ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ (Karnataka CM) ಅಧಿಕಾರ ಸ್ವೀಕರಿಸಿದ ಮರುದಿನವೇ ಸಿದ್ದರಾಮಯ್ಯ (siddaramaiah) ಅವರು ಮಹತ್ವದ ತೀರ್ಮಾನವೊಂದನ್ನು ಪ್ರಕಟಿಸಿದ್ದಾರೆ . ಅವರು ತಮ್ಮ ಓಡಾಟದ ವೇಳೆ ನೀಡಲಾಗುವ ಜೀರೊ ಟ್ರಾಫಿಕ್ (Zero traffic) ಸೌಲಭ್ಯ ಬೇಡ ಎಂದು ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ʻʻನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಪಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆʼʼ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಪೊಲೀಸ್ ನಿಯಮಗಳ ಪ್ರಕಾರ, ರಾಜ್ಯದ ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಇತರ ಪ್ರಮುಖ ಹುದ್ದೆಯಲ್ಲಿರುವವರು ಅಗತ್ಯ ಕೆಲಸಗಳಿಗಾಗಿ ಸಂಚರಿಸುವಾಗ ಆ ದಾರಿಯಲ್ಲಿ ಎಲ್ಲಾ ವಾಹನಗಳನ್ನು ತಡೆದು ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಮಾಡುತ್ತಾರೆ. ಕೆಲವೊಮ್ಮೆ ಅವರು ಸಂಚರಿಸುವ ಮಾರ್ಗವನ್ನು ಪೂರ್ಣವಾಗಿ ಮುಚ್ಚಿದರೆ ಇನ್ನು ಕೆಲವು ಸಂದರ್ಭದಲ್ಲಿ ಹಂತ ಹಂತವಾಗಿ ರಸ್ತೆಗಳನ್ನು ಮುಚ್ಚಲಾಗುತ್ತದೆ.
ರಾಜಕಾರಣಿಗಳ ಝೀರೋ ಟ್ರಾಫಿಕ್ ವ್ಯವಸ್ಥೆಯಿಂದಾಗಿ ಸಾರ್ವಜನಿಕರು ಭಾರಿ ತೊಂದರೆಗೆ ಒಳಗಾಗುವುದನ್ನು ಗಮನಿಸಿ ಸಿದ್ದರಾಮಯ್ಯ ಅವರು ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ. ಈ ಹಿಂದೆ ಜಿ. ಪರಮೇಶ್ವರ್ ಅವರು ಗೃಹ ಮಂತ್ರಿಯಾಗಿದ್ದಾಗ ತನಗೆ ಜೀರೋ ಟ್ರಾಫಿಕ್ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದರು. ಅವರಿಗಿಂತ ಹಿಂದೆ ಗೃಹ ಸಚಿವರಾಗಿದ್ದವರು ಜೀರೊ ಟ್ರಾಫಿಕ್ ನಿರಾಕರಿಸಿದ್ದರು. ಆದರೆ, ಪರಮೇಶ್ವರ್ ಬಿಡಲು ಸಿದ್ಧರಿರಲಿಲ್ಲ.
ಮಂತ್ರಿಗಳಿಗೂ ಅದೇ ಸೂಚನೆ ನೀಡಿ ಎಂದ ನೆಟ್ಟಿಗರು
ಜೀರೊ ಟ್ರಾಫಿಕ್ ನಿರಾಕರಿಸುವ ಸಿದ್ಧರಾಮಯ್ಯ ಅವರ ನಡುವೆಯನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ. ಜತೆಗೇ ನಿಮ್ಮ ಆದರ್ಶವನ್ನು ಸಂಪುಟದ ಇತರ ಸಚಿವರು ಕೂಡಾ ಪಾಲಿಸುವಂತೆ ಸಲಹೆ ನೀಡಿ, ಬೇಕಿದ್ದರೆ ಯಾರೂ ತೆಗೆದುಕೊಳ್ಳಬಾರದು ಎಂಬ ಸಲಹೆ ನೀಡಿ ಎಂದು ಹೇಳಿದ್ದಾರೆ.
