Site icon Vistara News

Karnataka Budget 2023: ಟೆಂಪಲ್‌ ರನ್‌ಗೆ ಬ್ರೇಕ್‌, ರಾಹುಕಾಲದ ನಂತರ ಬಜೆಟ್‌; ಜನತೆಯೇ ಜನಾರ್ದನ ಎಂದ ಸಿದ್ದರಾಮಯ್ಯ

Siddaramaiah welcomes new legislators to CLP meeting

ಬೆಂಗಳೂರು: ಸಾಮಾನ್ಯವಾಗಿ ಬಜೆಟ್‌ (Karnataka Budget 2023) ಮಂಡನೆಗೂ ಮುನ್ನ ದೇವಸ್ಥಾನಕ್ಕೆ ತೆರಳುವ ಸಂಪ್ರದಾಯಕ್ಕೆ ಸಿಎಂ ಸಿದ್ದರಾಮಯ್ಯ ಬ್ರೇಕ್‌ ಹಾಕಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಎರಡು ಬಜೆಟ್‌ ಮಂಡಿಸುವ ಮೊದಲು ಆರ್. ಟಿ. ನಗರದ ನಂಜುಂಡೇಶ್ವರ ದೇವಸ್ಥಾನ, ಬಾಲಬ್ರೂಯಿಯ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಸಿದ್ದರಾಮಯ್ಯ ನೇರವಾಗಿ ವಿಧಾನಸೌಧದ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಿದರು.

ಸಿದ್ದರಾಮಯ್ಯ ತಾವು ನಾಸ್ತಿಕನಲ್ಲ ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಆದರೆ ಮೂಢನಂಬಿಕೆಗಳನ್ನು ವಿರೋಧಿಸುತ್ತೇನೆ ಎನ್ನುತ್ತಾರೆ. ಆದರೆ ಈ ಬಾರಿ ಬಜೆಟ್‌ ಮಂಡನೆಯನ್ನೂ ರಾಹುಕಾಲ ಕಳೆದೇ ಇರಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಬಜೆಟ್‌ ಮಂಡನೆಯಾಗುತ್ತಿರುವ ಶುಕ್ರವಾರ ಬೆಳಗ್ಗೆ 10-30ರಿಂದ 12.0೦ ವರೆಗೆ ರಾಹುಕಾಲವಿದೆ. ಸಿದ್ದರಾಮಯ್ಯ ಬಜೆಟ್‌ ಮಂಡನೆಯನ್ನು ಸರಿಯಾಗಿ 12 ಗಂಟೆಗೆ ಮಾಡುವುದಾಗಿ ಹೇಳಿದ್ದಾರೆ.

ಈ ಹಿಂದೆಯೂ ಅನೇಕ ಸಿಎಂಗಳು ಶುಕ್ರವಾರವೇ ಬಜೆಟ್‌ ಮಂಡನೆ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು 2022ರಲ್ಲಿ ರಾಹುಕಾಲ ಕಳೆದ ನಂತರ 12.30ಕ್ಕೆ ಬಜೆಟ್‌ ಮಂಡನೆ ಮಾಡಿದ್ದರು. 2023ರಲ್ಲಿ ರಾಹುಕಾಲ ಆರಂಭಕ್ಕೂ 15ನಿಮಿಷ ಮೊದಲು ಅಂದರೆ 10.15ಕ್ಕೆ ಬಜೆಟ್‌ ಮಂಡನೆ ಆರಂಭಿಸಿದ್ದರು. ಇದೀಗ ಸಿದ್ದರಾಮಯ್ಯ ಸಹ 12 ಗಂಟೆಗೆ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ.

ಜನತೆಯೇ ಜನಾರ್ದ ಎಂದ ಸಿಎಂ
ಬಜೆಟ್‌ ಮಂಡನೆಗೂ ಮುನ್ನ ಟ್ವೀಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ, ಜನತೆಯೇ ಜನಾರ್ದನ ಎಂದಿದ್ದಾರೆ.

ನನ್ನ ಪ್ರೀತಿಯ ಕನ್ನಡಿಗ ಬಂಧುಗಳೇ, ಜನತೆಯೇ ನನ್ನ ಪಾಲಿನ ಜನಾರ್ಧನರು. ಇನ್ನು ಕೆಲವೇ ಹೊತ್ತಿನಲ್ಲಿ ನನ್ನ ಹದಿನಾಲ್ಕನೇ ಬಜೆಟ್ ಮಂಡಿಸಲಿದ್ದೇನೆ. ನನ್ನ ಮತ್ತು ನನ್ನ ಸರ್ಕಾರದ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ. ನನ್ನ ಹಿಂದಿನ ಎಲ್ಲ ಬಜೆಟ್ ಗಳಲ್ಲಿ ‘ಸರ್ವರಿಗೂ ಸಮಪಾಲು, ಸಮಬಾಳು’ ಎಂಬ ಮೂಲಮಂತ್ರದ ‘ಕರ್ನಾಟಕ ಮಾದರಿ’ಯ ಆಡಳಿತವನ್ನು ನೀಡುವ ಪ್ರಯತ್ನ ಮಾಡುತ್ತಾ ಬಂದಿದ್ದೆ. ಪ್ರಸ್ತುತ ಮಂಡಿಸುತ್ತಿರುವ ಆಯವ್ಯಯ ಪತ್ರದಲ್ಲಿ ಈ ಮಾದರಿಯನ್ನು ಇನ್ನಷ್ಟು ಆಳವಾಗಿಸುವ, ವಿಸ್ತಾರವಾಗಿಸುವ ಪ್ರಯತ್ನ ಮಾಡುತ್ತೇನೆ. ರಾಜಕೀಯ ಪ್ರೇರಿತ ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡಬೇಡಿ. ನುಡಿದಂತೆಯೇ ನಡೆದಿದ್ದೇನೆ, ಮುಂದೆಯೂ ನಡೆಯುತ್ತೇನೆ. ನಿಮ್ಮ ನಂಬಿಕೆ-ವಿಶ್ವಾಸಗಳನ್ನು ಹುಸಿಗೊಳಿಸುವುದಿಲ್ಲ. ಇದು ನಾನು ನೀಡುವ ಅತ್ಯುನ್ನತ ಗ್ಯಾರಂಟಿ ಎಂದಿದ್ದಾರೆ.

Exit mobile version