Site icon Vistara News

Congress Guarantee:‌ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗೆ ಜಾರ್ಜ್‌ ಸೊರೊಸ್‌ ಹಣ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ ಶೋಭಾ ಕರಂದ್ಲಾಜೆ

Shobha Karandlaje criticizes congress guarantee

#image_title

ಬೆಂಗಳೂರು: ಕಾಂಗ್ರೆಸ್‍ನವರು ಜನರನ್ನು ಮರುಳು ಮಾಡಲು, ಜನರಿಗೆ ಮೋಸ ಮಾಡಲು ಗ್ಯಾರಂಟಿ ಕಾರ್ಡ್ (Congress Guarantee) ಹಂಚುತ್ತಿದ್ದಾರೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ ಆರೋಪಿಸಿದರು.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶೋಭಾ ಕರಂದ್ಲಾಜೆ, ಕರ್ನಾಟಕದಲ್ಲಿ ನೀವು 2013ರಿಂದ 2018ರವರೆಗೆ ಅಧಿಕಾರ ನಡೆಸಿದ್ದೀರಿ. ಆಗ ನೀವು ಒಂದು ಸಮುದಾಯದ ಓಲೈಕೆಗಾಗಿ ಮಾತ್ರ ಯೋಜನೆ ಕೊಟ್ಟಿದ್ದೀರಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನ ಸುಳ್ಳು ಭರವಸೆ ನಂಬಲು ಕರ್ನಾಟಕದ ಜನರು ಮೂರ್ಖರಲ್ಲ. ಕರ್ನಾಟಕದ ಜನರು ವಿದ್ಯಾವಂತರು, ಪ್ರಜ್ಞಾವಂತರು, ಬುದ್ಧಿವಂತರು. ಅವರೆಲ್ಲರೂ ಮಾಧ್ಯಮ ನೋಡುತ್ತಾರೆ; ಸೋಷಿಯಲ್ ಮೀಡಿಯಾ ಗಮನಿಸುತ್ತಾರೆ; ಯಾವ ರಾಜ್ಯದಲ್ಲಿ ನೀವು ಮೋಸ ಮಾಡಿದ್ದೀರೆಂಬ ಅರಿವು ಅವರಿಗೆ ಇದೆ. 2001ರ ಗ್ಯಾರಂಟಿ ಕಾರ್ಡ್, 2013ರ ಗ್ಯಾರಂಟಿ ಕಾರ್ಡ್ ಏನಾಗಿದೆ ಎಂದು ಕಾಂಗ್ರೆಸ್‍ನ್ನು ಜನತೆ ಪ್ರಶ್ನಿಸಬೇಕು ಎಂದು ಮನವಿ ಮಾಡಿದರು.

ಮಹಿಳೆಯರಿಗೆ 2 ಸಾವಿರ ರೂ., 200 ಯೂನಿಟ್ ಉಚಿತ ವಿದ್ಯುತ್, ಯುವಕರಿಗೆ 3000 -1500 ರೂ. ಯಾವ ಹಣದಿಂದ ಕೊಡುತ್ತೀರಿ? ಯಾರಾದರೂ ಜಾರ್ಜ್ ಸೊರೊಸ್ ಅಂಥವರು ನಿಮಗೆ ಹಣ ಕೊಡ್ತಾರಾ? ಎಂದು ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು. ಕರ್ನಾಟಕದ ಬಜೆಟ್‍ನಲ್ಲಿ ಇದನ್ನು ಕೊಡಲು ಸಾಧ್ಯವೇ ಇಲ್ಲ. ಈ ವರ್ಷ ನಮ್ಮ ಸರಕಾರ 3 ಲಕ್ಷ ಕೋಟಿ ರೂಪಾಯಿಯ ಬಜೆಟ್ ಮಂಡಿಸಿದೆ. ಸುಮಾರು 2.5 ಲಕ್ಷ ಕೋಟಿ ರೂಪಾಯಿ ಸಂಗ್ರಹ ಆಗುವ ಮಾಹಿತಿ ಇದೆ. ಅಥವಾ 3 ಲಕ್ಷ ಕೋಟಿಯೇ ಸಂಗ್ರಹ ಆಗಲಿ; ಈಗ ಕಾಂಗ್ರೆಸ್‍ನವರು ಕೊಟ್ಟ ಭರವಸೆಗಳನ್ನು ಈಡೇರಿಸಲು 70-75 ಸಾವಿರ ಕೋಟಿ ಬೇಕು. ಸನ್ಮಾನ್ಯ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಘೋಷಣೆಯಂತೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಅಜ್ಜ, ಅಜ್ಜಿಗೆ ತಲಾ 1200 ಸೇರಿ 2400 ರೂ. ನಾವು ಕೊಡುತ್ತಿದ್ದೇವೆ. ನಿಮ್ಮದು ಭರವಸೆ ಮಾತ್ರ. ನಾವು ನಿಜವಾಗಲೂ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ಸಿಗರು ಇದೇರೀತಿ ರಾಜಸ್ಥಾನದಲ್ಲೂ ಗ್ಯಾರಂಟಿ ಕಾರ್ಡ್ ಹಂಚಿದ್ದರು. 2018ರ ಚುನಾವಣೆಗೆ ಮೊದಲು ನಿರುದ್ಯೋಗಿ ಯುವಕರಿಗೆ 3,500 ರೂಪಾಯಿ ಭತ್ಯೆ ಕೊಡುವುದಾಗಿ ಗ್ಯಾರಂಟಿ ಕಾರ್ಡ್ ಕೊಟ್ಟು ತಿಳಿಸಿದ್ದಿರಿ. ಆದರೆ, ಇವತ್ತಿನ ತನಕ ಅದನ್ನು ಈಡೇರಿಸಿಲ್ಲ. ಛತ್ತೀಸ್‍ಗಡದಲ್ಲೂ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದೀರಿ. ನಿಮ್ಮ ಅಧಿಕಾರ ಇದ್ದರೂ ಅದನ್ನು ಈಡೇರಿಸಿಲ್ಲ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಈ ಕುರಿತು ಉತ್ತರಿಸಲಿ ಎಂದು ಆಗ್ರಹಿಸಿದರು.

ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿ ಆದಾಗ ಭರವಸೆ, ಗ್ಯಾರಂಟಿ ಕಾರ್ಡ್ ಕೊಡಲಿಲ್ಲ. ಬಿಜಾಪುರದಲ್ಲಿ ಅಜ್ಜಿ ಒಬ್ಬರು ಕಾಲಿಗೆ ಬಿದ್ದು, ‘ನನಗೆ ಗಂಡ ಇದ್ದಾರೆ, ಮಕ್ಕಳಿದ್ದಾರೆ, ಊಟ ಮಾಡಲು ಹಣ ಇಲ್ಲ’ ಎಂದಾಗ ‘ತಾಯಿ ನಿನಗೂ ಏನಾದ್ರೂ ಮಾಡುತ್ತೇನೆ’ ಎಂದು ತಿಳಿಸಿ ವಾಪಸ್ ಬಂದರು. ನಂತರದ ಕ್ಯಾಬಿನೆಟ್ ಸಭೆಯಲ್ಲಿ ಸಂಧ್ಯಾ ಸುರಕ್ಷಾ ಜಾರಿಗೊಳಿಸಿ ಅಜ್ಜ- ಅಜ್ಜಿಗೆ ಒಂದು ಮನೆಗೆ 2400 ರೂ. ಸಿಗುವಂತೆ ಮಾಡಿದವರು ಯಡಿಯೂರಪ್ಪನವರು ಎಂದು ವಿವರಿಸಿದರು.

ರಾಮಕೃಷ್ಣ ಹೆಗಡೆಯವರ ಕಾಲದಿಂದ ವಿಧವಾ ವೇತನ 75 ರೂಪಾಯಿಯಿಂದ ಆರಂಭವಾಗಿತ್ತು. ನೀವು ಹಲವು ವರ್ಷಗಳ ಆಡಳಿತ ನಡೆಸಿದ ಬಳಿಕ ಅದು 200 ರೂಪಾಯಿಗೆ ಬಂದು ನಿಂತಿತ್ತು. ವಿಧವಾ ವೇತನ ಹೆಚ್ಚಿಸಿ 1 ಸಾವಿರ ನೀಡುತ್ತಿರುವುದು ನಮ್ಮ ಸರಕಾರ ಎಂದ ಅವರು, ಕಾಂಗ್ರೆಸ್‍ನವರು ಯಾವ ಹೆಣ್ಮಕ್ಕಳಿಗೆ 2 ಸಾವಿರ ಕೊಡುತ್ತಾರೆ? ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಕೊಡುತ್ತಾರಾ? ಎಲ್ಲರಿಗೂ ಕೊಡುತ್ತಾರಾ? ಅಥವಾ ವಿಧವೆಯರಿಗೆ ಮಾತ್ರ ಕೊಡಲಿದ್ದಾರಾ ಎಂದು ಪ್ರಶ್ನಿಸಿದರು.

2000- 2001ರಲ್ಲಿ ನಿರುದ್ಯೋಗಿ ಯುವಕರಿಗೆ 5 ಸಾವಿರ ಕೊಡುವುದಾಗಿ ಕಾಂಗ್ರೆಸ್ ಭರವಸೆ ಕೊಡಲಾಗಿತ್ತು. ಅದಕ್ಕಾಗಿ ನಾವು ಹೋರಾಟವನ್ನೂ ಮಾಡಿದ್ದೆವು. ಆದರೆ, ಅದು ಈಡೇರಲಿಲ್ಲ. ಸುಳ್ಳು ಹೇಳುವುದಕ್ಕೂ, ಮೋಸ ಮಾಡುವುದಕ್ಕೂ ಒಂದು ಮಿತಿ ಇರಲಿ ಎಂದರು.

ಇದನ್ನೂ ಓದಿ: Congress Guarantee: ಯುವಕರಿಗೆ ಕಾಂಗ್ರೆಸ್‌ನ 4 ನೇ ಗ್ಯಾರಂಟಿ: ಪದವೀಧರರಿಗೆ ʼಯುವ ನಿಧಿʼ; ಮಾಸಿಕ 3 ಸಾವಿರ ರೂ.

Exit mobile version