Site icon Vistara News

Karnataka Election 2023: ನಮಗಂತೂ ಧಮ್‌, ತಾಕತ್ತು ಇಲ್ಲ; ಬೊಮ್ಮಾಯಿಯವರೇ ನಿಮಗೆ ಧಮ್‌ ಇದೆಯಲ್ಲವೇ? ಬನ್ನಿ ಚರ್ಚೆಗೆ ಎಂದ ಸಿದ್ದರಾಮಯ್ಯ

will oppose the RSS till I die Manusmriti to be implemented in the name of Hindutva says Siddaramaiah

ಬಾಗಲಕೋಟೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಳ ಕೆಲಸ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಏನ್ ಮಾಡಿದ್ದೀಯಯ್ಯ ಬೊಮ್ಮಾಯಿ? ಬಿಜೆಪಿಯವರು ೬೦೦ ಭರವಸೆಗಳನ್ನು ಕೊಟ್ಟಿದ್ದರು. ಆದರೆ, ೪ ವರ್ಷದಲ್ಲಿ ೫೧ ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ. ಇನ್ನೂ ೫೫೦ ಭರವಸೆಗಳನ್ನು ಯಾಕೆ ಈಡೇರಿಸಲಿಲ್ಲ? ಇದನ್ನೇ ಅಸೆಂಬ್ಲಿಯಲ್ಲಿ ಪ್ರಶ್ನೆ ಮಾಡಿದೆ. ಈ ಬಗ್ಗೆ ಚರ್ಚೆ ಆಗಲಿ ಎಂದು ಹೇಳಿಕೊಂಡೆ. ಬೊಮ್ಮಾಯಿ ಧಮ್ ಇದ್ರೆ, ತಾಕತ್ತಿದ್ರೆ ಎಂದೆಲ್ಲ ಹೇಳುತ್ತಾರೆ. ನಮಗೆ ಧಮ್ ಇಲ್ಲ, ತಾಕತ್ತಿಲ್ಲ. ನಿಮಗೆ ಧಮ್ ಇದಿಯಲ್ಲವೇ? ಹಾಗಿದ್ದರೆ ವೇದಿಕೆಗೆ ಬನ್ನಿ ಚರ್ಚೆ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು. ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ವಾಕ್ಸಮರಗಳೂ ತಾರಕಕ್ಕೇರುತ್ತಿವೆ. ಸವಾಲುಗಳು, ವಾಗ್ವಾದಗಳೂ ಹೆಚ್ಚುತ್ತಿವೆ. ಈಗ ಸಿಎಂಗೆ ಮಾಜಿ ಸಿಎಂ ಸವಾಲು ಹಾಕಿದ್ದಾರೆ.

ಜಮಖಂಡಿಯಲ್ಲಿ ಸೋಮವಾರ (ಫೆ. ೨೭) ಏರ್ಪಡಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಕೋಮುವಾದಿ ಜತೆ ಕೈ ಸೇರಿಸಬಾರದು ಎಂದು ೩೭ ಜನ ಇದ್ದರೂ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಜತೆ ಸೇರಿ ಸರ್ಕಾರವನ್ನು ರಚನೆ ಮಾಡಿದೆವು. ಆ ಪುಣ್ಯಾತ್ಮ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಹೋಗಿ ಕುಳಿತುಕೊಂಡರು. ಜನರ ಕೈಗೆ ಸರಿಯಾಗಿ ಸಿಗಲಿಲ್ಲ. ಹಾಗಾಗಿ ಕುಮಾರಸ್ವಾಮಿ ಸರ್ಕಾರ ಬಿತ್ತು. ಸರ್ಕಾರ ಬೀಳೋಕೆ ಸಿದ್ದರಾಮಯ್ಯ ಕಾರಣವೆಂದು ಹೇಳಿದರು. ಇವರು ಹೇಗೆ ಅಂದರೆ ಕೊಟ್ಟ ಕುದುರೆಯನ್ನು ಏರದವ ಶೂರನೂ ಅಲ್ಲ, ವೀರನೂ ಅಲ್ಲ ಅಂದ ಹಾಗಾಯ್ತು ಎಂದು ಕಿಡಿಕಾರಿದರು.

