Site icon Vistara News

Congress Guarantee: ಅಕ್ಕಿಗೆ ಕಲ್ಲು ಹಾಕಿದ್ದು ಕೇಂದ್ರ ಸರ್ಕಾರ ಎಂದ ಸಿದ್ದರಾಮಯ್ಯ: 10 ಕೆ.ಜಿ.ಗೆ ದುಡ್ಡು ಕೊಡಿ ಎಂದ ಬಿಜೆಪಿ

Siddaramaiah annabhagya scheme

ಬೆಂಗಳೂರು: ಅಕ್ಕಿ ದಾಸ್ತಾನಿದ್ದರೂ ಅದನ್ನು ಕರ್ನಾಟಕಕ್ಕೆ ನೀಡಲು ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರ ನಮ್ಮ ಯೋಜನೆಗೆ ಕಲ್ಲು ಹಾಕುವ ನಿರ್ಧಾರ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಗ್ಯಾರಂಟಿಯಲ್ಲಿ (Congress Guarantee) ಘೋಷಿಸಿದ್ದ ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ 5 ಕೆ.ಜಿ. ಅಕ್ಕಿಗೆ ಬದಲಿಗೆ ತಲಾ 34 ರೂ.ನಂತೆ ಖಾತೆಗೆ ಹಣ ನೀಡುವ ಸಂಪುಟ ನಿರ್ಧಾರದ ಬಳಿಕ ಮಾಧ್ಯಮಗಳ ಜತೆಗೆ ಸಿದ್ದರಾಮಯ್ಯ ಮಾತನಾಡಿದರು.

ಕೇಂದ್ರ ಸರ್ಕಾರ ನಾವು ಹಣ ಕೊಡ್ತೀವಿ ಎಂದರೂ ಅಕ್ಕಿ ಕೊಟ್ಟಿಲ್ಲ. ಕೊಡುತ್ತೇವೆ ಎಂದು ಒಪ್ಪಿಕೊಂಡು ಈಗ ಕೊಡುತ್ತಾ ಇಲ್ಲ. ದಾಸ್ತಾನು ಇಲ್ಲ ಎಂದರೆ ಓಕೆ. ಆದರೆ ದಾಸ್ತಾನು ಇದೆ. ಚೌಕಾಸಿ ಕೂಡಾ ಮಾಡುತ್ತಾ ಇಲ್ಲ ನಾವು. ರಾಜಕೀಯ, ದ್ವೇಷದ ರಾಜಕೀಯ ಮಾಡುತ್ತಾ ಇದೆ ಕೇಂದ್ರ ಸರ್ಕಾರ.

ಅಕ್ಕಿಯನ್ನ ಹರಾಜಿನ ಮೂಲಕ ಮಾರಾಟ ಮಾಡುತ್ತಾ ಇದ್ದಾರೆ. ಆದರೆ ರಾಜ್ಯ ಸರ್ಕಾರಗಳಿಗೆ ಕೊಡುವಂತಿಲ್ಲವಂತೆ. ಇದು ನಮ್ಮ ಯೋಜನೆಗೆ ಕಲ್ಲು ಹಾಕುವ ಕೆಲಸ. ಅಕ್ಕಿ ಇಟ್ಟುಕೊಂಡು ಕೊಡುತ್ತಿಲ್ಲ ಇವರು. ಬಡವರ ಕಾರ್ಯಕ್ರಮ ಎನ್ನುವ ಕಾರಣಕ್ಕೆ ಬಿಜೆಪಿಯವರು ಹೋಗಿ ಹೇಳಿ ಈ ರೀತಿ ಮಾಡಿಸಿದ್ದಾರೆ. ಈ ಬಗ್ಗೆ ನಾನು ಅಮಿತ್‌ ಶಾ ಅವರನ್ನೂ ಭೇಟಿ ಮಾಡಿದ್ದೆ. ಪೀಯೂಷ್‌ ಗೋಯೆಲ್‌ ಅವರನ್ನೂ ಭೇಟಿ ಮಾಡಿದ್ದೆ. ಆದರೆ ಬಿಜೆಪಿಯವರ ಒತ್ತಡ ಹೇರುತ್ತಿಲ್ಲ ಎಂದರು.

ಸಿಎಂ ಕಛೇರಿಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರ ಕಾಲದಲ್ಲಿ ನಡೆದಿರುವುದನ್ನು ನೆನಪು ಮಾಡಿಕೊಂಡು ಇವಾಗ ಹೇಳುತ್ತಿದ್ದಾರೆ ಎಂದರು.

