ಮೈಸೂರು: ಬಿಜೆಪಿಯವರು ಭಾರತ್ ಜೋಡೊ ನ್ಯಾಯ ಯಾತ್ರೆಗೆ (Bharat Jodo Nyay Yatra) ಉದ್ದೇಶಪೂರ್ವಕವಾಗಿಯೇ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದಾರೆ. ಇದು ಸಂವಿಧಾನಬಾಹಿರವಾದ ಕ್ರಮ. ಒಬ್ಬ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಹೀಗೆಲ್ಲಾ ನಡೆದುಕೊಳ್ಳಬಾರದು. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅಸ್ಸಾಂನಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ನ್ಯಾಯ ಯಾತ್ರೆಗೆ ತಡೆಯೊಡ್ಡಿರುವ ಬಗ್ಗೆ ಅಸ್ಸಾಂ ಪಿರಿಯಾಪಟ್ಟಣದಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರತಿ ನಾಗರಿಕನಿಗೂ ಪಾದಯಾತ್ರೆ ಕೈಗೊಳ್ಳಲು ಅಥವಾ ಯಾವುದೇ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸ್ವಾತಂತ್ರ್ಯವನ್ನು ಸಂವಿಧಾನ ಕೊಟ್ಟಿದೆ. ರಾಹುಲ್ ಗಾಂಧಿಯವರು ದೇಶದ ಜನರ ಸಮಸ್ಯೆಗಳನ್ನು ಅರಿಯಲು ಹಾಗೂ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ | Hiremagaluru Kannan : ಹೆಚ್ಚುವರಿ ವೇತನ; ಹಿರೇಮಗಳೂರು ಕಣ್ಣನ್ ತಪ್ಪಿಲ್ಲ, ತಹಸೀಲ್ದಾರ್‌ರಿಂದ ಹಣ ವಸೂಲಿ: ಸಿದ್ದರಾಮಯ್ಯ
ಪ್ರಚೋದನೆ ನೀಡುವುದು ಸಂವಿಧಾನಬಾಹಿರ
ನೆಹರು ಕುಟುಂಬಕ್ಕೆ ಬೆದರಿಕೆಯಿದ್ದು, ಭಾರತ ಸರ್ಕಾರ ಹಾಗೂ ಅಸ್ಸಾಂ ರಾಜ್ಯ ಸರ್ಕಾರಗಳು ರಾಹುಲ್ ಗಾಂಧಿಯವರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕಾಗಿರುವುದು ಅವರ ಕರ್ತವ್ಯ. ಇದು ಅವರ ಕರ್ತವ್ಯಲೋಪ ಎಸೆಗಿದಂತಾಗುತ್ತದೆ. ಅಸ್ಸಾಂ ಮುಖ್ಯಮಂತ್ರಿ ಮೊದಲು ಕಾಂಗ್ರೆಸ್‍ನಲ್ಲಿದ್ದು, ನಂತರ ಬಿಜೆಪಿಗೆ ಹೋಗಿ ಮುಖ್ಯಮಂತ್ರಿಗಳಾಗಿದ್ದಾರೆ. ಅಮಿತ್ ಶಾ ಹಾಗೂ ನರೇಂದ್ರ ಮೋದಿಯವರನ್ನು ಮೆಚ್ಚಿಸಲೆಂದು ಈ ರೀತಿ ಮಾಡುತ್ತಿದ್ದಾರೆ. ಅದು ಅವರ ಕರ್ತವ್ಯ ಲೋಪವಾಗಿದ್ದು, ಅವರ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಸೋತಿದೆ. ಇಂಥದ್ದಕ್ಕೆ ಪ್ರಚೋದನೆ ನೀಡುವುದು ಸಂವಿಧಾನಬಾಹಿರ ಎಂದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆಯುವುದಿಲ್ಲ
ಜಗದೀಶ್ ಶೆಟ್ಟರ್ ಅವರು ಪುನಃ ಬಿಎಪಿಗೆ ಹಿಂತಿರುಗುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಅವರೇ ನಾನು ಪುನಃ ಬಿಜೆಪಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಪದೇ ಪದೇ ಉದ್ದೇಶಪೂರ್ವಕವಾಗಿ ಬಿಜೆಪಿ ಈ ಮಾತನ್ನು ಹರಿಯಬಿಡುತ್ತಿದೆ. ಯಾವುದೇ ಕಾರಣಕ್ಕೂ ಶೆಟ್ಟರ್ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ ಎಂದರು.
ಬರ ಪರಿಹಾರದ ಬಗ್ಗೆ ಪ್ರಧಾನಿಗಳ ಗಮನಕ್ಕೆ ತರಲಾಗಿದೆ
ಕೇಂದ್ರಕ್ಕೆ ಭೇಟಿ ನೀಡಿ ಅಮಿತ್ ಶಾ ಅವರನ್ನು ಭೇಟಿ ಮಾಡಿದಾಗ ಡಿಸೆಂಬರ್ 23 ರಂದು ಸಭೆ ಕರೆದು ಬರ ಪರಿಹಾರ ಹಣವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಇಂದಿನವರೆಗೂ ಬಿಡುಗಡೆಯಾಗಲ್ಲ. ಸಭೆ ಕರೆದು ಕಾರಣಾಂತರದಿಂದ ಮುಂದೂಡಿದರು. ಇತ್ತೀಚೆಗೆ ಪ್ರಧಾನಿಗಳು ರಾಜ್ಯಕ್ಕೆ ಭೇಟಿ ನೀಡಿದಾಗ ಈ ವಿಷಯವನ್ನು ಅವರ ಗಮನಕ್ಕೆ ತಂದಿದ್ದೇನೆ. ರಾಜ್ಯದ ರೈತರು ಬರಗಾಲದಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ, ಕೂಡಲೇ ಬಿಡುಗಡೆ ಮಾಡಿ ಎಂದು ಅವರಿಗೆ ನೆನಪು ಮಾಡಿದ್ದೇನೆ ಎಂದರು.
ಇದನ್ನೂ ಓದಿ | Priyank Kharge: ರಾಜ್ಯ ಬಿಜೆಪಿ ನಾಯಕರು ಅಯೋಗ್ಯರು ಎಂದ ಪ್ರಿಯಾಂಕ್ ಖರ್ಗೆ
ವಾರದೊಳಗೆ ರೈತರಿಗೆ ಮೊದಲ ಕಂತು ಬಿಡುಗಡೆ
ಇಂದಿನವರೆಗೆ ನಮ್ಮ ಸರ್ಕಾರ ದನಕರುಗಳಿಗೆ ಹಾಗೂ ಜನಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ, ಜನರು ಗುಳೇ ಹೋಗದಂತೆ ನಿಭಾಯಿಸಿದ್ದೇವೆ. 550 ಕೋಟಿ ರೂ.ಗಳನ್ನು ರೈತರಿಗೆ ಪರಿಹಾರವಾಗಿ ಈವರೆಗೆ ಮೊದಲ ಹಂತದಲ್ಲಿ ಬಿಡುಗಡೆ ಮಾಡಿದ್ದೇವೆ. ಇನ್ನೊಂದು ವಾರದೊಳಗೆ ಎಲ್ಲಾ ರೈತರಿಗೂ ಮೊದಲನೇ ಕಂತನ್ನು ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.