ಮೈಸೂರು: ಇಂದು ರೋಚಕ ಮತ್ತು ಆಕರ್ಷಕ ಪದಗಳಿಂದ ಕೂಡಿದ ವಸ್ತುನಿಷ್ಠವಲ್ಲದ ವರದಿಗಾರಿಕೆಗಿಂತ ಜಾಗರೂಕತೆಯಿಂದ ಜನರಿಗೆ ಪ್ರಿಯವಾಗುವ ಶೈಲಿಯಲ್ಲೇ ಮಾಧ್ಯಮಗಳು ಸತ್ಯವನ್ನು ಹೇಳಬೇಕು. ವಸ್ತುನಿಷ್ಠತೆಯಿಂದ ಕೂಡಿದ ವರದಿ ಮಾತ್ರ ಐತಿಹಾಸಿಕ ಸತ್ಯವಾಗಿ ಉಳಿಯಬಲ್ಲದು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಮೈಸೂರಿನ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಬುಧವಾರ ನೂತನ ಪ್ರಾದೇಶಿಕ ಪತ್ರಿಕೆ ʼಪ್ರತಿನಿಧಿʼ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಕೇವಲ ಅಲಂಕಾರಿಕ ಪದಗಳಿಂದ ಉತ್ತಮ ವರದಿ ರೂಪುಗೊಳ್ಳುವುದಿಲ್ಲ. ಇತ್ತೀಚೆಗೆ ಪತ್ರಿಕೆಗಳಲ್ಲಿ ಬರುವ ವರದಿ ಯಾವುದು, ಪತ್ರಿಕೆಯ ಮಾತು ಯಾವುದು ಎಂಬ ವ್ಯತ್ಯಾಸಗಳೇ ತಿಳಿಯದಂತಾಗಿದೆ. ಓದುಗರು ತುಂಬಾ ಪ್ರಜ್ಞಾವಂತರಾಗಿದ್ದಾರೆ. ಪ್ರತಿ ಓದುಗನೂ ತಾನು ಓದುವ ಪತ್ರಿಕೆ ಹೀಗೆಯೇ ಇರಬೇಕು ಎಂದು ಆಲೋಚಿಸುವುದರಿಂದ ಬಹಳ ಎಚ್ಚರಿಕೆಯಿಂದ ಪತ್ರಿಕೆ ರೂಪಿಸಬೇಕಾಗಿದೆ ಎಂದರು.
“ಪ್ರತಿನಿಧಿʼ ಪತ್ರಿಕೆ 62 ವರ್ಷಗಳ ಹಿಂದೆ ಮೈಸೂರಿನಲ್ಲೇ ಆರಂಭಗೊಂಡ ಮೊದಲ ಪ್ರಾದೇಶಿಕ ಪತ್ರಿಕೆ. ನಂತರ ಹಾಸನಕ್ಕೆ ಹೋಗಿ ಅಲ್ಲಿ ಕ್ರಿಯಾಶೀಲವಾಗಿದ್ದು, ಈಗ ಮೈಸೂರಿಗೆ ಹಿಂದಿರುಗಿರುವುದು ಸಂತಸದ ಸಂಗತಿ. “ಪ್ರತಿನಿಧಿʼ ಹೆಸರೇ ವಿಶೇಷವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರಾಗಿದ್ದಾಗ ಪ್ರಜಾ ಪ್ರತಿನಿಧಿ ಸಭೆಯನ್ನು ರಚಿಸಿದ್ದರು. ರಾಜಾಳ್ವಿಕೆಯಲ್ಲೇ ಪ್ರತಿನಿಧಿಗಳನ್ನು ಪ್ರಜೆಗಳಿಂದ ಆರಿಸುವ ಕೆಲಸ ಮಾಡಲಾಗಿತ್ತು. ಅಂತಹ ಕೆಲಸವನ್ನು ಪ್ರತಿನಿಧಿ ಪತ್ರಿಕೆ ಮಾಡಬೇಕು ಎಂದು ಆಶೀರ್ವದಿಸಿದರು.
