Site icon Vistara News

Siddaramaiah @76: ಜನುಮ ದಿನದಂದೇ ಮೋದಿ ಭೇಟಿಯಾಗಲಿದ್ದಾರೆ ಸಿದ್ದರಾಮಯ್ಯ; Wish ಮಾಡ್ತಾರಾ ಪ್ರಧಾನಿ?

Siddaramaiah Meets Modi

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇಂದು (ಆಗಸ್ಟ್‌ 3) ತಮ್ಮ 76ನೇ ಜನುಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ (Siddaramaiah #76). ಇದೇ ದಿನ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ಅವರಿಗೆ ಜನುಮ ದಿನದ ಶುಭಾಶಯ ಕೋರುತ್ತಾರಾ ಎಂಬ ಕುತೂಹಲ ಜೋರಾಗಿದೆ.

ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ (Siddaramaiah to visit Narendra Modi) ಮಾಡುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಈ ಭೇಟಿ ನಿಗದಿಯಾಗಿದೆ.

ರಾಜ್ಯದಲ್ಲಿ ಮೇ 13ರಂದು ವಿಧಾನಸಭಾ ಚುನಾವಣೆ ನಡೆದು ಮೇ 20ರಂದು ಸಿದ್ದರಾಮಯ್ಯ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅದಾಗಿ ಸಂಪುಟ ರಚನೆ, ಕಾಂಗ್ರೆಸ್‌ನ ಗ್ಯಾರಂಟಿಗಳ ಈಡೇರಿಕೆಗೆ ಪ್ಲ್ಯಾನ್‌ಗಳು, ಬಜೆಟ್‌ ಮಂಡನೆ, ಅಧಿವೇಶನದಲ್ಲೇ ಬ್ಯುಸಿಯಾಗಿದ್ದ ಸಿದ್ದರಾಮಯ್ಯ ಅವರು ಈಗಷ್ಟೇ ಜಿಲ್ಲಾ ಪ್ರವಾಸ ಶುರು ಮಾಡಿದ್ದಾರೆ.

ಇದರ ನಡುವೆ ಬುಧವಾರ (ಆಗಸ್ಟ್‌ 2) ದಿಲ್ಲಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ರಾಜ್ಯದ ಕೈ ನಾಯಕರ ಮಹತ್ವದ ಸಭೆ ನಡೆದಿದ್ದು, ಅದರಲ್ಲಿ ಭಾಗವಹಿಸುವ ಉದ್ದೇಶದಿಂದ ದಿಲ್ಲಿಗೆ ಹೋಗಿರುವ ಸಿದ್ದರಾಮಯ್ಯ ಅವರು ಇನ್ನೂ ದಿಲ್ಲಿಯಲ್ಲೇ ಇದ್ದಾರೆ.

ಭೇಟಿಯ ಅಜೆಂಡಾ ಏನು?

ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಮೋದಿ ಮತ್ತು ಸಿದ್ದರಾಮಯ್ಯನವರ ಭೇಟಿಯ ಮುಖ್ಯ ಅಜೆಂಡಾ ಕರ್ನಾಟಕದ ಯೋಜನೆಗಳಿಗೆ ಕೇಂದ್ರದ ಸರಕಾರವೂ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸುವುದು. ಮೋದಿ ಅವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಅನ್ನ ಭಾಗ್ಯಕ್ಕೆ ಅಕ್ಕಿ ನೀಡುವ ವಿಚಾರದಲ್ಲಿ ನೇರವಾಗಿ ಪ್ರಧಾನಿ ಮೋದಿ ಅವರೊಂದಿಗೆ ವಿಷಯ ಪ್ರಸ್ತಾಪಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಪ್ರಧಾನಿ ಮೋದಿ ಅವರ ಜತೆ ಮಾತುಕತೆ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಹಾಗೂ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಲಿದ್ದಾರೆ. ಮೈಸೂರು ದಸರಾದ ಸಂದರ್ಭದಲ್ಲಿ ಏರ್‌ ಶೋ ಆಯೋಜಿಸುವ ಬಗ್ಗೆ ಸಿದ್ದರಾಮಯ್ಯ ಅವರು ಚಿಂತನೆ ನಡೆಸಿದ್ದಾರೆ. ಇದರ ಬಗ್ಗೆ ಅವರು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಜತೆ ಚರ್ಚಿಸಲಿದ್ದಾರೆ.

