ ತಿರುಮಲೇಶ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ವರದಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ವಾಹನ ಮಾಲೀಕ, ಬಾಲಕನ ತಂದೆಗೆ ದಂಡ ವಿಧಿಸಿದೆ. 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ಕೋರ್ಟ್ ಆದೇಶದಂತೆ ತಂದೆ ಓಂಪ್ರಕಾಶ್ ಅವರು ಈಗ 25000 ರೂ. ದಂಡ ಕಟ್ಟಬೇಕಾಗಿದೆ.
ಇದನ್ನೂ ಓದಿ : Traffic Fines: 40 ಬಾರಿ ರೂಲ್ಸ್ ಬ್ರೇಕ್ ಮಾಡಿದ ಬೈಕ್ ಸವಾರನಿಗೆ ಬಿತ್ತು 12 ಸಾವಿರ ರೂ. ದಂಡ!
ಮಕ್ಕಳ ಕೈಗೆ ಯಾಕೆ ವಾಹನ ಕೊಡಬಾರದು?
ಕೆಲವರು ಹೆತ್ತವರು ನಮ್ಮ ಮಕ್ಕಳಿಗೆ ಡ್ರೈವಿಂಗ್ ಗೊತ್ತು. ಅವರ ಕೈಗೆ ಯಾಕೆ ವಾಹನ ಕೊಡಬಾರದು ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ.
- 18 ವರ್ಷದೊಳಗಿನ ಮಕ್ಕಳಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲಾಗಿರುವುದಿಲ್ಲ. ಹಾಗಾಗಿ ಅಪಘಾತ ಸಂಭವಿಸಿದರೆ ಅವರಿಗಾಗಲೀ, ಅವರ ಎದುರು ವಾಹನದವರಿಗಾಗಿ ಇನ್ಶೂರೆನ್ಸ್ ಸಿಗುವುದಿಲ್ಲ.
- ನಾವೇ ಡ್ರೈವಿಂಗ್ ಮಾಡಿಕೊಂಡು ಹೋಗಿ ಅಪಘಾತ ಮಾಡಿಕೊಂಡರೆ ನಮ್ಮ ಸಮಸ್ಯೆ ನಾವೇ ನೋಡ್ಕೊಳ್ತೇವೆ ಎಂದು ಹೆತ್ತವರು ಧಿಮಾಕು ತೋರಿಸಬಹುದು. ಬೇರೆಯವರಿಗೆ ಹೋಗಿ ಡಿಕ್ಕಿ ಹೊಡೆದರೆ ಯಾರು ಹೊಣೆ?
- ಮಕ್ಕಳಿಗೆ ವಾಹನ ಚಲಾಯಿಸಲು ಗೊತ್ತೇ ಹೊರತು, ಹೆಚ್ಚಿನವರಿಗೆ ಸೂಕ್ಷ್ಮ ಸಂದರ್ಭದಲ್ಲಿ ಟ್ರಬಲ್ ಶೂಟಿಂಗ್, ಸಮಸ್ಯೆಗಳನ್ನು ನಿಭಾಯಿಸುವುದು ತಿಳಿದಿರುವುದಿಲ್ಲ.
- ಅವರ ಚಾಲನೆಯಿಂದ ಇತರರ ವಾಹನ ಚಲಾವಣೆಗೂ ತೊಂದರೆ ಆಗುವ ಅಪಾಯ ಇರುತ್ತದೆ.
- ಸಣ್ಣ ವಯಸ್ಸಿನ ಮಕ್ಕಳಿಗೆ ಸ್ವತಂತ್ರವಾಗಿ ವಾಹನ ಕೊಟ್ಟರೆ ಅವರು ಶೋಕಿ ಮಾಡುವುದು, ವೀಲಿಂಗ್ ಮಾಡುವ ಶೋ ಮಾಡುವ ಸಾಧ್ಯತೆ ಇರುತ್ತದೆ.
ಹೀಗಾಗಿ ಹೆತ್ತವರು ಸಣ್ಣ ಮಕ್ಕಳ ಕೈಗೆ ವಾಹನ ನೀಡದೆ, ಅವರಿಗೆ ಸೂಕ್ತ ವಯಸ್ಸಾದ ಮೇಲೆ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಯೇ ಚಾಲನೆಗೆ ಅವಕಾಶ ನೀಡುವುದು ಉತ್ತಮ.