ಕಾರವಾರ: ಗುಜರಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲೂ ಬೆಂಕಿ ಜ್ವಾಲೆ ಆವರಿಸಿ (Shop gutted in fire) ಆತಂಕ ಸೃಷ್ಟಿಸಿದ ಘಟನೆ ಕುಮಟಾ ತಾಲ್ಲೂಕಿನ ಅಳ್ವೆಕೋಡಿಯಲ್ಲಿ ನಡೆದಿದೆ.
ಭಾಷಾ ಶೇಕ್ ಎನ್ನುವವರಿಗೆ ಸೇರಿದ ಅಂಗಡಿ ಇದಾಗಿದ್ದು, ಬೆಳಗಿನ ಜಾವದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳಕ್ಕೆ ಬೆಂಕಿ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿದ್ದರಿಂದಾಗಿ ನಿಯಂತ್ರಿಸುವುದು ಅಸಾಧ್ಯವಾಗಿದೆ.
ಈ ಹಿನ್ನಲೆ ಬೆಂಕಿ ನಂದಿಸಲು ಹೊನ್ನಾವರ, ಅಂಕೋಲಾ, ಭಟ್ಕಳ ಹಾಗೂ ಕಾರವಾರದ ಅಗ್ನಿಶಾಮಕ ದಳದವರು ಆಗಮಿಸಿ ಸತತವಾಗಿ ಮೂರ್ನಾಲ್ಕು ತಾಸುಗಳ ಕಾಲ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಆದರೆ ಬೆಂಕಿಯು ಗುಜರಿ ಅಂಗಡಿ ಪೂರ್ಣ ವ್ಯಾಪಿಸಿಕೊಂಡಿದ್ದರಿಂದ ನೆರೆಯ ಮನೆಗಳ ನಿವಾಸಿಗಳಿಗೆ ತಮ್ಮ ಮನೆಗಳಿಗೂ ಬೆಂಕಿ ವ್ಯಾಪಿಸುವ ಆತಂಕ ಎದುರಾಗಿದೆ.
ಸ್ಥಳೀಯರು ಕೂಡ ತಮ್ಮ ತಮ್ಮ ಮನೆಯಿಂದ ನೀರು ತಂದು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಗುಜರಿ ಗೋಡೌನ್‌ನಲ್ಲಿ ಭಾರಿ ಪ್ರಮಾಣದಲ್ಲಿ ಕಚ್ಚಾವಸ್ತುಗಳನ ಸಂಗ್ರಹಿಸಿದ್ದರಿಂದ ಬೆಂಕಿ ಅವುಗಳಿಗೆ ಹಬ್ಬಿದ್ದು, ಕಾಡ್ಗಿಚ್ಚಿನಂತೆ ಗೋದಾಮು ತುಂಬಾ ವ್ಯಾಪಿಸಿದೆ.
ಸದ್ಯ ಬೆಂಕಿ ನಂದಿಸುವ ಕಾರ್ಯ ಮುನ್ನಡೆದಿದ್ದು, ಬೆಂಕಿ ಹತೋಟಿಗೆ ಬರುತ್ತಿದೆ ಎನ್ನಲಾಗಿದೆ. ಹಾನಿಯ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲವಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಹಾನಿಯ ಕುರಿತು ತಿಳಿದುಬರಲಿದೆ.
ಇದನ್ನೂ ಓದಿ | Vehicle Burnt : ತುಮಕೂರು ಬಳಿ ಹೊತ್ತಿ ಉರಿದ ಗೂಡ್ಸ್ ವಾಹನ, ದಿನಸಿ ಪದಾರ್ಥಗಳೆಲ್ಲ ಸುಟ್ಟು ಕರಕಲು