ಇದನ್ನೂ ಓದಿ: Modi at Belagavi: ಕುಂದಾನಗರಿಯಲ್ಲಿ ಮೋದಿ ಮೆಗಾ ರೋಡ್‌ ಶೋ; ಪ್ರಧಾನಿಗೆ ಹೂಮಳೆಯ ಸ್ವಾಗತ, ಮೊಳಗಿದ ಜಯಘೋಷ

ಇದನ್ನೇ ಬಿಜೆಪಿಯವರು ಕಾಯುತ್ತಾ ಇದ್ದರು. ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎಂದು ನಮ್ಮ ಕಡೆ ಒಂದು ಗಾಧೆ ಮಾತಿದೆ. ಅದರಂತೆ ಯಡಿಯೂರಪ್ಪ ದುಡ್ಡು ಇಟ್ಕೊಂಡು ಕಾಯುತ್ತಾ ಇದ್ದರು. ಒಬ್ಬೊಬ್ಬರಿಗೆ ೩೦ ಕೋಟಿ ರೂಪಾಯಿ ಕೊಟ್ಟು ೧೭ ಜನ ಶಾಸಕರನ್ನು ಖರೀದಿ ಮಾಡಿ ಆಪರೇಷನ್ ಕಮಲ ಮಾಡಿದರು. ಬಳಿಕ ಚುನಾವಣೆ ಮಾಡಿ ೪೦ ಕೋಟಿ ರೂಪಾಯಿ ಖರ್ಚು ಮಾಡಿ ಗೆದ್ದು, ಅನೈತಿಕ ಸರ್ಕಾರವನ್ನು ರಚನೆ ಮಾಡಿದರು. ಹೀಗೆ ಗೆದ್ದವರು ಒಳ್ಳೆಯ ಸರ್ಕಾರ ಕೊಡಲು ಆಗುತ್ತದೆಯೇ? ಎಂದು ಪ್ರಶ್ನೆ ಮಾಡಿದರು.

ಸಿಎಂ ಬೊಮ್ಮಾಯಿ ಏನೇ ಹೇಳಬಹುದು. ಅಧಿಕಾರಕ್ಕೆ ಬಂದು ೪ ವರ್ಷ ಆದರೂ ಒಂದು ಮನೆ ಕೊಟ್ಟಿದ್ದಾರಾ? ಬಿಜೆಪಿ ಅಧಿಕಾರದಲ್ಲಿ ಇರೋಕೆ ಲಾಯಕ್ಕಾ? ನಾಲಾಯಕ್ಕಾ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ, ನಾವು ಕಟ್ಟಿದ ಮನೆಗಳನ್ನು ಗಿರಾಕಿಗಳು ಲಾಕ್ ಮಾಡಿದ್ರು. ಸಿಎಂ ಬೊಮ್ಮಾಯಿ ಬಹಳ ಕೆಲಸ ಮಾಡಿದ್ದೇವೆ ಅಂತಾರೆ. ಏನ್‌ ಮಾಡಿದ್ದೀರಾ ಬೊಮ್ಮಾಯಿ? ಬಿಜೆಪಿ ಸರ್ಕಾರ ಇವತ್ತಿನವರೆಗೂ ಒಂದು ರೂಪಾಯಿ ಸಾಲ ಮನ್ನಾ ಮಾಡಿದೆಯಾ? ಹಾಗಾದರೆ ಯಾಕೆ ಸಾಲಮನ್ನಾ ಮಾಡುತ್ತೇವೆ ಎಂದು ಹೇಗೆ ಹೇಳಿದಿರಿ? ಬಿಜೆಪಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಸುಳ್ಳು ಇವರ ಮನೆ ದೇವರು ಎಂದು ಸಿದ್ದರಾಮಯ್ಯ ಟೀಕಿಸಿದರು.

