ಬೆಂಗಳೂರು: ಅನೇಕ ದಿನಗಳಿಂದ ಗೊಂದಲಕ್ಕೆ ಕಾರಣವಾಗಿರುವ ಚಾಮರಾಜಪೇಟೆ ಮೈದಾನ ಹಕ್ಕನ್ನು ಸಂಪೂರ್ಣವಾಗಿ ಬಿಬಿಎಂಪಿ ಸುಪರ್ದಿಗೆ ಪಡೆಯಬೇಕು ಎಂಬ ಕಾರಣಕ್ಕೆ ಚಾಮರಾಜಪೇಟೆ ನಾಗರಿಕರ ಸಮಿತಿ ಮಂಗಳವಾರ ನೀಡಿರುವ ಬಂದ್‌ಗೆ ಅನೇಕ ಕಡೆಗಳನ್ನು ಬೆಂಬಲ ವ್ಯಕ್ತವಾಗುತ್ತಿದೆ.
ಜುಲೈ 12ರಂದು ಬಂದ್ ಆಚರಿಸುವುದರ ಮೂಲಕ, ಮೈದಾನವನ್ನು ಈದ್ಗಾ ಮೈದಾನದ ಬದಲಿಗೆ ಎಲ್ಲ ಕಡೆಗಳಲ್ಲಿ ಇರುವಂತೆ ಬಿಬಿಎಂಪಿ ಮೈದಾನ ಎಂಬಂತೆ ನಿರ್ವಹಣೆ ಮಾಡಬೇಕು ಎನ್ನುವುದು, ಬಂದ್‌ಗೆ ಕರೆ ನೀಡಿರುವವರ ಬೇಡಿಕೆ.
ಭಾನುವಾರ ಬಕ್ರೀದ್ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಾಮೂಹಿಕ ಪ್ರಾರ್ಥನೆ ನಡೆದಿದೆ. ಸುಮಾರು 500 ಪೊಲೀಸರ ಬಿಗಿ ಭದ್ರತೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಸ್ಥಳೀಯ ಶಾಸಕ ಬಿ.ಜಡ್. ಜಮೀರ್ ಅಹ್ಮದ್ ಖಾನ್ ಉಪಸ್ಥಿತಿಯಲ್ಲಿ ಪ್ರಾರ್ಥನೆ ಶಾಂತಿಯುತವಾಗಿ ನಡೆಯಿತು.
ಬಕ್ರೀದ್ ಕಳೆಯುತ್ತಿದ್ದಂತೆಯೇ ಇದೀಗ ಬಂದ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ʻಚಾಮರಾಜಪೇಟೆ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲ ಇದೆ: ಚಾಮರಾಜಪೇಟೆ ಆಟದ ಮೈದಾನ-ಬಿಬಿಎಂಪಿ ಸ್ವತ್ತಾಗಬೇಕುʼ ಎಂಬ ಪೋಸ್ಟರ್‌ಗಳನ್ನು ಅನೇಕ ಅಂಗಡಿ ಮುಂಗಟ್ಟುಗಳ ಮೇಲೆ ಅಂಟಿಸಿಕೊಳ್ಳಲಾಗಿದೆ. ಈ ಮೂಲಕ, ಮಂಗಳವಾರದ ಬಂದ್‌ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Eidgah | ಜುಲೈ 12ರಂದು ಚಾಮರಾಜಪೇಟೆ ಬಂದ್ ನಿಶ್ಚಿತ
ಮೈದಾನವು ವಕ್ಫ್ ಆಸ್ತಿ ಎಂದು ಶಾಸಕ ಜಮೀರ್ ಅಹ್ಮದ್ ತಿಳಿಸಿದರೆ, ಇದು ಬಿಬಿಎಂಪಿ ಸ್ವತ್ತು ಎಂದು ಪ್ರತಿಭಟನಾಕಾರರು ವಾದಿಸುತ್ತಾರೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳು ಆಗಿಂದಾಗ್ಗೆ ನೀಡಿದ ಗೊಂದಲಕರ ಹೇಳಿಕೆಗಳೂ ವಿವಾದ ಮುಂದುವರಿಯಲು ಕಾರಣವಾಗಿದೆ ಎನ್ನುವುದು ಎರಡೂ ಕಡೆಯ ವಾದ.
ಬಂದ್‌ಗೆ ಯಾರೂ ಬೆಂಬಲ ನೀಡುಬವುದಿಲ್ಲ, ಬಂದ್ ಆಚರಿಸುವವರು ಚಾಮರಾಜಪೇಟೆಯವರೇ ಅಲ್ಲ ಎಂದು ಶಾಸಕ ಜಮೀರ್ ಇತ್ತೀಚೆಗೆ ಸಭೆಯಲ್ಲಿ ತಿಳಿಸಿದ್ದರು. ಆದರೆ ಇದನ್ನು ಅಲ್ಲಗಳೆದಿದ್ದ ಪ್ರತಿಭಟನಾಕಾರರು, ಬಂದ್ ನಡೆಯುವುದು ಶತಃಸಿದ್ಧ ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಕರೆ ನೀಡಿರುವ ಬಂದ್ ಕುರಿತು ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನದಲ್ಲಿ ತ್ರಿವರ್ಣ ಧ್ವಜಾರೋಹಣ: ಶಾಸಕ ಜಮೀರ್ ಅಹ್ಮದ್