Site icon Vistara News

Drowned in River : ಬೆಂಗಳೂರಿನಿಂದ ಪ್ರವಾಸ ಬಂದಿದ್ದ ಇಬ್ಬರು ಯುವಕರು ತುಂಗಾ ನದಿಯಲ್ಲಿ ನೀರುಪಾಲು

youths drowned

ಶಿವಮೊಗ್ಗ: ಜಿಲ್ಲೆಯ (Shivamogga News) ತೀರ್ಥಹಳ್ಳಿಯ ಭೀಮನಕಟ್ಟೆ ಸಮೀಪ ತುಂಗಾನದಿಯಲ್ಲಿ (Thunga river) ಈಜುತ್ತಿದ್ದ ವೇಳೆ ಇಬ್ಬರು ಯುವಕರು (Two youths drowned) ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ (Drowned in River). ಭಾನುವಾರ ಈ ಘಟನೆ ನಡೆದಿದ್ದು, ಇವರಿಗಾಗಿ ಹುಡುಕಾಟ ನಡೆಯುತ್ತಿದೆ.

ಬೆಂಗಳೂರಿನಿಂದ ತೀರ್ಥಹಳ್ಳಿಗೆ ಪ್ರವಾಸ ಬಂದಿದ್ದ ಬೆಂಗಳೂರಿನ ಮೂವರು ಯುವಕರಲ್ಲಿ (Youths from Bangalore) ಇಬ್ಬರು ಈಗ ನಾಪತ್ತೆಯಾಗಿದ್ದಾರೆ. ನೀರುಪಾಲಾದವರನ್ನು ಗೌತಮ್‌ (27), ಸಂಜಯ್‌ (25) ಎಂದು ಗುರುತಿಸಲಾಗಿದೆ.

ಬೆಂಗಳೂರು ಮಾಗಡಿ ರಸ್ತೆಯ ನಿವಾಸಿ ಗೌತಮ್ (27), 8ನೇ ಮೈಲಿಕಲ್ಲು ನಿವಾಸಿ ಸಂಜಯ್​(25) ಮತ್ತು ನೆಲಮಂಗಲ ಲಕ್ಕನಹಳ್ಳಿ ನಿವಾಸಿ ಗಿರೀಶ್ ಅವರು ಕಳೆದ ಶುಕ್ರವಾರವೇ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಬೆಂಗಳೂರಿನಿಂದ ತೀರ್ಥಹಳ್ಳಿಗೆ ಬಂದಿದ್ದರು. ಪಶ್ಚಿಮ ಘಟ್ಟದ ಸೌಂದರ್ಯ, ನದಿ ತೀರಗಳ ಚೆಲುವು, ಪ್ರವಾಸಿ ತಾಣಗಳ ವೀಕ್ಷಣೆಯ ಉದ್ದೇಶದಿಂದ ಅವರು ಬಂದಿದ್ದರು.

ಶುಕ್ರವಾರ ಆಲ್ಟೋ ಕಾರಿನಲ್ಲಿ ಬಂದಿದ್ದ ಅವರು ತೀರ್ಥಹಳ್ಳಿಯ ಕಮ್ಮರಡಿಯಲ್ಲಿ ಉಳಿದುಕೊಂಡಿದ್ದರು. ಅಲ್ಲಿಂದ ಕುಪ್ಪಳ್ಳಿಯೂ ಸೇರಿದಂತೆ ಹಲವು ಪ್ರಸಿದ್ಧ ಸ್ಥಳಗಳಿಗೆ ಹೋಗಿ ಖುಷಿಪಟ್ಟಿದ್ದರು.

ಈ ನಡುವೆ ಭಾನುವಾರ ಅವರು ಭೀಮನಕಟ್ಟೆಗೆ ಹೋಗಿದ್ದರು. ಅಲ್ಲಿ ತುಂಗಾ ನದಿಗೆ ಇಳಿದು ಈಜಲು ಆರಂಭ ಮಾಡಿದ್ದರು. ಆದರೆ, ಒಂದು ಹಂತದಲ್ಲಿ ಗೌತಮ್‌ ಮತ್ತು ಸಂಜಯ್‌ ನೀರಿನ ಸೆಳವಿಗೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರ ಜತೆಗಿದ್ದ ಗಿರೀಶ್‌ ಮತ್ತು ಸ್ಥಳದಲ್ಲಿದ್ದ ಸ್ಥಳೀಯರು ಕೂಡಲೇ ಪೊಲೀಸರು ಮತ್ತು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.

