ಬೆಂಗಳೂರು: ರಾಜ್ಯದ ಜನತೆ ಕಾಂಗ್ರೆಸ್ಗೆ 136 ಸೀಟು ಕೊಟ್ಟು ಗೆಲ್ಲಿಸಿದ್ದರೂ ಪಕ್ಷದಲ್ಲಿ (Congress Karnataka) ಈವರೆಗೆ ಡಿಶುಂ ಡಿಶುಂ ಮಾತ್ರ ನಿಂತಿಲ್ಲ. ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ತಾಳಮೇಳದಲ್ಲಿ ಆಗಾಗ ಅಪಸ್ವರ ಕೇಳಿ ಬರುತ್ತಲೇ ಇದೆ. ಇದು ನಿಗಮ – ಮಂಡಳಿ ನೇಮಕದಲ್ಲೂ ಹಾಗೇ ಆಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ 6 ತಿಂಗಳಾದರೂ ಸಹ ನಿಗಮ-ಮಂಡಳಿಗಳ ನೇಮಕಕ್ಕೆ ಸರ್ಕಸ್ ಮುಂದುವರಿದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಒಮ್ಮತಕ್ಕೆ ಬಾರದೇ ಇರುವುದರಿಂದ ನೇಮಕಕ್ಕೆ ಬ್ರೇಕ್ ಬಿದ್ದಿದೆ. ತಮ್ಮ ತಮ್ಮ ಆಪ್ತರಿಗೆ ಅಧಿಕಾರ ಕೊಡಿಸುವ ಗುರಿಯಲ್ಲಿ ಸಿದ್ದರಾಮಯ್ಯ-ಡಿಕೆಶಿಯಿಂದ ನಾನಾ – ನೀನಾ ಫೈಟ್ ಶುರುವಾಗಿರುವುದೇ ಈ ಎಲ್ಲ ಗೊಂದಲಕ್ಕೆ ಕಾರಣವಾಗಿದೆ.
ಕೈಗೂಡದ ಸಭೆ; ಮೂಡದ ಒಮ್ಮತ
ನವೆಂಬರ್ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾಧ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ನಡೆಸಿದ್ದ ಸಭೆ ವಿಫಲವಾಗಿತ್ತು. ಪಂಚರಾಜ್ಯಗಳ ಚುನಾವಣೆ ಮಧ್ಯೆಯೇ ಕಾಂಗ್ರೆಸ್ ವರಿಷ್ಠರು ಸಂಧಾನ ನಡೆಸಿ ಒಮ್ಮತದ ತೀರ್ಮಾನವನ್ನು ತೆಗೆದುಕೊಳ್ಳಲು ಪ್ರಯತ್ನ ಪಟ್ಟಿದ್ದರು. ಆದರೆ, ಈ ಸಭೆಯೂ ಫಲಗೂಡಲಿಲ್ಲ. ನಾನು ಜಗ್ಗಲ್ಲ.. ನಾನು ಬಗ್ಗಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರೆ, ನಾನೇ ಸುಪ್ರೀಂ ಅಂತಾ ಸಿದ್ದರಾಮಯ್ಯ ಪಟ್ಟು ಹಿಡಿದು ಕುಳಿತಿದ್ದಾರೆ. 3 ಮೀಟಿಂಗ್ ಮಾಡಿದರೂ ಒಮ್ಮತ ಮೂಡದಿರುವ ಕಾರಣಕ್ಕೆ ರಣದೀಪ್ ಸಿಂಗ್ ಸುರ್ಜೇವಾಲಾ, ವೇಣುಗೋಪಾಲ್ ರಿಟರ್ನ್ ಆಗಿದ್ದಾರೆ. ಹೀಗಾಗಿ ಡಿಸೆಂಬರ್ 2ನೇ ವಾರ ಬಂದರೂ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ.
ಇಬ್ಬರ ಬಳಿಯೂ ಒಂದೊಂದು ಪಟ್ಟಿ!