ಜನಪರ ಕಾಳಜಿಯ ಪತ್ರಿಕೆಗೆ ಭವಿಷ್ಯವಿದೆ: ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಅವರು ಮಾತನಾಡಿ, ಯಾವುದೇ ತತ್ವ ಸಿದ್ಧಾಂತಗಳಿಗೆ ಕಟ್ಟುಬೀಳದೆ ಜನಪರವಾದ ಕಾಳಜಿಯನ್ನು ಇಟ್ಟುಕೊಂಡು ಕೆಲಸ ಮಾಡಿದರೆ ಪತ್ರಿಕೆಯನ್ನು ಜನ ಇಷ್ಟಪಡುತ್ತಾರೆ ಎಂದರು.
“”ಡಿಜಿಟಲ್ ಯುಗದಲ್ಲಿ ಮುದ್ರಣ ಮಾಧ್ಯಮ ಕಟ್ಟುವುದು ಅಲೆಗೆ ವಿರುದ್ಧ ಈಜಿದಂತೆ ಎನ್ನುತ್ತಾರೆ. ಬೆರಳ ತುದಿಯಲ್ಲೇ ಮಾಹಿತಿ ತಂತ್ರಜ್ಞಾನ ಇರುವಾಗ ಪತ್ರಿಕೆ ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಆ ಅಭಿಪ್ರಾಯ ಸುಳ್ಳು. ಯಾವ ಸಿದ್ಧಾಂತಕ್ಕೂ ಜೋತು ಬೀಳದೆ ಜನಪರವಾದ ಪತ್ರಿಕೋದ್ಯಮ ರೂಪಿಸಿ, ಜನರಿಗೂ ಇದು ನನ್ನ ಪತ್ರಿಕೆ ಎಂಬ ಭಾವನೆ ಬಂದಾಗ ಆ ಪತ್ರಿಕೆಯು ಉಳಿದು ಬೆಳೆಯಲು ಸಾಧ್ಯವಿದೆʼʼ ಎಂದವರು ಹೇಳಿದರು.
“”ಮುದ್ರಣ ಮಾಧ್ಯಮಕ್ಕೆ ಎಂದಿಗೂ ಸಾವಿಲ್ಲ. ನಿತ್ಯವೂ ಲಕ್ಷಾಂತರ ಮಕ್ಕಳು ಹುಟ್ಟುತ್ತಾರೆ. ಆದರೆ ಎಲ್ಲ ಮಕ್ಕಳೂ ಸಶಕ್ತವಾಗಿ ಬೆಳೆಯುವುದಿಲ್ಲ. ಅದೇ ರೀತಿ ಸ್ಥಾಪನೆಗೊಂಡ ಎಲ್ಲ ಪತ್ರಿಕೆಗಳೂ ನಿಲ್ಲುವುದಿಲ್ಲ. ಯಾವ ಪತ್ರಿಕೆಯು ಜನಪರವಾಗಿ, ವಸ್ತುನಿಷ್ಠವಾಗಿ, ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತದೆಯೋ ಅದು ಸದಾಕಾಲ ಗಟ್ಟಿಯಾಗಿ ನಿಲ್ಲುತ್ತದೆ. ಮೈಸೂರು ಸಣ್ಣ ಪತ್ರಿಕೆಗಳ ತವರೂರು. ಇಲ್ಲಿನ ಪತ್ರಿಕೆಗಳು ಯಶಸ್ವಿಯಾಗಿ ಗುರಿಮುಟ್ಟಿವೆ. ನಮಗಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ಕೇರಳ ರಾಜ್ಯದಲ್ಲಿ ಪತ್ರಿಕೆ ಪ್ರಸರಣ ಸಂಖ್ಯೆ ಕೋಟಿಯನ್ನು ದಾಟಿದ್ದು, ಕರ್ನಾಟಕದಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಇದನ್ನು ನೋಡಿದರೆ ಕನ್ನಡಿಗರಲ್ಲಿ ಇನ್ನೂ ಪತ್ರಿಕೆ ಓದುವವರ ಸಂಖ್ಯೆ ಹೆಚ್ಚಬೇಕಿದೆ. ಮೈಸೂರು ಭಾಗದಲ್ಲಿ “ಪ್ರತಿನಿಧಿʼ ಪತ್ರಿಕೆಯ ಜತೆಯಲ್ಲೇ “ವಿಸ್ತಾರ ನ್ಯೂಸ್ʼ ವಾಹಿನಿಯೂ ಜಂಟಿಯಾಗಿ ಕಾರ್ಯನಿರ್ವಹಿಸಲಿದೆʼʼ ಎಂದರು.
