ಬೆಂಗಳೂರು: ಕೆಎಂಎಫ್ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆ (Nandini Milk Price hike) ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದ್ದು, ಆಗಸ್ಟ್ 1ರಿಂದ ನೂತನ ದರ ಜಾರಿಗೆ ಬರಲಿದೆ. ಕಳೆದ ವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ (Siddaramaiah Cabinet) ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಇದಲ್ಲದೆ, ಬಹು ಕುತೂಹಲಕ್ಕೆ ಕಾರಣವಾಗಿದ್ದ “ಶಾಸಕರ ಅಸಮಾಧಾನ”, ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣವನ್ನು ಕೈಬಿಡುವ ಪ್ರಸ್ತಾಪ ಚರ್ಚೆಗೆ ಬಂದಿಲ್ಲ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ಇಂದಿನ ಸಚಿವ ಸಂಪುಟ ಸಭೆಯಲ್ಲಿ 16 ವಿಷಯಗಳ ಬಗ್ಗೆ ಪರಿಶೀಲನೆ ಕೈ ತೆಗೆದುಕೊಳ್ಳಲಾಗಿತ್ತು. ಈ ವೇಳೆ ಮೊಟ್ಟೆ ವಿತರಣೆ (Egg distribution), ಎಪಿಎಂಸಿಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ (Infrastructure development in APMCs) ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಿಗೆ ಒಪ್ಪಿಗೆ ಪಡೆಯಲಾಗಿದೆ ಎಂದು ತಿಳಿಸಿದರು.
ಸಚಿವ ಸಂಪುಟದ ಪ್ರಮುಖ ನಿರ್ಣಯಗಳು
- ಸಹಕಾರ ಇಲಾಖೆಯಲ್ಲಿ ಆರೈಡಿಎಫ್ ಯೋಜನೆಯಡಿಯಲ್ಲಿ ಎಪಿಎಂಸಿಗಳಲ್ಲಿ ರಸ್ತೆ ಮಾಡಲು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ 130 ಕೋಟಿ ಮಂಜೂರು ಮಾಡಲು ಅನುಮೋದನೆ.
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ವಿಭಾಗವಾರು ಮೊಟೆ ವಿತರಣೆ ಮಾಡಲು ನಿರ್ಧಾರ
- ಆಜಾದಿ ಕಿ ಅಮೃತ್ ಮಹೋತ್ಸವದ (Azadi Ki Amrit Mahotsav) ಭಾಗವಾಗಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 67 ಸಜಾ ಕೈದಿಗಳ ಬಿಡುಗಡೆಗೆ ನಿರ್ಧಾರ
- ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಧಾಮಗಳ ಸುತ್ತಮುತ್ತಲಿನ ಪ್ರದೇಶ ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆ ಮಾಡುವುದು ಅಧ್ಯಯನಕ್ಕೆ ಸಚಿವ ಸಂಪುಟ ಉಪ ಸಮಿತಿಯ ರಚನೆ
- ಭಾರತ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಸನ್ನಡತೆಯ 67 ಶಿಕ್ಷಾ ಬಂಧಿಗಳ ಬಿಡುಗಡೆಗೆ ಸಂಪುಟದ ಒಪ್ಪಿಗೆ
- ಶಿವಾಜಿನಗರದ ಅಟಲ್ ವೈದ್ಯಕೀಯ ಕಾಲೇಜಿನಲ್ಲಿ 22.70 ಕೋಟಿ ಅಂದಾಜು ಮೊತ್ತದಲ್ಲಿ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
- ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನೆಫ್ರೋ ಯೂರಾಲಜಿಯಲ್ಲಿ ಅನೆಕ್ಸ್ ಕಟ್ಟಡವು 26 ಕೋಟಿ ರೂಪಾಯಿ ಅಂದಾಜು ಮೊತ್ತದಲ್ಲಿ ನಿರ್ಮಾಣ
- ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಪುಟ ಅನುಮೋದನೆ
