ದಾವಣಗೆರೆ: ಸಿದ್ದರಾಮಯ್ಯ-75 ಅಮೃತ ಮಹೋತ್ಸವಕ್ಕಾಗಿ ದಾವಣಗೆರೆ ಸಂಪೂರ್ಣ ಸಜ್ಜಾಗಿದೆ. ಅದರೆ, ರಾಜ್ಯದ ಎಲ್ಲ ಭಾಗಗಳಿಂದ ಲಕ್ಷಾಂತರ ಜನರು ದಾವಣಗೆರೆಯತ್ತ ಧಾವಿಸಿ ಬರುತ್ತಿರುವ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ಟ್ರಾಫಿಕ್ ಜಾಮ್ ಉಂಟಾಗಿದೆ.
ಮಂಗಳವಾರ ಬೆಳಗ್ಗಿನಿಂದಲೇ ರಾಜ್ಯದ ಹಲವು ಭಾಗಗಳಿಂದ ಸಿದ್ದರಾಮಯ್ಯ ಅಭಿಮಾನಿಗಳು ದಾವಣಗೆರೆಯತ್ತ ಬರುತ್ತಿದ್ದಾರೆ. ಸಂಜೆಯ ಹೊತ್ತಿಗೇ ದಾವಣಗೆರೆ ಬಹುತೇಕ ಫುಲ್ ಆದಂತೆ ಕಾಣುತ್ತಿತ್ತು. ಇನ್ನು ಇಂದು ಬೆಳಗ್ಗಿನ ಜಾವವಂತೂ ವಾಹನಗಳ ಪ್ರವೇಶಕ್ಕೇ ಅವಕಾಶವಿಲ್ಲದಂತೆ ದೊಡ್ಡ ಮಟ್ಟದ ಟ್ರಾಫಿಕ್ ಜಾಮ್ ಉಂಟಾಗಿದೆ.
ಎಲ್ಲ ಕಡೆಯಿಂದ ನಿರೀಕ್ಷೆಗೆ ಮೀರಿ ವಾಹನಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ನಾಲ್ಕು ಗಂಟೆಯಿಂದ ಸಂಚಾರಕ್ಕೆ ಭಾರಿ ತೊಂದರೆಯಾಗಿದೆ. ಇಷ್ಟೊಂದು ದೊಡ್ಡ ದೊಡ್ಡ ಪ್ರಮಾಣದಲ್ಲಿ ವಾಹನಗಳು ಬರುತ್ತಿರುವ ಮಾಹಿತಿ ಇಲ್ಲದೆ ಇರುವುದರಿಂದ ಪೊಲೀಸರು ವ್ಯವಸ್ಥೆ ಮಾಡಿದ್ದೂ ಕಡಿಮೆಯಾಗಿದೆ. ನಿಜವೆಂದರೆ ಪೊಲೀಸರಿಗೂ ರಾತ್ರಿ ಡ್ಯೂಟಿ ಹಾಕಿರಲಿಲ್ಲ. ಹಾಗಾಗಿ ಟ್ರಾಫಿಕ್ ನಿರ್ವಹಣೆಗೆ ಪೊಲೀಸರ ಕೊರತೆ ಕಂಡುಬಂದಿದೆ.
ಈ ನಡುವೆ ಮಂಗಳವಾರ ರಾತ್ರಿ ಮಳೆ ಬಂದಿರುವ ಹಿನ್ನೆಲೆಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಮೀಸಲಿಟ್ಟ ಜಾಗಗಳಲ್ಲಿ ನೀರು ನಿಂತಿದೆ. ಹೀಗಾಗಿ ಯಾರೂ ಅಲ್ಲಿಗೆ ವಾಹನಗಳನ್ನು ಇಳಿಸಲು ಒಪ್ಪುತ್ತಿಲ್ಲ. ಹೀಗಾಗಿ ಎಲ್ಲ ವಾಹನಗಳು ರಸ್ತೆಯಲ್ಲೇ ನಿಂತಿರುವುದು ಕೂಡಾ ಸಮಸ್ಯೆಗೆ ಕಾರಣವಾಗಿದೆ.. ಇನ್ನು ಸ್ವಲ್ಪ ಹೊತ್ತಿನಲ್ಲಿ ಇನ್ನಷ್ಟು ವಾಹನಗಳು ಬರುವ ನಿರೀಕ್ಷೆ ಇದ್ದು ಸಂಚಾರ ನಿಯಂತ್ರಣ ಹೇಗೆ ಎನ್ನುವುದು ಗೋಜಲಾಗಿದೆ.
ಇದನ್ನೂ ಓದಿ | ಸಿದ್ದರಾಮಯ್ಯ @75 | ಹುಬ್ಬಳ್ಳಿ ಸಭೆಯಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಕಾಂಗ್ರೆಸ್ ನಾಯಕರು