ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಮನೆಗಳು ಬಿದ್ದಿವೆ. ೧೩ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಕಾಂಗ್ರೆಸ್‌ನವರು ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಮೈಮರೆತಿದ್ದಾರೆ: ಹೀಗೆಂದು ಟೀಕೆ ಮಾಡಿದ್ದಾರೆ ಬಿಜೆಪಿ ವಕ್ತಾರ ಎನ್. ರವಿಕುಮಾರ್.
ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸರಕಾರದ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದೇವೆ. ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸಹಾಯ ಮಾಡಲು ಸರ್ವ ಯತ್ನ ನಡೆಸುತ್ತಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಭಟ್ಕಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಲಿದ್ದಾರೆ ಎಂದರು.
೧೩ ಜನರ ಸಾವಿನ ಸಂಕಟ ಮತ್ತು ಸಾವಿರಾರು ಜನರು ನೋವಿನಲ್ಲಿರುವ ಈ ಕಾಲದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಗಮಿಸುತ್ತಿದ್ದಾರೆ. ಆದರೆ, ಅವರು ಬಂದಿರುವುದು ಸಿದ್ದರಾಮಯ್ಯ ಅವರ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲು. ಹುಟ್ಟುಹಬ್ಬ ಮಾಡಲಿ ನಾನೂ ಶುಭ ಕೋರುತ್ತೇನೆ. ಅದರೆ, ರಾಜ್ಯದಲ್ಲಿ ಈಗ ಸೂತಕದ ವಾತಾವರಣ ಇದೆ. ಈ ಸಂದರ್ಭದಲ್ಲಿ ಸಂಭ್ರಮ ಬೇಕಿತ್ತಾ ಎಂದು ರವಿಕುಮಾರ್ ಪ್ರಶ್ನಿಸಿದರು.
ನಾವು ಬಿಜೆಪಿ ಸರಕಾರದ ಮೂರನೇ ವರ್ಷ ಮತ್ತು ಬೊಮ್ಮಾಯಿ ಸರಕಾರದ ಒಂದು ವರ್ಷದ ಸಂಭ್ರಮಾಚರಣೆಗೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಆಯೋಜಿಸಿದ್ದೆವು. ಆದರೆ, ಮಂಗಳೂರಿನಲ್ಲಿ ನಡೆದ ಘಟನೆಗಳ ಬಳಿಕ ಮಧ್ಯ ರಾತ್ರಿ ಸುದ್ದಿಗೋಷ್ಟಿ ಕರೆದು ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದೆವು ಎಂದು ನೆನಪು ಮಾಡಿಕೊಂಡರು. ಈ ಹೊತ್ತಲ್ಲಿ ರಾಹುಲ್ ಗಾಂಧಿ ಅವರನ್ನು ಕರೆಸಿಕೊಂಡು ಈ ಸಂಭ್ರಮಾಚರಣೆ ಮಾಡೋದು ಬೇಕಿತ್ತಾ ಎನ್ನುವುದನ್ನು ಅವರೇ ಯೋಚಿಸಲಿ ಎಂದು ಎನ್ ರವಿ ಕುಮಾರ್ ಹೇಳಿದರು.
ಲಾಭ ಏನೂ ಇಲ್ಲ
ಈ ಕಾರ್ಯಕ್ರಮದಿಂದ ಕಾಂಗ್ರೆಸ್ ಪಕ್ಷಕ್ಕೆ ಏನಾದರೂ ಲಾಭ ಇದೆಯಾ ಎಂದು ಕೇಳಿದಾಗ, ʻʻಏನೂ ಲಾಭ ಆಗುವ ರೀತಿಯಲ್ಲಿ ಇಲ್ಲ. ಮುಂದೆ ಎಂ ಬಿ ಪಾಟೀಲ್ ಉತ್ಸವ, ಜಮೀರ್ ಉತ್ಸವ ಹೀಗೆ ಬೇರೆ ಬೇರೆ ಉತ್ಸವ ಶುರು ಆಗುತ್ತದೆ ಅಷ್ಟೇʼʼ ಎಂದರು.
ಇದನ್ನೂ ಓದಿ| ರಾಷ್ಟ್ರೀಯ ನಾಯಕರನ್ನೇ ಓವರ್‌ಟೇಕ್ ಮಾಡಿದ ಸಿದ್ದರಾಮಯ್ಯ: ಅವರ ಮಾತಿನಲ್ಲಿದೆ ಗತ್ತು ಗಮ್ಮತ್ತು!