Site icon Vistara News

Shootout In Bangalore | ಬೆಂಗಳೂರು ಹೊರವಲಯದಲ್ಲಿ ಗುಂಡಿನ ಸದ್ದು; ಬೈಕ್‌ನಲ್ಲಿ ಬಂದು ಶೂಟ್‌ ಮಾಡಿದರು!

Shootout In Bangalore

ಬೆಂಗಳೂರು: ನಗರದ ಕೆ.ಆರ್‌.ಪುರಂನ ಸೀಗೆಹಳ್ಳಿ ಬಳಿಯ ಹ್ಯಾಸ್ಯಗಾರ್ಡನ್ ಬಳಿ ಬಿಲ್ಡರ್ ಮತ್ತು ಕಟ್ಟಡ ಮಾಲೀಕನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ (Shootout In Bangalore) ನಡೆಸಿದ್ದಾರೆ. ಬಿಲ್ಡರ್ ಅಶೋಕ್‌ ರೆಡ್ಡಿ ಎಂಬಾತನಿಗೆ ಒಂದು ಗುಂಡು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರೆ, ಮತ್ತೊಬ್ಬ ಶಿವಶಂಕರ್ ರೆಡ್ಡಿ ಎಂಬಾತನ‌ ಮೇಲೆ ನಾಲ್ಕೈದು ಬಾರಿ ಗುಂಡಿನ‌ ದಾಳಿ ನಡೆಸಲಾಗಿದೆ.

ಮದನಪಲ್ಲಿಯ ರೌಡಿಶೀಟರ್ ಶಿವಶಂಕರ್ ರೆಡ್ಡಿ ಹಾಗೂ ಅಶೋಕ್ ರೆಡ್ಡಿ

ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುರುವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಕೆ.ಆರ್.ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುಂಡಿನ ದಾಳಿಗೆ ಒಳಗಾದವರು ಮೂಲತಃ ಆಂಧ್ರ ಪ್ರದೇಶದವರೆಂದು ತಿಳಿದು ಬಂದಿದ್ದು, ಗುಂಡೇಟಿನಿಂದ ಗಾಯಗೊಂಡವರ ಪೈಕಿ ಶಿವಶಂಕರ್ ರೆಡ್ಡಿ ರೌಡಿಶೀಟರ್ ಆಗಿದ್ದಾನೆ. ಮೂಲತಃ ಮದನಪಲ್ಲಿಯವನಾಗಿದ್ದು, ಹಳೇ ದ್ವೇಷದ ಹಿನ್ನೆಲೆ ಈತನ ಮೇಲೆ ಹತ್ಯೆಗೆ ಯತ್ನಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಶಿವಶಂಕರ್ ರೆಡ್ಡಿ ಕೆ.ಆರ್.ಪುರಂನ ಸೀಗೇಹಳ್ಳಿ ಬಳಿ ಸ್ವಂತ ಕಟ್ಟಡ ನಿರ್ಮಾಣ ಮಾಡಿಸುತ್ತಿದ್ದು, ಕಟ್ಟಡದ ನಿರ್ಮಾಣದ ಗುತ್ತಿಗೆಯನ್ನು ಅಶೋಕ್‌ ರೆಡ್ಡಿ ಪಡೆದಿದ್ದರು. ಆಂಧ್ರ ಮೂಲದ ದುಷ್ಕರ್ಮಿಗಳಿಂದಲೇ ಹತ್ಯೆಗೆ ಯತ್ನಿಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

ಘಟನೆಯ ಬಗ್ಗೆ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ಮಾಹಿತಿ ಪಡೆದಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿದೆ. ಎರಡು ಪಲ್ಸರ್ ಬೈಕ್‌ಗಳಲ್ಲಿ ಬಂದ ನಾಲ್ವರು ಗುಂಡಿನ ದಾಳಿ ನಡೆಸಿದ್ದು, ಪರಾರಿಯಾಗಿರುವ ಸಿಸಿ ಕ್ಯಾಮೆರಾದ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿದೆ. ಸಿಸಿ ಕ್ಯಾಮರಾಗಳ ದೃಶ್ಯ ಆಧರಿಸಿ ದುಷ್ಕರ್ಮಿಗಳ ಚಹರೆ ಪತ್ತೆಗೆ ಖಾಕಿ ಪಡೆ ಮುಂದಾಗಿದೆ. ನಗರದ ಹೊರವಲಯದಲ್ಲಿ ನಾಕಾ ಬಂದಿ ಹಾಕಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಇತ್ತ ಗುಂಡಿನ ದಾಳಿಗೆ ಒಳಗಾಗಿರುವ ಇಬ್ಬರಲ್ಲಿ ಶಿವಶಂಕರ್ ರೆಡ್ಡಿ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Suicide Case | ಅಂತ್ಯಸಂಸ್ಕಾರಕ್ಕೆ ಶಾಸಕ ಗುಬ್ಬಿ ಶ್ರೀನಿವಾಸ್ ಬರಬೇಕು; ಡೆತ್‌ ನೋಟ್ ಬರೆದು ಯುವಕ‌ ಆತ್ಮಹತ್ಯೆ

Exit mobile version