ಈಗ ಹೇಗಾದರೂ ಅಧಿಕಾರಕ್ಕೆ ಬರಬೇಕು ಎಂದು ಕೇಂದ್ರ ಬಿಜೆಪಿ ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಮೇಲಿಂದ ಮೇಲೆ ರಾಜ್ಯಕ್ಕೆ ಕರೆತರುತ್ತಿದ್ದಾರೆ. ನಾವು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕೆಂದು ಕಾನೂನು ತಿದ್ದುಪಡಿ ಮಾಡಿದೆವು. ಆದರೆ, ಹಕ್ಕುಪತ್ರ ಕೊಡುವುದಕ್ಕೆ ದೆಹಲಿಯಿಂದ ಬಂದಿದ್ದಾರೆ. ಎಲ್ಲ ಹಕ್ಕು ಪತ್ರ ಸಿದ್ಧವಾದ ಮೇಲೆ ಹಂಚಲು ಇವರು ಬಂದಿದ್ದಾರೆ. ಒಬ್ಬ ಪ್ರಧಾನಿಯಾದವರು ಬೇರೆಯವರು ಮಾಡಿದ್ದನ್ನು ಎಂದು ಹೇಳಿಕೊಳ್ಳುತ್ತಾರೆ. ಇಂಥವರಿಗೆ ಜನರು ಬುದ್ಧಿ ಕಲಿಸಬೇಕಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಇದನ್ನೂ ಓದಿ: Saturn Astrology : ಈ ಮೂರು ರಾಶಿಯವರಿಗೆ ಸದಾ ಇರಲಿದೆ ಶನಿ ದೇವರ ಕೃಪೆ!

ಅಧಿಕಾರಕ್ಕೆ ಬಂದರೆ ೧೫ ಲಕ್ಷ ಕೊಡುತ್ತೇನೆ ಎಂದು ಹೇಳಿದರು. ೧೫ ಪೈಸೆಯನ್ನಾದರೂ ಕೊಟ್ಟರೇ? ಯುವಕರಿಗೆ ವರ್ಷಕ್ಕೆ ೨ ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿದರು. ಅಧಿಕಾರಕ್ಕೆ ಬಂದು ೯ ವರ್ಷ ಆಯ್ತು ೧೮ ಕೋಟಿ ಉದ್ಯೋಗ ಸೃಷ್ಟಿ ಆಯಿತಾ? ಉದ್ಯೋಗ ಕೊಡಿ ಎಂದು ಕೇಳಿದ ಯುವಕರಿಗೆ ಪಕೋಡವನ್ನು ಮಾರಲು ಹೋಗಿ ಎಂದು ಸಹ ಮೋದಿ ಹೇಳಿದ್ದರು. ಇನ್ನು ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದು ಹೇಳಿದ್ದರು. ಅದು ಆಗಿದೆಯಾ? ಆದಾಯದ ಬದಲಿಗೆ ರೈತರ ಸಾಲ ದ್ವಿಗುಣ ಆಗಿದೆ. ಅಚ್ಚೇ ದಿನ್ ಆಯೇಂಗೆ ಅಂದ್ರು, ಬಂತಾ ಅಚ್ಚೇ ದಿನ್? ಇವರು ಬಂದ ಮೇಲೆ ಕೆಟ್ಟ ದಿನಗಳು ಬಂದವು. ಪೆಟ್ರೋಲ್, ಡೀಸೆಲ್, ಗ್ಯಾಸ್, ಎಣ್ಣೆ, ಕಬ್ಬಿಣ, ಸಿಮೆಂಟ್ ಬೆಲೆಗಳು ಗಗನಕ್ಕೇರಿವೆ. ಬೆಲೆ ಏರಿಕೆ ಜತೆಗೆ ಜಿಎಸ್‌ಟಿ ಬರೆ ಹಾಕಿದ್ದಾರೆ. ಈಗ ಮೊಸರು, ಮಜ್ಜಿಗೆ, ಪೆನ್, ಪುಸ್ತಕಕ್ಕೂ ಜಿಎಸ್‌ಟಿ ಹಾಕಿದ್ದಾರೆ. ಇವ್ರ ಮನೆ ಹಾಳಾಗಾ ಎಂದು ಸಿದ್ದರಾಮಯ್ಯ ಗುಡುಗಿದರು.

Exit mobile version