ಪ್ರಾದೇಶಿಕ ಪತ್ರಿಕೆಗಳ ಪ್ರಸಾರ ಸಂಖ್ಯೆ ಏರಿಕೆ
ರಾಜ್ಯ, ರಾಷ್ಟ್ರಮಟ್ಟದ ಮುದ್ರಣ ಮಾಧ್ಯಮಗಳ ಪ್ರಸಾರ ಸಂಖ್ಯೆ ಇಳಿಕೆ ಆಗುತ್ತಿದೆ. ಬದಲಿಗೆ ಪ್ರಾದೇಶಿಕ ಪತ್ರಿಕೆಗಳ ಪ್ರಸಾರ ಸಂಖ್ಯೆ ಏರಿಕೆ ಆಗುತ್ತಿದೆ. ಇದು ಸಂಶೋಧನೆ ಮಾಡಬೇಕಾದ ವಿಚಾರ. ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ಮುದ್ರಣ ಮಾಧ್ಯಮಕ್ಕೆ ಉಳಿಗಾಲವಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಇನ್ನು 10-15 ವರ್ಷಗಳಲ್ಲಿ ಮುದ್ರಣ ಮಾಧ್ಯಮ ಇರುವುದಿಲ್ಲ ಎಂಬ ಮಾತುಗಳಿವೆ. ಮುದ್ರಣ ಮಾಧ್ಯಮ ಯಾವ ಕಾಲಕ್ಕೂ ಶಾಶ್ವತವಾಗಿ ಉಳಿಯಲಿದೆ ಎಂಬುದು ನನ್ನ ಅಭಿಪ್ರಾಯ. ಯಾವ ದೃಷ್ಟಿಯಲ್ಲಿ ಸುದ್ದಿ ಕೊಡುತ್ತೇವೆ, ವಸ್ತು ವಿಷಯದಲ್ಲಿ ಎಷ್ಟು ಗಟ್ಟಿತನ ಇದೆ ಎಂಬುದರ ಮೇಲೆ ಇದರ ಯಶಸ್ಸು ಅಡಗಿದೆ.
– ಹರಿಪ್ರಕಾಶ್ ಕೋಣೆಮನೆ
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ “”ಮೈಸೂರಿನ ಪತ್ರಿಕೆಗಳು ಅತ್ಯಂತ ವಿಶ್ವಾಸಾರ್ಹವಾಗಿದ್ದು, ಸಾರ್ವಜನಿಕ ಕುಂದುಕೊರತೆಗಳನ್ನು ಸರ್ಕಾರದ ಗಮನಕ್ಕೆ ತಂದು ಕಣ್ತೆರೆಸುವ ಕೆಲಸ ಮಾಡುತ್ತಿವೆ. ಪತ್ರಿಕೆಗಳು ಸಾರ್ವಜನಿಕ ಕುಂದುಕೊರತೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಬೇಕು. ಅನವಶ್ಯಕ ತೇಜೋವಧೆ ಮಾಡಬಾರದು. ನಾನು ಉಸ್ತುವಾರಿ ಸಚಿವನಾಗಿ ಗಮನಿಸಿದಂತೆ ಮೈಸೂರಿನಲ್ಲಿ ಪತ್ರಿಕೆಗಳು ವಿಶ್ವಾಸಾರ್ಹವಾಗಿವೆ. ಸರ್ಕಾರದ ಕಿವಿಹಿಂಡುವ ಕೆಲಸ ಮಾಡುತ್ತಿವೆ. ಉತ್ತಮ ಸಂಪರ್ಕ, ವಿಶ್ವಾಸ ಇದ್ದರೆ ಮಾತ್ರ ನೈಜ ಚಿತ್ರಣ ಸಿಗಲು ಸಾಧ್ಯʼʼ ಎಂದರು.