ಶುಭಾಶಯ ಕೋರುತ್ತಾರಾ ಮೋದಿ?

ಸಿದ್ದರಾಮಯ್ಯ ಅವರು ತಮ್ಮ 76ನೇ ಹುಟ್ಟುಹಬ್ಬದ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಜನುಮ ದಿನದ ಶುಭಾಶಯ ಕೋರುತ್ತಾರಾ ಎನ್ನುವ ಕುತೂಹಲವಿದೆ. ಸಿದ್ದರಾಮಯ್ಯ ಅವರು ಈ ಹಿಂದೆ ಹಲವು ಬಾರಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಅದರೆ, ಅವರ ಭೇಟಿಯ ಸಂದರ್ಭದಲ್ಲಿ ಇಬ್ಬರ ನಡುವೆ ತುಂಬ ಸಲುಗೆ ಕಂಡುಬಂದಿದ್ದರು ಕಡಿಮೆ. ಒಂದು ರೀತಿಯ ಬಿಗುಮಾನವೇ ಕಂಡುಬಂದಿತ್ತು. ಪ್ರಧಾನಿ ಮೋದಿ ಅವರು ವಿದೇಶಗಳಿಗೆ ಹೋದಾಗ ಅಲ್ಲಿನ ನಾಯಕರನ್ನು ಬರಸೆಳೆದು ಬಿಗಿದಪ್ಪಿದ ಹಾಗೆ ಇಲ್ಲಿನ ನಾಯಕರ ಜತೆ ನಡೆದುಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರು ಕೂಡಾ ಇತರ ನಾಯಕರ ಜತೆ ನಡೆದುಕೊಳ್ಳುವಷ್ಟು ಆತ್ಮೀಯವಾಗಿ ಪ್ರಧಾನಿ ಮೋದಿ ಅವರ ಜತೆ ತೆರೆದುಕೊಳ್ಳುವುದಿಲ್ಲ.

ಪ್ರಧಾನಿ ಮೋದಿ ಅವರನ್ನು ಅಂಕಿಅಂಶಗಳೊಂದಿಗೆ ಎದುರಿಸುವ ಶಕ್ತಿ ಇರುವ ನಾಯಕ ಎಂದು ಸಿದ್ದರಾಮಯ್ಯ ಹೆಸರಾಗಿದ್ದಾರೆ. ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಮೋದಿ ಅವರನ್ನು ಅವರದೇ ಶೈಲಿ ಅನುಕರಿಸಿ ಲೇವಡಿ ಮಾಡಿದ್ದರು ಕೂಡಾ. ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ದಾರಿದ್ರ್ಯಕ್ಕೆ ಒಳಗಾಗಲಿದೆ, ಅಭಿವೃದ್ಧಿ ಯೋಜನೆಗೆ ಹಣವಿಲ್ಲ ಎಂದು ಪ್ರಧಾನಿ ಮೋದಿ ಎರಡು ದಿನಗಳ ಹಿಂದೆ ಹೇಳಿದ್ದರು. ಇದನ್ನು ಕೇಂದ್ರ ಸರ್ಕಾರದ ಫ್ರೀ ಯೋಜನೆಗಳು, ಬಿಜೆಪಿಯ ಇಬ್ಬಂದಿ ನಿಲುವನ್ನು ಪ್ರಸ್ತಾಪಿಸಿ ಸವಾಲು ಹಾಕಿದ್ದರು ಸಿದ್ದರಾಮಯ್ಯ. ಹೀಗೆ ಸವಾಲು ಹಾಕಿದ ಬೆನ್ನಿಗೇ ಈ ಇಬ್ಬರು ನಾಯಕರ ಭೇಟಿ ನಡೆಯುತ್ತಿದೆ.

Exit mobile version