ಸಿಎಂ ಸಿದ್ದರಾಮಯ್ಯ ಬಳಿ ಒಂದು ಪಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ್ ಬಳಿ ಇನ್ನೊಂದು ಪಟ್ಟಿ ಇದೆ. ಸಿದ್ದರಾಮಯ್ಯ ರೆಡಿ ಮಾಡಿಟ್ಟುಕೊಂಡಿರುವ ಪಟ್ಟಿಗೆ ಡಿ.ಕೆ.ಶಿವಕುಮಾರ್ ಒಪ್ಪೋಕೆ ಸಿದ್ಧರಿಲ್ಲ. ಅದೇ ಡಿಸಿಎಂ ಡಿ.ಕೆ. ಶಿವಕುಮಾರ್ ತೋರಿಸುತ್ತಿರುವ ಪಟ್ಟಿಗೆ ಸಿಎಂ ಸಿದ್ದರಾಮಯ್ಯ ಸುತಾರಾಂ ಒಪ್ಪುತ್ತಿಲ್ಲ.
ಸುರ್ಜೇವಾಲ ಮುಂದೆ ಸಿದ್ದರಾಮಯ್ಯ ಹೇಳಿದ್ದೇನು?
ಲೋಕಸಭಾ ಚುನಾವಣೆ ಸಮೀಪ ಬರುತ್ತಿರುವುದರಿಂದ ಮೊದಲ ಪಟ್ಟಿಯಲ್ಲಿ ಶಾಸಕರಿಗೆ ಸ್ಥಾನವನ್ನು ಕಲ್ಪಿಸೋಣ. ಚುನಾವಣೆ ಎದುರಿಸಲು ಸರ್ಕಾರದಲ್ಲಿ ಅಸಮಾಧಾನ ವ್ಯಕ್ತಪಡಿಸುವ ಶಾಸಕರು ಇರಬಾರದು. ಹೀಗಾಗಿ ಶಾಸಕರಿಗೆ ಮಣೆ ಹಾಕಿ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಮುಂದೆ ಸಿಎಂ ಸಿದ್ದರಾಮಯ್ಯ ತಮ್ಮ ವಾದವನ್ನು ಮಂಡಿಸಿದ್ದಾರೆ.
ಸುರ್ಜೇವಾಲ ಮುಂದೆ ಡಿಕೆಶಿ ಹೇಳಿದ್ದೇನು?
ನಮಗೆ ಅಧಿಕಾರ ಸಿಕ್ಕಿದೆ ಖುಷಿ ಇದೆ. ಆದ್ರೆ ಕಾರ್ಯಕರ್ತರ ಕೈಗೆ ಅಧಿಕಾರ ಕೊಡಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ಕೆಲಸ ಮಾಡಲ್ಲ ಹೀಗಾಗಿ ಶಾಸಕರ ಜತೆಗೆ ಕಾರ್ಯಕರ್ತರಿಗೆ ಅಧಿಕಾರ ಕೊಡಿ ಎಂದು ಸುರ್ಜೇವಾಲ ಮುಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದು ಕುಳಿತಿದ್ದಾರೆ.
ಡಿಕೆಶಿ ವಾದಕ್ಕೆ ಸಿದ್ದರಾಮಯ್ಯ ಪ್ರತಿವಾದ
ಕಾರ್ಯಕರ್ತರ ಕೈಗೆ ಅಧಿಕಾರ ಕೊಡಬೇಕು, ಅದರಲ್ಲಿ ನನ್ನ ತಕರಾರು ಇಲ್ಲ. ಆದರೆ, ಕಾರ್ಯಕರ್ತರು ನಮ್ಮ ಮಾತು ಕೇಳುತ್ತಾರೆ, ಶಾಸಕರ ಮಾತು ಕೇಳುತ್ತಾರೆ. ಹೀಗಾಗಿ ಮೊದಲ ಪಟ್ಟಿಯಲ್ಲಿ ಶಾಸಕರಿಗೆ ಕೊಡೋಣ. ಬಹಿರಂಗ ಅಸಮಾಧಾನ ಹೇಳಿಕೆಗಳಿಗೆ ಕಡಿವಾಣ ಹಾಕಲು ನಾನು ಸೂಚಿಸಿದ ಪಟ್ಟಿಯನ್ನು ಫೈನಲ್ ಮಾಡಿ ಸಿಎಂ ಸಿದ್ದರಾಮಯ್ಯ ಪ್ರತಿವಾದ ಮಂಡಿಸಿದ್ದಾರೆ.
ಸಿದ್ದರಾಮಯ್ಯ ಪ್ರತಿವಾದಕ್ಕೆ ಡಿಕೆಶಿ ಕೌಂಟರ್
ನಾನು ಎಲ್ಲವನ್ನೂ ತ್ಯಾಗ ಮಾಡಿದ್ದೇನೆ. ನಾನು ಕೇಳುತ್ತಿರುವುದು ಚುನಾವಣೆಯಲ್ಲಿ ಕೆಲಸ ಮಾಡಿದ ಶಾಸಕರು ಮತ್ತು ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂದು. ನನ್ನ ಮಾತು ಕೇಳಿ ಅವರ ಕೈಗೆ ಅವಕಾಶ ಕೊಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೌಂಟರ್ ನೀಡಿದ್ದಾರೆ.
ಉಭಯ ನಾಯಕರಿಗೆ ಸುರ್ಜೇವಾಲ ಹೇಳಿದ್ದೇನು?
ಇಬ್ಬರ ಪಟ್ಟಿಯನ್ನು ನಾನು ತೆಗೆದುಕೊಂಡು ಹೋಗುತ್ತೇನೆ. ದೆಹಲಿಗೆ ಪಟ್ಟಿ ತೆಗೆದುಕೊಂಡು ಹೋಗುತ್ತೇನೆ. ನಿಮ್ಮನ್ನು ಕರೆದಾಗ ಬನ್ನಿ ಚರ್ಚೆ ಮಾಡಿ ಫೈನಲ್ ಮಾಡೋಣ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಸಿದ್ದರಾಮಯ್ಯ ಬಣದ ಆಕಾಂಕ್ಷಿಗಳು..!
- ಪಿಎಂ ನರೇಂದ್ರ ಸ್ವಾಮಿ
- ಶಿವಲಿಂಗೇಗೌಡ
- ಅನಿಲ್ ಚಿಕ್ಕಮಾದು
- ಬಂಗಾರಪೇಟೆ ನಾರಾಯಣಸ್ವಾಮಿ
- ಕೆ.ವೈ. ನಂಜೇಗೌಡ
- ಬಿ.ಆರ್. ಪಾಟೀಲ್
- ಗಣೇಶ್ ಹುಕ್ಕೇರಿ
- ಮಹಾಂತೇಶ್ ಕೌಜಲಗಿ
- ಯಶವಂತರಾಯಗೌಡ ಪಾಟೀಲ್
- ಬಿ.ಜಿ ಗೋವಿಂದಪ್ಪ
- ರಾಘವೇಂದ್ರ ಹಿಟ್ನಾಲ್
- ರಘುಮೂರ್ತಿ
- ಪ್ರಸಾದ್ ಅಬ್ಬಯ್ಯ
- ಜೆ.ಟಿ. ಪಾಟೀಲ್
- ವಿಜಯಾನಂದ ಕಾಶಪ್ಪನವರ್
- ನಾಡಗೌಡ
- ಪ್ರಿಯಕೃಷ್ಣ
- ರಿಜ್ವಾನ್ ಅರ್ಷಾದ್
ಡಿ.ಕೆ. ಶಿವಕುಮಾರ್ ಬಣದ ಆಕಾಂಕ್ಷಿಗಳು
- ರಮೇಶ್ ಬಂಡಿಸಿದ್ದೇಗೌಡ
- ಟಿ.ಡಿ. ರಾಜೇಗೌಡ
- ಬಿ.ಕೆ. ಸಂಗಮೇಶ್
- ಸತೀಶ್ ಸೈಲ್
- ಬಸವನಗೌಡ ತುರುವಿಹಾಳ್
- ಬಾಲಕೃಷ್ಣ
- ಕೊತ್ತನೂರು ಮಂಜು
- ಶರತ್ ಬಚ್ಚೇಗೌಡ
- ಡಾ.ರಂಗನಾಥ್
- ಬಸವರಾಜ ಶಿವಗಂಗ
- ಬೇಲೂರು ಗೋಪಾಲಕೃಷ್ಣ