ನೆಟ್ಟಿಗರ ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ
- ನಿಮಗೆ ಮಾತ್ರ ಅಲ್ಲ ಸಾರ್ ಇನ್ನೂ ಮುಂದೆ ಯಾವುದೇ ಕಾರಣಕ್ಕೂ (ತುರ್ತು ಸಂದರ್ಭ ಬಿಟ್ಟು) ಯಾರು ಸಹ zero traffic ಸೌಲಭ್ಯವನ್ನು ಬಳಸಬಾರದು ಎಂದು ಕಾಯ್ದೆ ತಿದ್ದುಪಡಿ ಮಾಡಿ.
- ಒಳ್ಳೆಯ ನಿರ್ಧಾರ, ಆದರೆ CM ಆದವರು traffic ಅಲ್ಲಿ ತಮ್ಮ ಸಮಯ ವ್ಯರ್ಥ ಮಾಡಬೇಡಿ, ನಿಮ್ಮ ಸಮಯ ಹಾಗೂ ಸುರಕ್ಷತೆಗಾಗಿ zero traffic ಅಲ್ಲೇ ಓಡಾಡಿ, ನಾವು ಇಷ್ಟು ವರ್ಷಗಳಿಂದ ಅನುಭವಿಸಿದ್ದೆವೆ ಏನು ತೊಂದರೆ ಇಲ್ಲ, Minister ಗಳಿಗೆ zero traffic ವ್ಯವಸ್ಥೆಯನ್ನು ನಿಲ್ಲಿಸಿ,
- ಒಳ್ಳೆಯ ನಿರ್ಧಾರ ಸಾರ್ ಆದರೆ ಇದು ಬರೀ ಟ್ವೀಟ್ ಆಗಿ ಮಾತ್ರ ಉಳಿಯಬಾರದು. ಕಾರ್ಯ ರೂಪಕ್ಕೆ ಬಂದರೆ ಮಾತ್ರ ನಿಮ್ಮನ್ನು ನಿಜವಾಗಿಯೂ ಮೆಚ್ಚಬಹುದು. ಬೇರೆಯ ಮಂತ್ರಿಗಳು ಹಾಗು ಸಚಿವರಿಗೆ ಇದು ಒಳ್ಳೆಯ ಉದಾಹರಣೆ ಆಗಲಿ.
- ಮಾನ್ಯ ಮುಖ್ಯ ಮಂತ್ರಿಗಳೇ ಈ ನಿಮ್ಮ ನಿರ್ಧಾರ ಸಾರ್ವಜನಿಕ ವಲಯಕ್ಕೆ ತುಂಬಾ ಒಳ್ಳೆಯದು ಈ ನಿಮ್ಮ ನಿರ್ಧಾರಕ್ಕೆ ನಾನು ಸಾರ್ವಜನಿಕರ ಪರಾವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
- ಒಳ್ಳೆಯ ಮಾದರಿಯನ್ನು ರೂಪಿಸಿದ್ದೀರಿ. ನಿಮ್ಮ ಸಂಪುಟದ ಸಚಿವರು ಕೂಡಾ ಜೀರೋ ಟ್ರಾಫಿಕ್ ಬಳಸದಂತೆ ಸೂಚಿಸಿ ಎಂದು ಕೆಲವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Bengaluru Rain: ಮೃತ ಯುವತಿ ಕುಟಂಬಕ್ಕೆ 5 ಲಕ್ಷ ರೂ. ಪರಿಹಾರ; ಅವೈಜ್ಞಾನಿಕ ಅಂಡರ್ ಪಾಸ್ ಸರಿಪಡಿಸುತ್ತೇವೆ: ಸಿಎಂ ಸಿದ್ದರಾಮಯ್ಯ