ಜಿಎಸ್‌ಟಿ ತಿದ್ದುಪಡಿ ಭಾಗಶಃ ತಿರಸ್ಕಾರ
ಜಿಎಸ್ಟಿ ಕೌನ್ಸಿಲ್‌ನಿಂದ ಜಿಎಸ್‌ಟಿ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ಸೂಚಿಸಲಾಗಿತ್ತು. ಇದರಲ್ಲಿ ಕೆಲವನ್ನು ಒಪ್ಪಲಾಗಿದ್ದು, ಇನ್ನು ಕೆಲವನ್ನು ತಿರಸ್ಕರಿಸಲಾಗಿದೆ ಎಂದು ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು. ಸಂಪುಟ ಸಭೆ ನಂತರ ಮಾಧ್ಯಮಗಳಿಗೆ ಮಾತನಾಡಿದ ಎಚ್‌.ಕೆ. ಪಾಟೀಲ್‌, ಎರಡು ತಿದ್ದುಪಡಿಗಳನ್ನು ನಾವು ರಾಜ್ಯ ಸರ್ಕಾರ ಒಪ್ಪಿಕೊಂಡಿಲ್ಲ. ಸರಕು ಸೇವೆ ತೆರಿಗೆ ಪದ್ದತಿಯ ಕೆಲವು ತಿದ್ದುಪಡಿ ಮಾತ್ರ ಒಪ್ಪಿಕೊಂಡಿದ್ದೇವೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಮರು ಪ್ರಸ್ತಾಪ ಆಗಿ ಚರ್ಚೆಗೆ ಬರುತ್ತದೆ. ಇದನ್ನು ಬರುವ ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ ಎಂದರು.

ಮಹಿಳೆಯರಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆ ಜುಲೈ 14 ರಿಂದ ಆರಂಭ ಮಾಡಲು ಸಂಪುಟದಲ್ಲಿ ಚರ್ಚೆಯಾಗಿದೆ ಎಂದು ಎಚ್. ಕೆ. ಪಾಟೀಲ್ ತಿಳಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಕ್ರಮಗಳ ಬಗ್ಗೆ ಮುಂದಿನ ಕ್ಯಾಬಿನೆಟ್‌ನಲ್ಲಿ ನಿರ್ಧಾರ ಮಾಡುತ್ತೇವೆ. ಕಾವೇರಿ, ಕೃಷ್ಣಾ ನ್ಯಾಯಧಿಕರಣಗಳ ತೀರ್ಪು ಅನುಷ್ಠಾನ ಮಾಡಲು ಸಿಎಂಗೆ ಪರಮಾಧಿಕಾರ ನೀಡಲಾಗಿದೆ. ಅನೇಕಲ್ ಪಟ್ಟಣದ ಚಂದಾಪುರ ಒಳ ಚರಂಡಿ ನಿರ್ಮಾಕ್ಕೆ 1,600 ಕೋಟಿ ರೂ. ಬಿಡುಗಡೆಗೆ ನಿರ್ಧಾರ ಮಾಡಲಾಗಿದೆ ಎಂದರು.

