ಬೆಂಗಳೂರು: ಕನಕಪುರ ಆ್ಯಸಿಡ್ ದಾಳಿ ಪ್ರಕರಣದಲ್ಲಿ ಗಾಯಗೊಂಡಿದ್ದ ಬಾಲಕಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈಗಾಗಲೇ ಆರೋಪಿಯನ್ನು ಕನಕಪುರ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆ್ಯಸಿಡ್ ದಾಳಿಯಲ್ಲಿ (Acid Attack on Girl) ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಬಾಲಕಿ ಚಿಕಿತ್ಸೆ ಪಡೆಯುತ್ತಿರುವ ವಿಕ್ಟೋರಿಯಾ ಆಸ್ಪತ್ರೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಹಾಗೂ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ಶನಿವಾರ ಭೇಟಿಯಾಗಿ ಆರೋಗ್ಯವನ್ನು ವಿಚಾರಿಸಿದರು.
ನಂತರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ನಿರಂತರ ದೌರ್ಜನ್ಯ ಮುಂದುವರಿದಿದೆ. ದೆಹಲಿ ನಿರ್ಭಯಾ ಪ್ರಕರಣ ಬಳಿಕ ಕಾನೂನಿನಲ್ಲಿ ಹಲವು ಬದಲಾವಣೆ ಆಗಿದೆ. ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳಿಗೆ ಹಿಂಸೆ, ಕಿರುಕುಳ ಕೊಟ್ಟವರಿಗೂ ಗಲ್ಲು ಶಿಕ್ಷೆ ಆಗುತ್ತದೆ. ಆದರೆ ಕಾನೂನು ಕಾನೂನಾಗಿಯೇ ಉಳಿದುಕೊಳ್ಳುತ್ತಾ ಎಂದು ಎನಿಸುತ್ತಿದೆ ಎಂದು ಹೇಳಿದರು.
ಆ್ಯಸಿಡ್ ದಾಳಿ ಮಾಡುವವರಿಗೆ ಉಗ್ರ ಶಿಕ್ಷೆ ಆಗಬೇಕು. ಮೈನರ್ ರೇಪ್ ಕೇಸ್‌ನಲ್ಲಿ ಗಲ್ಲು ಶಿಕ್ಷೆ ಆಗುತ್ತದೆ. ಅದೇ ರೀತಿ ಆ್ಯಸಿಡ್ ದಾಳಿ ಮಾಡುವವರಿಗೂ ಶಿಕ್ಷೆಯಾಗಬೇಕು. ಈ ವಿದ್ಯಾರ್ಥಿನಿಗೆ ಶಿಕ್ಷಣ ಮುಂದುವರಿಸುವ ಇಚ್ಛೆ ಇದೆ. ಆದರೆ ಕನಕಪುರದಲ್ಲಿ ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರಿಸುವ ಬಗ್ಗೆ ಅವರ ತಾಯಿಯೂ ಹೇಳಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ | Road Accident: ಅತಿ ವೇಗ ತಂದ ಆಪತ್ತು; ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಕ್ಯಾಂಟರ್ ವಾಹನ ಡಿಕ್ಕಿ
ಸಂತ್ರಸ್ತೆ ಸಹೋದರ ಆ್ಯಸಿಡ್ ಎರಚಿದ್ದನ್ನು ಕಣ್ಣಾರೆ ನೋಡಿದ್ದಾನೆ. ಈ ಪ್ರಕರಣವು ಅವನ ಮನಸ್ಸಿನ ಮೇಲೂ ಗುರುತರ ಪರಿಣಾಮ ಬೀರಲಿದೆ. ಅವರಿಬ್ಬರೂ ಎಲ್ಲಿ ಶಿಕ್ಷಣ ಮುಂದುವರಿಸಬೇಕು, ಯಾವ ಹಾಸ್ಟೆಲ್ ಬೇಕು ಎಂದು ಹೇಳುತ್ತಾರೋ ಅಲ್ಲಿ ಓದಿಸಲು ಸರ್ಕಾರ ಸಿದ್ಧವಿದೆ. ಎಲ್ಲಿ ಓದಲು ಇಚ್ಛೆ ಇದೆಯೋ ಅಲ್ಲಿ ಓದಿಸುತ್ತೇವೆ ಎಂದ ಅವರು, ಬೇರೆ ಯಾರಿಗೂ ಆ್ಯಸಿಡ್ ಹಾಕುವ ಧೈರ್ಯ ಯಾರಿಗೂ ಬರಬಾರದು. ಇಂತಹ ಪ್ರಕರಣಗಳಲ್ಲಿ ಅಪರಾಧಿಗೆ ಉಗ್ರ ಶಿಕ್ಷೆ ಕೊಡಬೇಕು ಎಂದು ಹೇಳಿದರು.
ಪಾಗಲ್ ಪ್ರೇಮಿ ಬಂಧನ
ರಾಮನಗರ: ಬಾಲಕಿಯ ಮೇಲೆ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ, ಪಾಗಲ್ ಪ್ರೇಮಿ ಸುಮಂತ್‌ನನ್ನು ಪೊಲೀಸರು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ. ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ್ದ ಆರೋಪಿಯನ್ನು ಕನಕಪುರ ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕನಕಪುರ ತಾಲೂಕಿನ ಗಡಿ ಗ್ರಾಮದಲ್ಲಿ ಅವಿತು ಕುಳಿತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯ ವಿಚಾರಣೆ ನಡೆಯುತ್ತಿದೆ: ಕಾರ್ತಿಕ್ ರೆಡ್ಡಿ
ರಾಮನಗರ: ಬಾಲಕಿ ಮೇಲೆ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ಸುಮಂತ್‌ನನ್ನು ಈಗಾಗಲೇ ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಕನಕಪುರ ಬೈಪಾಸ್ ರಸ್ತೆ ಬಳಿ ಬಾಲಕಿ ಮೇಲೆ ಯುವಕ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ. ಬಳಿಕ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Lovers Suicide: ಪ್ರಿಯಕರನ ಬಿಟ್ಟಿರಲಾಗದೆ ಆತನ ಜತೆಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಈ ಹಿಂದಿನಿಂದಲೂ ಯುವಕ ಬಾಲಕಿಯನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಆದರೆ ಬಾಲಕಿ ಈತನ ಪ್ರೀತಿಯನ್ನು ನಿರಾಕರಣೆ ಮಾಡಿದ್ದಳು. ಹೀಗಾಗಿ ಶುಕ್ರವಾರ ಸಂಜೆ ಕನಕಪುರ ಬೈಪಾಸ್ ರಸ್ತೆ ಬಳಿಗೆ ಕರೆಸಿ, ತನ್ನ ಪ್ರೀತಿ ಒಪ್ಪಿಕೊಳ್ಳುವಂತೆ ಒತ್ತಾಯ ಮಾಡಿದ್ದಾನೆ. ಆದರೆ, ಯುವತಿ ಮತ್ತೆ ಇದಕ್ಕೆ ಒಪ್ಪದಿದ್ದಾಗ ಆ್ಯಸಿಡ್ ಹಾಕಿ ಎಸ್ಕೇಪ್ ಆಗಿದ್ದಾನೆ. ತಕ್ಷಣ ಈ ಬಗ್ಗೆ ಕನಕಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಸುಮಂತ್ (22)ನನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಸೆಕ್ಷನ್ 326 ಹಾಗೂ ಪೋಕ್ಸೊ ಪ್ರಕರಣ ದಾಖಲಾಗಿದೆ. ಸದ್ಯ ಬಾಲಕಿಗೆ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆಕೆ ಚೇತರಿಸಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.