ಶಾಸಕ ಎಸ್.ಎ.ರಾಮದಾಸ್ ಮಾತನಾಡಿ “”ಈ ದಿನಗಳಲ್ಲಿ ಪತ್ರಿಕೆ ಮಾಡುವುದೆಂದರೆ ಸಮುದ್ರದ ಅಲೆಗೆ ವಿರುದ್ಧವಾಗಿ ಈಜಿದಂತೆ. ಆದರೂ ಸಿ.ಕೆ.ಮಹೇಂದ್ರ ನೇತೃತ್ವದ ತಂಡ ಸವಾಲನ್ನು ಸ್ವೀಕರಿಸಿ ಪತ್ರಿಕೆ ಆರಂಭಿಸಿದೆ. ನಿಮ್ಮ ಪತ್ರಿಕೆಗೆ ಓದುಗರಾಗಿ ನಾವು ಪ್ರತಿನಿಧಿಯಾಗಿರುತ್ತೇವೆ. ಪತ್ರಿಕೆಯು ಸೃಜನಶೀಲ ಓದುಗರನ್ನು ಸೃಷ್ಟಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಸಣ್ಣ ಪತ್ರಿಕೆಗಳ ತವರೂರಾದ ಮೈಸೂರಿನಲ್ಲಿ ಹೊಸರೂಪದೊಂದಿಗೆ ಪದಾರ್ಪಣೆ ಮಾಡಿರುವ ಪ್ರತಿನಿಧಿಗೆ ಶುಭವಾಗಲಿʼʼ ಎಂದರು.
ಶಾಸಕ ಎಚ್.ಪಿ.ಮಂಜುನಾಥ್ “”ಇಂದಿನ ದಿನಗಳಲ್ಲಿ ಪತ್ರಿಕೆಗಳು ನಡೆಯುತ್ತಿರುವುದೇ ರಾಜಕಾರಣಿಗಳಿಂದ. ಆದರೆ ಇತ್ತೀಚಿನ ದಿನಗಳಲ್ಲಿ ಸತ್ಯ ಮುಚ್ಚಿಟ್ಟು ಸುಳ್ಳನ್ನು ವೈಭವೀಕರಿಸುವ ಕೆಲಸಗಳು ನಡೆಯುತ್ತಿವೆ. ಹೀಗಾಗಬಾರದುʼʼ ಎಂದರು.
ಸಂಸ್ಕೃತಿ ಚಿಂತಕ ಪ್ರೊ.ಎಂ.ಕೃಷ್ಣೇಗೌಡ “”ಘನತೆಯ ಪತ್ರಿಕೋದ್ಯಮ ಮಾಡುವ ಗುರಿ ಹೊಂದಿದವರಿಗೆ ಘನತೆ ಇಟ್ಟುಕೊಂಡೇ ಯಶಸ್ಸು ಕಾಣುವ ಅವಕಾಶವೂ ಇರುತ್ತದೆ. ಆದರೆ ಆಕರ್ಷಕವಾಗಿ ಸುದ್ದಿ ನೀಡುವ ಭರದಲ್ಲಿ ಅನವಶ್ಯಕ ಪದಗಳ ವಿಶ್ವಕೋಶವಾಗಿ ಪತ್ರಿಕೆಯು ರೂಪುಗೊಳ್ಳಬಾರದು. ಸಾರ್ವಜನಿಕವಾಗಿ ಬಳಸುವ ಭಾಷೆ ಸಮಂಜಸವಾಗಿರಬೇಕು. ಭಾಷೆಯಲ್ಲಿ ಹೊಣೆಗಾರಿಕೆ ಇಲ್ಲದಿದ್ದಾಗ ಅದು ಪರಿಣಾಮಕಾರಿಯೂ ಆಗಿರುವುದಿಲ್ಲʼʼ ಎಂದರು.
ಶಾಸಕ ಯತೀಂದ್ರ ಸಿದ್ದರಾಮಯ್ಯ, ಸಿ.ಎನ್.ಮಂಜೇಗೌಡ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀಹರಿ ದ್ವಾರಕಾನಾಥ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ, ಪತ್ರಿಕೆಯ ಪ್ರಧಾನ ಸಂಪಾದಕರಾದ ಸಿ.ಕೆ.ಮಹೇಂದ್ರ, ಕಾರ್ಯನಿರ್ವಾಹಕ ಸಂಪಾದಕರಾದ ಧರ್ಮಾಪುರ ನಾರಾಯಣ್ ಉಪಸ್ಥಿತರಿದ್ದರು.
ಇದನ್ನೂ ಓದಿ | ಕಲ್ಯಾಣ ಕರ್ನಾಟಕಕ್ಕೆ ಮೀಸಲಾದ ಹುದ್ದೆಗಳ ನೇಮಕಕ್ಕೆ ಪ್ರತ್ಯೇಕ ಅಧಿಸೂಚನೆ: ಸರ್ಕಾರದ ಆದೇಶ