Site icon Vistara News

ಡಿಕೆಶಿ-ಸಿದ್ದು ಒಗ್ಗಟ್ಟಿನ ಮಂತ್ರ: ಕುಷ್ಟಗಿಯಿಂದ ಸ್ಪರ್ಧೆಯಿಲ್ಲ ಎಂದು ಘೋಷಿಸಿದ ಸಿದ್ದರಾಮಯ್ಯ

ಕೊಪ್ಪಳ: ಜಿಲ್ಲೆಯ ಕುಷ್ಟಗಿಯಲ್ಲಿ ಕಾಂಗ್ರೆಸ್ ನಾಯಕರು ರಣಕಹಳೆ ಮೊಳಗಿಸಿದ್ದಾರೆ. ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಅಮರೇಗೌಡ ಪಾಟೀಲ್ 69ನೇ ಹುಟ್ಟು ಹಬ್ಬದ ಕಾರ್ಯಕ್ರಮದ ನೆಪದಲ್ಲಿ ಕಾಂಗ್ರೆಸ್ ನಾಯಕರು ಮುಂದಿನ ಚುನಾವಣೆಯ ರಣಕಹಳೆ‌ ಮೊಳಗಿಸಿದರು.

ಗುರುವಾರವಷ್ಟೆ ಕೊಪ್ಪಳದಲ್ಲಿ ತಮ್ಮ ರಾಷ್ಟ್ರೀಯ ಅಧ್ಯಕ್ಷ ನಡ್ಡಾರನ್ನು ಕರೆಸಿ ಬಿಜೆಪಿಯವರು ಭರ್ಜರಿ ಕಾರ್ಯಕ್ರಮ ಮಾಡಿದ ಮರು ದಿನವೇ ಕಾಂಗ್ರೆಸ್ ಸಹ ಕುಷ್ಟಗಿ ಪಟ್ಟಣದಲ್ಲಿ ಕಾರ್ಯಕ್ರಮ ನಡೆಸಿತು.

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನಡುವೆ ಮುನಿಸಿದೆ ಎಂಬ ಮಾತಿನ ನಡುವೆಯೇ ಇಬ್ಬರೂ ಈ ಒಂದೇ ಹೆಲಿಕಾಪ್ಟರ್‌ನಲ್ಲಿ ಬಂದು ವೇದಿಕೆಯಲ್ಲಿಯೂ ಒಗ್ಗಟ್ಟಿನ ಜಪ ಮಾಡಿದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿತು.

ಕುಷ್ಟಗಿಯ ಎಪಿಎಂಸಿ ಬಳಿ ‌ನಡೆದ ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಅವರ 69ನೇ ಹುಟ್ಟು ಹಬ್ಬ ಹಾಗೂ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿ ಕಾಂಗ್ರೆಸ್‌ನ ನಾಯಕರ ದಂಡೇ ಆಗಮಿಸಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ ಅವರಿಗೆ ಬೆಳ್ಳಿ ಖಡ್ಗ ಹಾಗೂ ಸಿದ್ದರಾಮಯ್ಯ ಅವರಿಗೆ ಕಂಬಳಿ, ಬೆಳ್ಳಿ ಗಧೆ ನೀಡಿ ಸ್ವಾಗತಿಸಲಾಯಿತು. ಸಿದ್ದರಾಮಯ್ಯ ಅವರು ಈ ಕ್ಷೇತ್ರದಲ್ಲಿ ಬಂದು ಸ್ಪರ್ಧಿಸುವಂತೆ ವೇದಿಕೆಯ ಮೂಲಕ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ, ಇಲ್ಲಿ ಅಭಿವೃದ್ಧಿ ಯಾರು ಮಾಡಿದ್ದಾರೆ ಎಂಬುದನ್ನು ನೀವು ನೋಡಬೇಕು. ನಾನು ಸೋತಾಗಲೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. 1,300 ಕೋಟಿ ರೂ. ಅನುದಾನ ತಂದು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಅವರಿಗೆ ತಾಕತ್ತು ಇದ್ದರೆ, ಧಮ್ ಇದ್ದರೆ ನನ್ನ ಮೇಲೆ 1,300 ಕೋಟಿ ರುಪಾಯಿ ಆಪಾದನೆಯನ್ನು ಸಿಬಿಐಗೆ ನೀಡಲಿ ಎಂದು ಸವಾಲು ಹಾಕಿದರು. ನಿಮ್ಮ ಆಶೀರ್ವಾದವಿದ್ದರೆ ಈ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, 1991ರಲ್ಲಿ, ಆ ವರ್ಷ ನಾನು ಲೋಕಸಭೆಗೆ ಕೊಪ್ಪಳದಿಂದ ಸ್ಪರ್ಧೆ ಮಾಡಿದ್ದೆ, ರಾಜೀವ್‌ ಗಾಂಧಿ ಅವರ ಹತ್ಯೆಯಾದ ಕಾರಣದಿಂದ ನಾನು ಆ ಚುನಾವಣೆಯಲ್ಲಿ ಸೋತೆ. ಲೋಕಸಭಾ ಚುನಾವಣೆಯಲ್ಲಿ ಸೋತದ್ದೆ ಅನುಕೂಲವಾಯಿತೇನೋ ಅನ್ನಿಸುತ್ತೆ, ಕಾರಣ ನಾನು ನಂತರ ರಾಜ್ಯದ ಮುಖ್ಯಮಂತ್ರಿಯಾದೆ. ನಾನು ಮೈಸೂರಿನಿಂದ ಬಂದು ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ರೂ ಕೂಡ ಇಲ್ಲಿನ ಜನ ನನ್ನನ್ನು ಅತೀ ಪ್ರೀತಿಯಿಂದ ಬರಮಾಡಿಕೊಂಡು, ನನಗೆ ಬೆಂಬಲ ನೀಡಿದ್ದರು. ನಾನು ಮುಂದಿನ ಚುನಾವಣೆಯಲ್ಲಿ ಕುಷ್ಟಗಿಯಿಂದ ಸ್ಪರ್ಧೆ ಮಾಡುವುದಿಲ್ಲ ಎಂಬುದನ್ನು ವಿನಮ್ರವಾಗಿ ಹೇಳಲು ಬಯಸುತ್ತೇನೆ ಎಂದರು.

