ಮೈಸೂರು: ಸಂವಿಧಾನ ರಚನೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ದೇಶಕ್ಕೆ ಬೇಕಾದ ಸಂವಿಧಾನದ ರಚನೆ ಮಾಡಿ ಕೊಟ್ಟಿದ್ದಾರೆ. ಇಂದು ಜಾತಿ ವ್ಯವಸ್ಥೆಯಿಂದ ಅಸಮಾನತೆ ಉಂಟಾಗಿದೆ. ಅವಕಾಶ ವಂಚಿತರಿಗೆ ವಿಶೇಷ ಸೌಲಭ್ಯ ನೀಡಲು ಮೀಸಲಾತಿ ಇದೆ. ಆದರೆ, ಮೀಸಲಾತಿ (SC ST Reservation) ವಿಚಾರದಲ್ಲಿ ರಾಜ್ಯ ಸರ್ಕಾರ ಗೊಂದಲ ನಿರ್ಮಾಣ ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಭಾನುವಾರ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಸಂವಿಧಾನ ಬಚಾವೋ, ದೇಶ ಬಚಾವೋ ಧರಣಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಗೊಂದಲ ನಿರ್ಮಾಣ ಮಾಡಿದೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಈಗ ವಿಭಾಗೀಯ ಮಟ್ಟದಲ್ಲಿ ಮೈಸೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಾಮಾಜಿಕ ನ್ಯಾಯದ ಬಗ್ಗೆ ಒಪ್ಪಿಕೊಂಡಿದ್ದೇವೆ. ಎಲ್ಲರಿಗೂ ಸಮಾನ ಅವಕಾಶ ಸಿಕ್ಕರೆ ಮಾತ್ರ ಸಾಮರಸ್ಯ ಸಾಧ್ಯ. ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಟ್ಟಿದ್ದನ್ನು ಕಾನೂನು ಬಾಹಿರ ಎಂದು ಬಿಜೆಪಿ ಹೇಳುತ್ತಿದೆ. ಮುಸ್ಲಿಂರನ್ನು ಆರ್ಥಿಕ ಹಿಂದುಳಿದ ವರ್ಗಕ್ಕೆ (ಇಡಬ್ಲ್ಯುಎಸ್) ಹಾಕಿ ಎಲ್ಲ ಮೋಸ ಮಾಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾಗಮೋಹನ್ ವರದಿ ನೀಡಿದರು. ಆದರೆ, ಮೂರೂವರೆ ವರ್ಷ ಹಿಂದುಳಿದ ವರ್ಗಗಳ ಮೀಸಲಾತಿ ಜಾರಿಗೆ ತರದೆ ಸುಮ್ಮನೆ ಇತ್ತು. ಈಗ ಚುನಾವಣೆ ಹತ್ತಿರ ಬಂತು ಎಂದು ಮೀಸಲಾತಿ ಪರಿಷ್ಕರಣೆ ಮಾಡಿದೆ ಎಂದು ಆರೋಪಿಸಿದರು.
ಇದನ್ನೂ ಓದಿ | Karnataka Election 2023: ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸುತ್ತೇನೆ; ಸ್ಮಶಾನದಲ್ಲಿ ಪ್ರಚಾರ ವಾಹನದ ಪೂಜೆ ಮಾಡ್ತೇನೆ: ಸತೀಶ್ ಜಾರಕಿಹೊಳಿ
ಎಸ್‌ಸಿ ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಆದರೆ ಇನ್ನೂ ಸಂವಿಧಾನದ 9ನೇ ಅನುಸೂಚಿಗೆ ಸೇರಿಸಿಲ್ಲ. ಇದು ಜಾರಿಗೆ ತಂದರೂ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿಲ್ಲ ಯಾಕೆ ಎಂದ ಅವರು, ಸರ್ಕಾರ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾದುದು. ಇದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದೆ ಎಂದು ಹೇಳಿದರು.