- 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಕಿರಿಯ ಶ್ರೇಣಿ ಹುದ್ದೆಯಲ್ಲಿ ಕಾರ್ಯನಿರ್ವಾಹಕರಾಗಿರುವ ಡಾ. ಮೈತ್ರಿಯವರಿಗೆ ಸೂಪರ್ ನ್ಯೂಮರರಿ ಹುದ್ದೆ ಸೃಜಿಸುವ ಮನವಿ ಪುರಸ್ಕಾರ
- ರಾಷ್ಟ್ರೀಯ ವನ್ಯಧಾಮಗಳ ಸುತ್ತಮುತ್ತ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವಂತೆ ಕೇಂದ್ರಕ್ಕೆ ಕೋರಲು ಸಚಿವ ಸಂಪುಟ ಉಪಸಮಿತಿ ರಚನೆಗೆ ನಿರ್ಧಾರ
- ಲೋಕೋಪಯೋಗಿ ಇಲಾಖೆಯಲ್ಲಿ ಹೊಸ ಪ್ರಾಧಿಕಾರ ರಚನೆಗೆ ಒಪ್ಪಿಗೆ
- ಕರ್ನಾಟಕ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನಿರ್ಧಾರ
- ರಾಜ್ಯದ ಹಲವೆಡೆ ಒತ್ತುವರಿದಾರ ಕಲ್ಲು ಗಣಿಗಾರಿಕೆ ಮಾಲೀಕರಿಂದ ಒಮ್ಮೆಗೆ ದಂಡ ಕಟ್ಟಿಸಿಕೊಳ್ಳಲು ನಿರ್ಣಯ, ಒತ್ತುವರಿದಾರರಿಂದ 6105 ಕೋಟಿ ರೂ. ದಂಡ ಮತ್ತು ರಾಯಧನ ಸಂಗ್ರಹಕ್ಕೆ ಸರ್ಕಾರ ನಿರ್ಧಾರ. ಇದಕ್ಕೆ ಸಂಪುಟ ಉಪಸಮಿತಿ ರಚನೆಗೆ ಸರ್ಕಾರ ನಿರ್ಣಯ
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಹಿಂದುಳಿದ ವರ್ಗಗಳ ಜಾತಿ ಪಟ್ಟಿಯ ಪ್ರವರ್ಗ 3ಎ ಯಲ್ಲಿ ದಾಖಲಾಗಿರುವ ಕೊಡಗರು ಎಂಬ ಹೆಸರನ್ನು ಕೊಡವ ಮತ್ತು ಕೊಡವರು ಎಂದು ಬದಲಾಯಿಸಲು ಅನುಮೋದನೆ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮೊಟ್ಟೆ ವಿತರಣೆ ವಿಚಾರವಾಗಿ ವಿಭಾಗವಾರು ಮೊಟ್ಟೆ ಖರೀದಿಸಿ ವಿತರಿಸುವ ಬಗ್ಗೆ ನಿರ್ಣಯ. ಕೆಟಿಪಿಪಿ ಆ್ಯಕ್ಟ್ ಪಾಲಿಸಿ ವ್ಯವಸ್ಥೆಯಲ್ಲಿ ಸುಧಾರಣೆ. ಈ ಹಿಂದೆ ಸ್ಥಳೀಯವಾಗಿ ಮೊಟ್ಟೆ ಖರೀದಿಗೆ ಅವಕಾಶ ಇತ್ತು. ಈಗ ಟೆಂಡರ್ ಮೂಲಕ ಖರೀದಿಗೆ ಒಪ್ಪಿಗೆ. ಸಮಗ್ರ ಶಿಶು ಯೋಜನೆಯಡಿ 2023-24ನೇ ಸಾಲಿಗೆ ಪ್ರತಿ ಮೊಟ್ಟೆಗೆ 6 ರೂಪಾಯಿ ಮೀರದಂತೆ ಖರೀದಿ ಮಾಡಲು ಅನುಮೋದನೆ
ಇದನ್ನೂ ಓದಿ: Karnataka Politics : ಬಿಎಸ್‌ವೈ-ಎಚ್‌ಡಿಕೆ ಟೂರ್; ಯುರೋಪ್‌ನಲ್ಲಿ ಕರ್ನಾಟಕ ಪಾಲಿಟಿಕ್ಸ್!
ಚರ್ಚೆಯಾಗದ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಾಟೆ ಪ್ರಕರಣ!
2021ರ ಆಗಸ್ಟ್‌ನಲ್ಲಿ ನಡೆದಿದ್ದ ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಖುಲಾಸೆ ಮಾಡುವ ನಿಟ್ಟಿನಲ್ಲಿ ಶಾಸಕ ತನ್ವೀರ್ ಸೇಠ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಆಧಾರವಾಗಿಟ್ಟುಕೊಂಡಿದ್ದ ಗೃಹ ಸಚಿವ ಪರಮೇಶ್ವರ್, ಗೃಹ ಹಾಗೂ ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದು ವ್ಯಾಪಕ ಟೀಕೆಗೂ ಗುರಿಯಾಗಿತ್ತು. ಅಲ್ಲದೆ, ಈ ಘಟನೆಯಲ್ಲಿ ಆಗಿನ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೂ ಬೆಂಕಿ ಹಚ್ಚಲಾಗಿತ್ತು. ಈಗ ಪ್ರಕರಣವನ್ನು ಕೈಬಿಡಲು ಹೊರಟಿರುವುದರ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈವಾಡ ಇದೆ ಎಂದು ಅವರು ನೇರವಾಗಿ ಆರೋಪ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ವಿಚಾರ ಚರ್ಚೆಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಹೊರತುಪಡಿಸಿ ಉಳಿದ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಹೇಳಲಾಗಿದೆ.