ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಸತತ 2 ಬಾರಿ ಗೆದ್ದು, ನಾಗಾಲೋಟವನ್ನು ಮುಂದುವರಿಸಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ವಿರೋಧ ಪಕ್ಷಗಳು ಒಂದಾಗಿವೆ. ಇದರ ಫಲವಾಗಿ ಮಹಾಘಟಬಂಧನ್ (Mahagathbandhan) ಅಡಿ “ಇಂಡಿಯಾ” ಒಕ್ಕೂಟವನ್ನು (INDIA Alliance) ರಚಿಸಿಕೊಂಡು ಸ್ಪಷ್ಟ ಸಂದೇಶವನ್ನು ರವಾನೆ ಮಾಡಿವೆ. ಆದರೆ, ಈ ಮೈತ್ರಿಕೂಟವನ್ನು ಮೋದಿ ಅವರು ಈಸ್ಟ್ ಇಂಡಿಯಾ ಕಂಪನಿ (East India Company) ಮತ್ತು ಇಂಡಿಯನ್ ಮುಜಾಹಿದ್ದೀನ್‌ಗೆ (Indian Mujahideen) ಹೋಲಿಕೆ ಮಾಡಿದ್ದರು. ಇದೀಗ ವ್ಯಾಪಕ ಟೀಕೆಗೂ ಗುರಿಯಾಗಿದೆ. ಈ ನಡುವೆ, ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಟ್ವೀಟ್ ಮಾಡಿದ್ದು, ದೇಶ ಬಿಟ್ಟು ಓಡಿ ಹೋಗಿರುವ ನೀರವ್ ಮೋದಿ ಮತ್ತು ಲಲಿತ್ ಮೋದಿ ಅವರನ್ನು ನಿಮಗೆ ಹೋಲಿಸಬಹುದಾ? ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು “ಇಂಡಿಯಾ” ಮೈತ್ರಿಕೂಟದ ವಿರುದ್ಧವಾಗಿ ಆಡಿದ ಮಾತುಗಳಿಗೆ ಸಿದ್ದರಾಮಯ್ಯ ಸರಣಿ ಟ್ವೀಟ್‌ಗಳ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
ಇದನ್ನೂ ಓದಿ: D ಕೋಡ್ ಅಂಕಣ: ಸಂವಿಧಾನದಲ್ಲಿ ಇಲ್ಲದ ಹುದ್ದೆಗೆ ಮೂವತ್ತೂವರೆ ವರ್ಷದ ಸಂಭ್ರಮ!
ಸಿದ್ದರಾಮಯ್ಯ ಟ್ವೀಟ್‌ನಲ್ಲೇನಿದೆ?
ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ವನ್ನು ಈಸ್ಟ್ ಇಂಡಿಯಾ ಕಂಪೆನಿ ಮತ್ತು ಇಂಡಿಯನ್ ಮುಜಾಹಿದ್ದೀನ್‌ಗೆ ಹೋಲಿಸಿರುವ ಸನ್ಮಾನ ಪ್ರಧಾನಿ ನರೇಂದ್ರ ಮೋದಿ ಅವರೇ, ಭಾರತೀಯರ ನೂರಾರು ಕೋಟಿ ತೆರಿಗೆ ಹಣವನ್ನು ಲೂಟಿ ಮಾಡಿ ದೇಶ ಬಿಟ್ಟು ಓಡಿಹೋಗಿರುವ ನೀರವ್ ಮೋದಿ ಮತ್ತು ಲಲಿತ್ ಮೋದಿ ಅವರ ಹೆಸರಿನಲ್ಲಿಯೂ ನಿಮ್ಮ ಹೆಸರಿನ ಮೋದಿ ಇದೆಯಲ್ಲಾ? ಅವರನ್ನು ನಿಮ್ಮ ಜತೆ ಹೋಲಿಸಬಹುದಾ?
ಲಲಿತ್ ಮತ್ತು ನೀರವ್ ಹೆಸರಲ್ಲಿಯೂ ಮೋದಿ ಇದೆಯಲ್ಲ ಎಂಬ ಸಾಮಾನ್ಯ ಪ್ರಶ್ನೆ ಕೇಳಿದ @RahulGandhi ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ, ಎರಡು ವರ್ಷ ಜೈಲು ಶಿಕ್ಷೆ ನೀಡಿ, ಲೋಕಸಭೆಯಿಂದ ಅನರ್ಹಗೊಳಿಸಲಾಯಿತು. ಈಗ ಇಂಡಿಯಾವನ್ನು ಈಸ್ಟ್ ಇಂಡಿಯಾ ಕಂಪನಿ ಮತ್ತು ಇಂಡಿಯನ್ ಮುಜಾಹಿದ್ದೀನ್‌ಗೆ ಹೋಲಿಸಿರುವ ನಿಮ್ಮ ಹೋಲಿಕೆಗೆ ರಾಹುಲ್ ಗಾಂಧಿಯವರ ವಿರುದ್ಧದ ಕ್ರಮ ಅನ್ವಯವಾಗುವುದಿಲ್ಲವೇ?
ಪ್ರಧಾನಿ ನರೇಂದ್ರ ಮೋದಿ ಅವರೇ, ಇಂಡಿಯಾ ಎಂಬ ಸುಂದರ, ಸುಮಧುರ ಮತ್ತು ಪವಿತ್ರ ಹೆಸರಿನ ಬಗ್ಗೆ ನಿಮಗೆ ಯಾಕೆ ಇಷ್ಟೊಂದು ದ್ವೇಷ?
ಇಂಡಿಯಾ ಹೆಸರಿನ ಬಗ್ಗೆ ಇಷ್ಟೊಂದು ಅಸಹನೆ ಹೊಂದಿರುವ ನೀವು ನಿಮ್ಮದೇ ಸರ್ಕಾರದ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮೊದಲಾದ ಕಾರ್ಯಕ್ರಮಗಳ ಹೆಸರನ್ನೂ ಬದಲಾಯಿಸುವಿರಾ? ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Lok Sabha Election 2024 : ಬಿಜೆಪಿಯಿಂದ ಹೊರಗೆ ಕಾಲಿಟ್ಟರೇ ಸುಮಲತಾ?
ನಿಮ್ಮ ಯೋಜನೆಗಳಲ್ಲಿ ಇರುವ “ಇಂಡಿಯಾ”ವನ್ನು ಬದಲಿಸುವಿರಾ?
ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನೀವು ಹೆಸರನ್ನು ಇಡುವುದಾದರೆ, ಮೈತ್ರಿಕೂಟಕ್ಕೆ ಯಾಕೆ ಇಟ್ಟುಕೊಳ್ಳಬಾರದು ಎಂಬರ್ಥದಲ್ಲಿ ಪ್ರಶ್ನೆ ಮಾಡಿದ್ದಾರೆ.