ಮೀಸಲಾತಿ ಪರಿಷ್ಕರಣೆ ಜನರ ತಲೆ ಮೇಲೆ ಮಕ್ಮಲ್ ಟೋಪಿ ಹಾಕುವ ಕೆಲಸ. ಬೇರೆ ರಾಜ್ಯದಲ್ಲಿ ಶೇ. 50 ಗಿಂತ ಹೆಚ್ಚಿನ ಮೀಸಲಾತಿ ಇದೆ. ಅದೇ ರೀತಿ ಸಂವಿಧಾನದಲ್ಲಿ ಬದಲಾವಣೆ ಮಾಡಿ. ಅದನ್ನು ಬಿಟ್ಟು ಮುಸ್ಲಿಮರ ಮೀಸಲಾತಿ ಯಾಕೆ ಕಿತ್ತಾಕಿದ್ದೀರಿ. ಈಗ ಶೇ.56 ಮಾಡಿದ್ದೀರಿ. ನೀವು ಸಂವಿಧಾನಕ್ಕೆ ತಿದ್ದುಪಡಿ ತರದೆ, 9ನೇ ಶೆಡ್ಯೂಲ್‌ಗೆ ಸೇರ್ಪಡೆ ಮಾಡದೆ ರಕ್ಷಣೆ ಹೇಗೆ ಸಾಧ್ಯ. ಕೇಂದ್ರ ಸರ್ಕಾರ ನಮಗೆ ಪ್ರಸ್ತಾವನೆಯೇ ಬಂದಿಲ್ಲ ಎಂದು ಹೇಳುತ್ತದೆ. ಶೇ.15 ಒಳ ಮೀಸಲಾತಿ ಕೊಡಬೇಕಿತ್ತು. ಶೇ.17 ಒಳ ಮೀಸಲಾತಿ ತಂದಿರುವುದಾಗಿ ಹೇಳಿದ್ದೀರಿ. ಆದರೆ ಶೇ. 17 ಊರ್ಜಿತವೇ ಆಗಿಲ್ಲ, ಇದು ಹೇಗೆ ಸಾಧ್ಯ ಎಂದು ಕಿಡಿಕಾರಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಬಿಜೆಪಿ ಡಿಎನ್‌ಎ ಸಂವಿಧಾನ ವಿರೋಧಿಯಾಗಿದೆ. ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ವಿರೋಧಿ ಆಗಿದೆ. ಇತ್ತ ಬಿಜೆಪಿ ಸರ್ಕಾರ ಒಕ್ಕಲಿಗ ಸಮುದಾಯಕ್ಕೆ ಅಪಮಾನ ಮಾಡಿದೆ. ಅತ್ತ ಲಿಂಗಾಯತ ಸಮುದಾಯದ ಸಮಂಜಸ ಬೇಡಿಕೆಯನ್ನು ಗಾಳಿಗೆ ತೂರಿದೆ. ದಲಿತ ಬೇಡಿಕೆ ಮುಗಿಸುವ ಕೆಲಸ ಮಾಡಿದೆ ಎಂದು ಕಿಡಿಕಾರಿದರು.
ಅಲ್ಪಸಂಖ್ಯಾತರ ಸೌಲಭ್ಯ ಅಧಿಕಾರ ಕಿತ್ತಾಕುವ ಕೆಲಸ ಮಾಡಿದೆ. ಇವರು ಯಾರ ಬೇಡಿಕೆಯನ್ನು ಕೇಳಲ್ಲ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಡಬಲ್ ಎಂಜಿನ್ ಸರ್ಕಾರ, ಡಬಲ್ ಮೋಸದ ಸರ್ಕಾರ. ಬೊಮ್ಮಾಯಿ ಸರ್ಕಾರ ಮೂರು ತಿಂಗಳಲ್ಲಿ ಮೂರು ಬಾರಿ ಆಡಳಿತ ವ್ಯವಸ್ಥೆ ಬದಲಾವಣೆ ಮಾಡಿದೆ. ಇವರು ರಾಜ್ಯದ ಉದ್ದಕ್ಕೂ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | Siddaramaiah: ನನ್ನ ಸ್ವಾರ್ಥ ಇಲ್ಲ; ಸಿದ್ದರಾಮಯ್ಯ ಕೋಲಾರಕ್ಕೆ ಬರದಿದ್ದರೆ ಕಾಂಗ್ರೆಸ್ ಮುಳುಗುತ್ತದೆ ಎಂದ ಕೆ. ಆರ್. ರಮೇಶ್ ಕುಮಾರ್
ಏನು ಈಗ ಮೀಸಲಾತಿ ಹೆಚ್ಚಳ ಉಲ್ಲೇಖ ಮಾಡಿದ್ದಾರೆ. ಅದು ಕಾಂಗ್ರೆಸ್ ಪಕ್ಷ ತಯಾರಿಸಿದ್ದ ನ್ಯಾ.ನಾಗಮೋಹನ್ ದಾಸ್ ವರದಿಯ ಶಿಫಾರಸುಗಳಾಗಿವೆ. ವರದಿ ಬಂದ ನಾಲ್ಕು ವರ್ಷದ ನಂತರ ಕೈಗೆತ್ತಿಕೊಳ್ಳುವ ಕೆಲಸ ಯಾಕೆ ಮಾಡಿದರು. ಇವರಿಗೆ ಮುಂದೆ ಅಧಿಕಾರಕ್ಕೆ ಬರಲ್ಲ ಎಂದು ಗೊತ್ತಾಗಿದ್ದು, ಈ ರೀತಿ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವರು ಈ ಪ್ರಸ್ತಾವನೆ ಕೇಂದ್ರಕ್ಕೆ ಕಳುಹಿಸುವುದನ್ನು ಮರೆತೇ ಬಿಟ್ಟಿದ್ದಾರೆ ಎಂದರು.