ಶಿವಮೊಗ್ಗ: ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರ ಸ್ಟಾರ್ ಪ್ರಚಾರಕರಾಗಿ ಹಲವು ಸಿನಿಮಾ ನಟ, ನಟಿಯರು ಪ್ರಚಾರ ನಡೆಸುತ್ತಿರುವುದರಿಂದ ರಾಜ್ಯ ವಿಧಾನಸಭಾ ಚುನಾವಣಾ ಕಣ (Karnataka Election) ರಂಗೇರಿದೆ. ಈ ನಡುವೆ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಹ್ಯಾಟ್ರಿಕ್ ಹೀರೋ, ನಟ ಶಿವರಾಜ್ ಕುಮಾರ್ ಅವರು ಭಾನುವಾರ ಪ್ರಚಾರ ನಡೆಸಿದ್ದಾರೆ. ಇದೇ ವೇಳೆ ಮಧು ಬಂಗಾರಪ್ಪ ಗೆದ್ದರೆ, ವಿಜಯೋತ್ಸವಕ್ಕೆ ನಾನು ಬಂದು, ಅಭಿಮಾನಿಗಳಿಗೆ ಬೇಕಾದಷ್ಟು ಹಾಡು ಹೇಳಿ, ಡಾನ್ಸ್ ಮಾಡುವೆ ಎಂದು ಹೇಳಿದ್ದಾರೆ.
ಸೊರಬ ತಾಲೂಕಿನ ಆನವಟ್ಟಿಯಲ್ಲಿ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿರುವ ಶಿವರಾಜ್ ಕುಮಾರ್ ಅವರು, ನಾನು ಸೊರಬಕ್ಕೆ ಹಲವು ಬಾರಿ ಬಂದಿದ್ದೇನೆ. ಮಾವ ಬಂಗಾರಪ್ಪನವರ ಕಾಲದಿಂದಲೂ ಇಲ್ಲಿಗೆ ಬರುತ್ತಿದ್ದೇನೆ. ಇವತ್ತು ಮಧು ಬಂಗಾರಪ್ಪ ಪರವಾಗಿ ಬಂದಿದ್ದೇನೆ. ಮಧು ಕೇವಲ ಬಾವ ಮಾತ್ರ ಅಲ್ಲ, ಸ್ನೇಹಿತ ಕೂಡ. ಒಳ್ಳೆಯದನ್ನು ಮಾಡಬೇಕು ಎಂಬ ಭಾವನೆ ಮಧು ಮನಸ್ಸಿನಲ್ಲಿದೆ. ಅವರಿಗೆ ನಿಮ್ಮ ಬೆಂಬಲ, ಆಶೀರ್ವಾದ ಬೇಕು ಎಂದು ಜನರನ್ನು ಕೋರಿದರು.
ಇದನ್ನೂ ಓದಿ | Congress Guarantee: ಅಂಗನವಾಡಿ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ; ಇದು ಕಾಂಗ್ರೆಸ್ 6ನೇ ಗ್ಯಾರಂಟಿ
ಮಧು ಬಂಗಾರಪ್ಪ ಶಾಸಕ, ಮಿನಿಷ್ಟರ್ ಏನೇ ಆದರೂ ನಿಮ್ಮಲ್ಲಿ ಒಬ್ಬರಾಗಿ ಇರುತ್ತಾರೆ. ಆ ಭರವಸೆಯನ್ನು ನಾನು ನಿಮಗೆ ಕೊಡುತ್ತೇನೆ. ಮೇ 10 ರಂದು ಚುನಾವಣೆಯಲ್ಲಿ ನೀವು ಮಧು ಬಂಗಾರಪ್ಪ ಪರ ನಿಲ್ಲಬೇಕು. ಗೆಲುವಿನ ಸಂಭ್ರಮದಲ್ಲಿ ನಾನು ಬಂದು, ಹಾಡು ಹೇಳಿ, ಡ್ಯಾನ್ಸ್ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕರ್ನಾಟಕಕ್ಕೆ ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದ ಖರ್ಗೆ
ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ಬಿಜೆಪಿ ಖಜಾನೆ ತುಂಬಿದೆ. ದುಡ್ಡು ಕೊಟ್ಟು ಜನರನ್ನು ಕರೆಯಿಸಿ ಉದೋ ಉದೋ ಎನ್ನುತ್ತಾರೆ. ಬಿಜೆಪಿಯಿಂದ ಕರ್ನಾಟಕಕ್ಕೆ ಕೊಡುಗೆ ಏನು? ಏನಾದರೂ ದೊಡ್ಡ ಕಾರ್ಖಾನೆ ಮಾಡಿಕೊಟ್ಟಿದ್ದೀರಾ? ದೊಡ್ಡ ಹೂಡಿಕೆ ಏನಾದರೂ ಮಾಡಿದ್ದೀರಾ? ಏನು ಮಾಡಿದ್ದರೂ ಅದು ಮೈಸೂರು ಮಹಾರಾಜರ ಕಾಲ ಹಾಗೂ ಜವಾಹರಲಾಲ್ ನೆಹರು ಅವರ ಕಾಲದಲ್ಲಿ ಆಗಿರುವುದು ಎಂದು ಹೇಳಿದರು.
ಸೋನಿಯಾಗಾಂಧಿ ಆಹಾರ ರಕ್ಷಣೆ ಕಾನೂನು ಜಾರಿ ಮಾಡಿ ಪುಕ್ಕಟೆ ಅಕ್ಕಿ ಕೊಡಲು ಆರಂಭಿಸಿದರು. ನಾವು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೆ 10 ಕೆ.ಜಿ. ಸಣ್ಣ ಅಕ್ಕಿ ಕೊಡುತ್ತೇವೆ. 200 ಯುನಿಟ್ ಉಚಿತ ವಿದ್ಯುತ್, ಉಚಿತ ಬಸ್ ಪಾಸ್ ಕೊಡುತ್ತೇವೆ. ಇವೆಲ್ಲಾ ನಮ್ಮ ಗ್ಯಾರಂಟಿ ಯೋಜನೆಗಳು. ನಾವು ಏನು ಹೇಳುತ್ತೇವೋ ಅದನ್ನು ಮಾಡುತ್ತೇವೆ. ನೀವು ಹೇಳುವುದೊಂದು ಮಾಡೋದೊಂದು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ | Karnataka Election: ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ನನಗೆ ಕಾಂಗ್ರೆಸ್ ಧಮ್ಕಿ ಹಾಕುತ್ತಿದೆ; ಪ್ರಧಾನಿ ನರೇಂದ್ರ ಮೋದಿ
ಕರ್ನಾಟಕ ಪ್ರಗತಿಪರವಾದ ರಾಜ್ಯ. ಶಿವಮೊಗ್ಗ ಜಿಲ್ಲೆ ಬುದ್ಧಿಜೀವಿಗಳು ಇರುವ ಜಿಲ್ಲೆ. ಗೇಣಿದಾರರ ಹೋರಾಟ ಆರಂಭವಾಗಿದ್ದು ಈ ಜಿಲ್ಲೆಯಿಂದಲೇ ಎಂದ ಅವರು, ಉಳುವವನೇ ಭೂ ಒಡೆಯ ಜಾರಿಗೆ ತಂದಿದ್ದು ಕಾಂಗ್ರೆಸ್. ಈ ಕಾನೂನನ್ನು ಏನು ಮೋದಿ ಮಾಡಿದ್ದಾ, ಶಾ ಮಾಡಿದ್ದಾ? ಲಕ್ಷಾಂತರ ಮಂದಿ ಭೂ ಮಾಲೀಕರನ್ನಾಗಿ ಮಾಡಿದ್ದು ಇಂದಿರಾಗಾಂಧಿ, ದೇವರಾಜ ಅರಸು. ಮೋದಿ ಒಂದೇ ಒಂದು ಅಡಿ ಭೂಮಿ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ನಾವು ಪೂಜಿಸುತ್ತೇವೆ, ಇವರು ಎಂದೂ ಪೂಜೆ ಮಾಡಿಲ್ಲ. ಆರ್‌ಎಸ್‌ಎಸ್ ಕಚೇರಿಯಲ್ಲಿ ಅಂಬೇಡ್ಕರ್ ಪೋಟೋ ಇಲ್ಲ. ಬಿಜೆಪಿಯವರು ಇತ್ತೀಚೆಗೆ ಜಯಂತಿ ದಿನ ಅಂಬೇಡ್ಕರ್ ಪೋಟೊ ಇಡುತ್ತಿದ್ದಾರೆ. ಅಂತಹವರ ಹೆಸರು ಹೇಳಿ ವೋಟು ತೆಗೆದುಕೊಳ್ಳಲು ಬರುತ್ತಿದ್ದಾರೆ. ನಾವು ಏನಾದರೂ ಮಾಡಿದರೆ ಕೇಸ್ ಹಾಕುತ್ತಾರೆ. ಇದರಿಂದ ನಾವು ಹೆದರುವವರಲ್ಲ, ನ್ಯಾಯಕ್ಕಾಗಿ ನಮ್ಮ ಹೋರಾಟವಿದೆ ಎಂದು ಹೇಳಿದರು.
ಇದನ್ನೂ ಓದಿ | Karnataka Election 2023: ಮಂಡ್ಯದಲ್ಲಿ ಬುಲ್ಡೋಜರ್ ತಂದು ನೆಲಸಮ ಮಾಡ್ತೇನೆ ಅಂದರಾ ಯೋಗಿ?: ಎಚ್.ಡಿ. ಕುಮಾರಸ್ವಾಮಿ
ಮೋದಿ ಸರ್ಕಾರ ಎಲ್ಲದಕ್ಕೂ ತೆರಿಗೆ ವಿಧಿಸಿದೆ. ಗಾಳಿಯೊಂದು ಉಚಿತವಾಗಿ ಸಿಗುತ್ತಿದೆ. ಮೋದಿಯವರಿಗೆ ಇನ್ನು ಅದರ ಮೇಲೆ ಕಣ್ಣು ಬಿದ್ದಿಲ್ಲ. ಆಕ್ಸಿಜನ್ ಇಲ್ಲದೇ ಮನುಷ್ಯ ಬದುಕಲ್ಲ ಅಂತಾದರೆ ಇದರ ಮೇಲೆ ಏಕೆ ತೆರಿಗೆ ವಿಧಿಸಬಾರದು ಎಂಬುದು ಇನ್ನು ಅವರ ತಲೆಯಲ್ಲಿ ಬಂದಿಲ್ಲ. ಈ ವಿಚಾರ ತಲೆಯಲ್ಲಿ ಬಂದರೆ ಗಾಳಿಗೂ ತೆರಿಗೆ ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.