ಅಮರೇಗೌಡ ಪಾಟೀಲ್ ಅವರ ಮೇಲೆ ನಿಮ್ಮ ಆಶೀರ್ವಾದವಿರಲಿ ಎಂದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಗುರುವಾರ ಕೊಪ್ಪಳಕ್ಕೆ ಬಂದು ಭಾಷಣ ಮಾಡಿದ್ದಾರೆ. ಲಂಚ ರಹಿತ ಸರ್ಕಾರ ಎಂದು ಹೇಳಿದ್ದಾರೆ. ಅಧಿಕಾರಕ್ಕೆ ಬಂದಾಗಿಂತ ಲೂಟಿ ಹೊಡೆದಿದ್ದೀರಿ. ಏನು ಅಭಿವೃದ್ಧಿ ಮಾಡಿದ್ದೀರಿ? ಡಬಲ್ ಇಂಜಿನ್ ಸರ್ಕಾರ ಕೊಪ್ಪಳ ಏತ ನೀರಾವರಿ ಯೋಜನೆಗೆ ಇರುವ ತಡೆಯಾಜ್ಞೆ ತೆರವುಗೊಳಿಸಲು ಆಗಲಿಲ್ಲವಾ? ಅಂತರಾಜ್ಯ ವಿವಾದ ಇದ್ದಾಗ ಅದನ್ನು ಇತ್ಯರ್ಥಪಡಿಸಲು ಪ್ರಧಾನಿಗೆ ಕೇಳಿದಾಗ ಪ್ರಧಾನಿ ಆ ಪ್ರಯತ್ನ ಮಾಡಲಿಲ್ಲ. 40 ಪರ್ಸೆಂಟ್ ಸರ್ಕಾರ ಎಂದು ನಾನು ಹೇಳಿಲ್ಲ. ಜನರೇ ಹೇಳುತ್ತಿದ್ದಾರೆ. ನಿಮ್ಮ ಸರ್ಕಾರ ಲಂಚದ ಸರ್ಕಾರವೆಂದು ವಿಧಾನಸೌಧದ ಗೋಡೆಗಳು ಪಿಸುಗುಡುತ್ತಿವೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು‌.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವೂ ಇಲ್ಲ ಎಂದರು. ನಾವು ಈಗಾಗಲೇ ಸರ್ವೆ ಮಾಡಿದ್ದೇವೆ. 136 ಸೀಟ್ ಕಾಂಗ್ರೆಸ್, 66 ಸೀಟ್ ಬಿಜೆಪಿ ಬರುತ್ತೇವೆ. ಬಿಜೆಪಿಯವರು ಭಾವನೆಯಲ್ಲಿ ಕೆಲಸ ಮಾಡುತ್ತಿದ್ದಾರೆಯೇ ಹೊರತು ಬದುಕಿನ ಮೇಲೆ ಅಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | ಎಲೆಕ್ಷನ್‌ ಹವಾ | ಕುಷ್ಟಗಿ | ಎರಡನೇ ಬಾರಿ ಗೆಲ್ಲಿಸದ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆ ಪೈಪೋಟಿ

Exit mobile version