‌ಅಕ್ಕಿ ಅಭಿಯಾನ ಎಂದ ಬಿಜೆಪಿ
ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಸಿದ್ರಾಮಣ್ಣ ಸರ್ಕಾರ ವಚನಭ್ರಷ್ಟ ಸರ್ಕಾರ. ಇವತ್ತು ಅಕ್ಕಿ ಕೊಡಲಾಗದೆ ಸರ್ಕಾರ ಪರದಾಡುತ್ತಿದೆ. ಐದು ಕೆ.ಜಿ. ಅಕ್ಕಿಯ ಹಣ ನೀಡುತ್ತೇವೆ ಎಂದಿದ್ದಾರೆ. ಹತ್ತು ಕೆ.ಜಿ. ಅಕ್ಕಿ ನೀಡುತ್ತೇವೆ ಎಂದಿದ್ದರು. ಹಣ ನೀಡಿ ಎಂದಾಗ, ಹಣವನ್ನು ತಿನ್ನುವುದಕ್ಕೆ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಇವತ್ತು ಹಣ ನೀಡಲು ಒಪ್ಪಿದ್ದಾರೆ. ನೀವು ಹೇಳಿದಂತೆ ಹತ್ತು ಕೆ.ಜಿ. ಅಕ್ಕಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ವಿಧಾನಸಭೆ ಒಳಗೆ ಹಾಗೂ ಹೊರಗೆ ನಮ್ಮ ಹೋರಾಟ ನಡೆಯುತ್ತದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಮಾತನಾಡಿ, ಇದು ನೈತಿಕತೆ ಇಲ್ಲದ ಸರ್ಕಾರ. ಸಿದ್ದರಾಮಯ್ಯ ಮಾತು ತಪ್ಪಿದ್ದಾರೆ. ತಲಾ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದಿರಿ. ನೀವು ಈಗ ಜನಕ್ಕೆ ಮೋಸ ಮಾಡಿದ್ದೀರಿ. ಹಣ ತಿನ್ನೋಕೆ ಆಗಲ್ಲ ಅಕ್ಕಿ ಕೊಡುತ್ತೇವೆ ಎಂದಿದ್ದಿರಿ. ಈಗ ಕೊಡಪ್ಪ ಅಕ್ಕಿನ… ನಾವು ಈ ವಿಚಾರವಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಅಕ್ಕಿ ಅಭಿಯಾನ ಕೂಡ ಮಾಡುತ್ತೇವೆ. ಯಡಿಯೂರಪ್ಪನವರ ನೈತಿಕತೆ ಪ್ರಶ್ನೆ ಮಾಡುವ ನಿಮಗೆ ಯಾವ ನೈತಿಕತೆ ಇದೆ? ನಾವು ಈ ನೈತಿಕತೆ ಇಟ್ಟುಕೊಂಡೇ ಹೋರಾಟ ಮಾಡುತ್ತೇವೆ ಎಂದರು.

ಇದನ್ನೂ ಓದಿ: Congress Guarantee: ಅಕ್ಕಿ ಆಸೆ ಕೈಬಿಟ್ಟ ಸರ್ಕಾರ!: ಚೀಲಕ್ಕೆ 5 ಕೆ.ಜಿ. ಅಕ್ಕಿ ಬದಲಿಗೆ ಖಾತೆಗೆ 170 ರೂ. ನೀಡಲು ನಿರ್ಧಾರ

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಮಾತನಾಡಿ, ಎಳೆಯಲಾಗದ ಎತ್ತು ಮೆಳೆ ಮೇಲೆ ಬಿತ್ತಂತೆ ಎಂದು ಗಾದೆ ಇದೆ. ಸಿದ್ದರಾಮಯ್ಯನ ಕಥೆ ಹೀಗೆಯೇ ಆಗಿದೆ. ಅಕ್ಕಿಗೆ ದುಡ್ಡು ಕೊಡುವುದೇ ಆದರೆ ಐದು ಕೆ.ಜಿ.ಗೆ ಕೊಡ್ತಾರಾ..? ಹತ್ತು ಕೆಜಿ ಅಕ್ಕಿಗೆ ದುಡ್ಡು ಕೊಡ್ತಾರಾ..? ಇವರು ಹೇಳಿದ್ದು ಹತ್ತು ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು. ದುಡ್ಡನ್ನು 10 ಕೆ.ಜಿ. ಕೊಡಬೇಕು‌.

ಇವರು ದೋಖಾ ಮಾಡಿದ್ದಾರೆ. ಜನರಿಗೆ ಟೋಪಿ ಹಾಕಿದ್ದಾರೆ. ಎಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಅವರಿಗೆ ಏನು ಮಾಡ್ತೀರಿ.? ಕೇಂದ್ರ ಅಂತ್ಯೋದಯ ಕಾರ್ಡ್‌ದಾರರಿಗೆ 35 ಕೆ.ಜಿ. ಅಕ್ಕಿ ಕೊಡುತ್ತಾ ಇದೆ. 5 ಕೆ.ಜಿ. ಕೂಡ ಕೇಂದ್ರ ಸರ್ಕಾರ ಕೊಡುತ್ತಾ ಇದೆ. ಒಂದಕ್ಕೆ ಒಂದು ಫ್ರೀ ಅಂತ ಹೇಳಿ ಎರಡನ್ನೂ ಸೇರಿರಿ ಒಂದರಿಂದಲೇ ಹಣ ತೆಗೆದುಕೊಳ್ಳುವಂತೆ ಕಾಂಗ್ರೆಸ್‌ ಮಾಡುತ್ತಿದೆ ಎಂದಿದ್ದಾರೆ.

Exit mobile version