ತಜ್ಞ ಈಜುಗಾರರು, ಅಗ್ನಿಶಾಮಕ ಸಿಬ್ಬಂದಿಗಳು ಈಗ ಹುಡುಕಾಟ ಮುಂದುವರಿಸಿದ್ದು, ಅವರು ಇನ್ನೂ ಪತ್ತೆಯಾಗಿಲ್ಲ.

ಈ ಭಾಗದಲ್ಲಿ ತುಂಗಾ ನದಿ ಸೆಳವು ಭಾರಿ ಹೆಚ್ಚಿದೆ. ಆದರೆ, ಹೊರಗಿನ ಭಾಗದವರು ಇದರ ವಿಚಾರ ತಿಳಿಯದೆ ಸಮಸ್ಯೆಗೆ ಸಿಲುಕುತ್ತಿರುವುದು ಕಂಡುಬಂದಿದೆ. ಹೆಚ್ಚಿನವರು ನೀರು ನೋಡಿ ಸಂಭ್ರಮಿಸುವ ಭರದಲ್ಲಿ ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಇದನ್ನೂ ಓದಿ : Drown in lake : ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಅರಶಿನಗುಂಡಿ ಜಲಪಾತದಲ್ಲಿ ಶರತ್‌ ಪ್ರಾಣ ಕಳೆದುಕೊಂಡಿದ್ದರು

ಕೆಲವು ಸಮಯದ ಹಿಂದೆ ಕೊಲ್ಲೂರಿನ ಅರಶಿನಗುಂಡಿ ಜಲಪಾತದಲ್ಲಿ ಭದ್ರಾವತಿ ಮೂಲದ ಶರತ್‌ ಕುಮಾರ್‌ ಎಂಬವರು ಕಾಲುಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಜುಲೈ 23ರಂದು ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಶರತ್‌ ಸಮೀಪದಲ್ಲಿದೆ ಎಂಬ ಕಾರಣಕ್ಕೆ ಗೆಳೆಯನೊಂದಿಗೆ ಅರಶಿನಗುಂಡಿ ಫಾಲ್ಸ್‌ಗೆ ಹೋಗಿದ್ದರು. ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಕಲ್ಲಿನ ಅಂಚಿಗೆ ಹೋಗಿ ನಿಂತಿದ್ದ ಶರತ್‌ ಕಾಲು ಜಾರಿ ಬಿದ್ದಿದ್ದರು. ಆರು ದಿನಗಳ ಕಾಲ ಹಲವು ಜೀವರಕ್ಷಕರು ಹುಡುಕಾಡಿದರೂ ಶವ ಸಿಕ್ಕಿರಲಿಲ್ಲ. ಡ್ರೋನ್‌ ಕ್ಯಾಮೆರಾ ಬಳಸಿದರೂ ಕಂಡಿರಲಿಲ್ಲ. ಕೊನೆಗೆ ಏಳನೇ ದಿನ ಬಂಡೆಗಲ್ಲುಗಳ ನಡುವೆ ಶವ ಪತ್ತೆಯಾಗಿತ್ತು.

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಸುಣ್ಣದಹಳ್ಳಿ ನಿವಾಸಿ ಶರತ್‌ ಕುಮಾರ್‌ (23) ಮೇಸ್ತ್ರಿ ಮುನಿಸ್ವಾಮಿ ಎಂಬ​ವರ ಪುತ್ರ. ತಂದೆಯ ಅಡಕೆ ತಟ್ಟೆ ತಯಾರಿಕ ಘಟಕ ನೋಡಿಕೊಳ್ಳುತ್ತಿದ್ದರು. ಈ ಘಟನೆಯ ಬಳಿಕ ಪ್ರವಾಸಿಗರಲ್ಲಿ ಜಾಗೃತಿ ಮೂಡಿತ್ತು ಎಂದು ಹೇಳಲಾಗುತ್ತಿತ್ತು. ಆದರೆ, ಇದೆಲ್ಲವೂ ನೆನಪು ಮರೆಯಾಗುವವರೆಗೆ ಎನ್ನುವುದು ಈಗ ಮತ್ತೆ ಋಜುವಾತಾಗಿದೆ.

Exit mobile version